ಕ.ಪ್ರ. ವಾರ್ತೆ ರಾಮನಗರ ಮಾ.29
ಪದೇ ಪದೇ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಬದಲಾವಣೆ ಶಾಪಕ್ಕೆ ಗುರಿಯಾಗಿರುವ ರಾಮನಗರದಲ್ಲಿ ಇದೀಗ ಮತ್ತೊಂದು ಬದಲಾವಣೆ ಪರ್ವ. 24ತಾಸಿನ ಅಂತರದಲ್ಲಿ ಈ ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ವಜಾಗೊಂಡರೆ, ಜಿಲ್ಲಾಧಿಕಾರಿ ಶ್ರೀರಾಮರೆಡ್ಡಿ ಎತ್ತಂಗಡಿಯಾಗಿದೆ.
ಆರು ವರ್ಷ ತುಂಬುವ ಮುನ್ನವೇ ಈ ಜಿಲ್ಲೆ 7 ಉಸ್ತುವಾರಿ ಸಚಿವರ ದರ್ಬಾರ್ ಕಂಡಿದ್ದು, 8ನೇ ಬದಲಾವಣೆಗೆ ಜಾಗ ಖಾಲಿ ಇದೆ. ಇನ್ನು, ಜಿಲ್ಲಾಧಿಕಾರಿಗಳ ಬದಲಾಣೆಯಲ್ಲಿ ರಾಮನಗರ ದಾಖಲೆ ಮಾಡಿದೆ. ಈ ಹುದ್ದೆ ಅಲಂಕರಿಸಿದವರ ಸಂಖ್ಯೆ ಬರೋಬ್ಬರಿ ಡಜನ್ ಆಗಿದೆ. ನಾಮಫಲಕದಲ್ಲಿ ನೂತನ ಡಿಸಿ ನವೀನ್‌ರಾಜ್ ಸಿಂಗ್ ಹೆಸರು 12ನೆಯದು.
ಅಭಿವೃದ್ಧಿಗೆ ಗ್ರಹಣ: ಕುಮಾರಸ್ವಾಮಿ ಅಧಿಕಾರಾವಧಿಯಲ್ಲಿ ರಚನೆಯಾದ ರಾಮನಗರ ಜಿಲ್ಲೆಗೆ ಅನುದಾನದ ಹೊಳೆಯೇ ಹರಿದು ಬಂದಿತ್ತು. ನಂತರದ ಬಿಜೆಪಿ ಸರ್ಕಾರ ಸೀಮಿತ ಕಾರ್ಯಕ್ರಮಗಳ ಹೊರತಾಗಿ, ಜಿಲ್ಲೆಯ ಅಭಿ ವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಮೇಲಿಂದ ಮೇಲೆ ಇಲ್ಲಿನ ಉಸ್ತುವಾರಿ ಸಚಿವ ಮತ್ತು ಜಿಲ್ಲಾಧಿಕಾರಿ ಬದಲಿಸಿದ್ದೇ ಸರ್ಕಾರದ ಸಾಧನೆ.
ಇಲ್ಲಿಗೆ ಬಂದ ಯಾವೊಬ್ಬ ಉಸ್ತುವಾರಿ ಸಚಿವ ಮತ್ತು ಜಿಲ್ಲಾಧಿಕಾರಿಯೂ ಜನಮಾನಸದಲ್ಲಿ ಉಳಿಯುವಂತಹ ಕೆಲಸ ಮಾಡಿದ ನಿದರ್ಶನವಿಲ್ಲ. ಹುಚ್ಚಿ ಮದ್ವೇಲಿ ಉಂಡೋನೇ ಜಾಣ ಎನ್ನುವಂತೆ ಸಿಕ್ಕಷ್ಟು ಬಾಚಿಕೊಂಡು, ಸರ್ಕಾರಿ ಜಾಗವನ್ನು ಪರಭಾರೆ ಮಾಡಿ ಜಿಲ್ಲೆಗೆ ಕಂಟಕರಾದವರೇ ಹೆಚ್ಚು.
ಕಾಳಜಿ ವಹಿಸಲಿಲ್ಲ: ಉಸ್ತುವಾರಿ ಸಚಿವರಾದವರು ರಾಷ್ಟ್ರೀಯ, ನಾಡ ಹಬ್ಬಗಳಲ್ಲಿ ಧ್ವಜಾರೋಹಣ ಮತ್ತು ಭಾಷಣಕ್ಕೆ ಸೀಮಿತರಾದರೆ ಹೊರತು, ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ಕಾಳಜಿ ವಹಿಸಲೇ ಇಲ್ಲ. ಅಧಿಕಾರಿಗಳ ತಲೆ ಎಣಿಸಿ, ತಮ್ಮ ಬೇಳೆ ಬೇಯಿಸಿಕೊಳ್ಳಲು ಕಾಟಾಚಾರಕ್ಕೆ ಕೆಡಿಪಿ ಸಭೆ ನಡೆಸಿದ್ದಾರಷ್ಟೆ.
