ಯೋಗೇಶ್ವರ್ ಮತದಾನ ಪ್ರಚಾರ ಬಿರುಸು
ಕ.ಪ್ರ.ವಾರ್ತೆ ಚನ್ನಪಟ್ಟಣ ಮಾ.26
ಯೋಗೇಶ್ವರ್ ಸೇರ್ಪಡೆಗೆ ಕೈಪಾಳಯದ ವರಿಷ್ಠರು ಹಸಿರು ನಿಶಾನೆ ನೀಡುತ್ತಿದ್ದಂತೆ, ಸೈನಿಕನ ಮತಸಮರ ಬಿರುಸುಗೊಂಡಿದೆ. ಅಲ್ಲದೆ, ಮಂಗಳವಾರ ಪಟ್ಟಣದ ಕೆಲವೆಡೆ ಬಿರುಸಿನ ಪ್ರಚಾರ ನಡೆಸಿದರು.
ಡೊಂ ಲೈಟ್ ಸರ್ಕಲ್, ಮಂಡಿಪೇಟೆ ಮುಂತಾದ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿದ ಯೋಗೇಶ್ವರ್ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಕಾಂಗ್ರೆಸ್ಗೆ ಬಂದಿದ್ದು, ಕ್ಷೇತ್ರದ ಮತದಾರರು ನನ್ನನ್ನು ಬೆಂಬಲಿಸಿ ಎಂದು ಮನವಿ ಮಾಡಿದರು. ನಾನು ಸಚಿವನಾಗಿ ತಾಲೂಕಿನ ಅಭಿವೃದ್ಧಿಗೆ ಸಾಕಷ್ಟು ಹಣಕಾಸು ತಂದಿದ್ದೇನೆ. ಇದೆಲ್ಲ ಅನುಷ್ಠಾನಗೊಳಿಸಲು ರಾಜಕೀಯ ಶಕ್ತಿ ಬೇಕಾಗಿದೆ. ಹೀಗಾಗಿ ಕಾಂಗ್ರೆಸ್ನಿಂದ ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ಅವರು ತಿಳಿಸಿದರು. ತಾಲೂಕಿನ ಸಮಗ್ರ ನೀರಾವರಿ ಯೋಜನೆ ನನ್ನ ಗುರಿಯಾಗಿದ್ದು, ಈಗಾಗಲೇ ಕಣ್ವ ಏತ ನೀರಾವರಿ ಯೋಜನೆ ಕಾಮಗಾರಿ ಆರಂಭಗೊಂಡಿದೆ. ಮುಂದಿನ 6 ತಿಂಗಳೊಳಗೆ ಕೆಲ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಆರಂಭ ಗೊಳ್ಳಲಿದ್ದು, ಇಷ್ಟೆಲ್ಲ ಕೆಲಸ ಯಾವುದೇ ಅಡ್ಡಿ ಇಲ್ಲದೆ ನಡೆಯಬೇಕಾದರೆ ನಾನು ಅಧಿಕಾರದಲ್ಲಿರಬೇಕು ಅದಕ್ಕಾಗಿ ಈ ಬಾರಿಯ ಚುನಾವಣೆಯಲ್ಲಿ ಮತದಾರರು ನನಗೆ ಆಶೀರ್ವದಿಸಬೇಕು ಎಂದರು. ಪಟ್ಟಣದ ಮಂಡಿಪೇಟೆಯಲ್ಲಿ ಕಾಮನಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಉತ್ಸವಕ್ಕೆ ಅವರು ಚಾಲನೆ ನೀಡಿದರು. ಕಾಮನಹಬ್ಬದ ಆಚರಣಾ ಸಮಿತಿಯ ವತಿಯಿಂದ ಯೋಗೇಶ್ವರ್ ಅವರನ್ನು ಸನ್ಮಾನಿಸಲಾಯಿತು.
ಕಾಂಗ್ರೆಸ್ಗೆ ಸೇರ್ಪಡೆ: ಇದೇ ಸಂದರ್ಭದಲ್ಲಿ ಜೆಡಿಎಸ್ನ ಮಾಜಿ ನಗರಸಭಾ ಸದಸ್ಯೆ ಸಾಕಮ್ಮ ದೇವರಾಜು ಕಾಂಗ್ರೆಸ್ಗೆ ಸೇರ್ಪಡೆಗೊಂಡರು. ಕಳೆದ ನಗರಸಭಾ ಚುನಾವಣೆಯಲ್ಲಿ ಪಕ್ಷದಿಂದ ಟಿಕೇಟ್ ಬಯಸಿದ್ದ ಇವರಿಗೆ ಟಿಕೇಟ್ ನಿರಾಕರಿಸಲಾಗಿತ್ತು. ಚುನಾವಣೆ ಸಮಯದಲ್ಲಿ ಜೆಡಿಎಸ್ ಮತ್ತು ಸಾಕಮ್ಮ ದೇವರಾಜು ಮಗನ ನಡುವೆ ಜಗಳ ನಡೆದು ಪರಸ್ಪರ ಕೈಮಿಲಾಯಿಸಿದ್ದರು. ಜೆಡಿಎಸ್ನಿಂದ ದೂರಾಗಿದ್ದ ಸಾಕಮ್ಮ ಇದೀಗ ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.