ಈ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳು ದಂಧೆ, ಕಲ್ಲು ಗಣಿಗಾರಿಕೆ, ರಿಯಲ್ ಎಸ್ಟೇಟ್ ಮಾಫಿಯಾ ನಿಯಂತ್ರಿಸಲು ಮುಂದಾಗಲಿಲ್ಲ. ಜಿಲ್ಲೆಯನ್ನು ಕಾಡುತ್ತಿರುವ ಕುಡಿಯುವ ನೀರಿನ ಬವಣೆ ನಿವಾರಣೆಗೆ ಶಾಶ್ವತ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿಲ್ಲ.
ಡಿಸಿಗಳಿಗೆ ಪುನರ್ವಸತಿ: ರಾಮನಗರದಲ್ಲಿ ಇದುವರೆಗೆ 2 ವರ್ಷ ತುಂಬಿಸಿದ ಜಿಲ್ಲಾಧಿಕಾರಿ ಯಾರೂ ಇಲ್ಲ. ಒಬ್ಬಿಬ್ಬರನ್ನು ಹೊರತುಪಡಿಸಿದರೆ ಬಹುತೇಕರ ಅಧಿಕಾರಾವಧಿ ಆರೇಳು ತಿಂಗಳಿಗೇ ಮೊಟಕಾಗಿದೆ. ಬಂದವರಲ್ಲಿ ಇಬ್ಬರಿಗೆ ನಿವೃತ್ತಿ ಅಂಚಿನಲ್ಲಿ ಈ ಜಿಲ್ಲೆ ಪುನರ್ವಸತಿ ಕೇಂದ್ರವಾಗಿತ್ತು. ಬಂದವರ ಪೈಕಿ ಒಬ್ಬರೂ ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಇರಲಿಲ್ಲ.
ಈ ಜಿಲ್ಲೆಯ ಆಗು-ಹೋಗು, ಸಮಸ್ಯೆಗಳ ಬಗ್ಗೆ ತಿಳಿಯುವುದಕ್ಕೆ ಕನಿಷ್ಠ 3-4 ತಿಂಗಳು ಬೇಕು. ಜಿಲ್ಲೆ ವಿಷಯ
ತಿಳಿದಾಯ್ತು ಎನ್ನುವಷ್ಟರಲ್ಲಿ ಎತ್ತಂಗಡಿ, ನಿವೃತ್ತಿ ಆಗಿರುತ್ತದೆ.
ಪ್ರಕರಣಗಳು ಬಾಕಿ: ಜಿಲ್ಲಾಧಿಕಾರಿ ಮತ್ತು ಅಧೀನ ಕಂದಾಯ ನ್ಯಾಯಾಲಯಗಳಲ್ಲಿ ಸಿವಿಲ್ ವ್ಯಾಜ್ಯ ಪ್ರಕರಣಗಳು ವಿಲೇವಾರಿ ಆಗದೆ ಭಾರಿ ಪ್ರಮಾಣದಲ್ಲಿ ಉಳಿಯುವಂತಾಗಲು ಜಿಲ್ಲಾಧಿಕಾರಿ ಹುದ್ದೆಯಲ್ಲಿ ಆಗಾಗ ಬದಲಾವಣೆ ಆಗುತ್ತಿರುವುದೇ ಪ್ರಮುಖ ಕಾರಣವಾಗಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಹೊರತಾಗಿ ರಾಜ್ಯದಲ್ಲೇ ರಾಮನಗರ ಪುಟ್ಟ ಜಿಲ್ಲೆ. ಆದರೆ, ಸಿವಿಲ್ ವ್ಯಾಜ್ಯಗಳ ಪ್ರಮಾಣ ಇಲ್ಲೇ ಅಧಿಕ.
ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ನಿಜವಾದ ಕೃಷಿಕರು, ಇಡುವಳಿದಾರರ ಕೆಲಸಗಳ್ಯಾವೂ ನಡೆಯುತ್ತಿಲ್ಲ. ಈ ಕಚೇರಿಗಳು ರಿಯಲ್ ಎಸ್ಟೇಟ್ ದಂಧೆಕೋರರು, ಭೂ ಕಬಳಿಕೆದಾರರ ಮುಷ್ಠಿಯಲ್ಲಿವೆ. ಪರಿಣಾಮ, ದಾಖಲೆಗಳೇ ಮಂಗಮಾಯ ಆಗುತ್ತಿದ್ದು, ಬಡ ರೈತರ ಶೋಷಣೆ ನಿರಂತರವಾಗಿದೆ. ಇದಕ್ಕೆ ರೈತ ಗಂಗಯ್ಯ ಆತ್ಮಹತ್ಯೆ ತಾಜಾ ನಿದರ್ಶನ. ಇದೆಲ್ಲಕ್ಕೂ ಅಂತ್ಯವಾಡಲು ದಕ್ಷರೊಬ್ಬರು ಪೂರ್ಣಾವಧಿ ಜಿಲ್ಲಾಧಿಕಾರಿ ಆಗಬೇಕಿದೆ.