ನೀರಿನ ಬರಕ್ಕೆ ಪ್ರಾಣಿಸಂಕಟ
ವಿಶೇಷ ವರದಿ
ಮೈಸೂರು ಭಾಗದ ಪ್ರಮುಖ ಜಲಾಶಯಗಳು ಬರಿದಾಗುತ್ತಿದ್ದು, ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿನ ಪ್ರಾಣಿಗಳು ಕುಡಿಯುವ ನೀರಿಗೆ ಹತ್ತಾರು ಕಿಮೀ ವಲಸೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ.
ಭೂಮಿಯ ತಾಪಮಾನ ಹೆಚ್ಚಿದಂತೆಲ್ಲಾ ಬಂಡೀಪುರ ಭಾಗದಲ್ಲಿ ಸುಮಾರು 300 ಕೆರೆಗಳು ಬರಿದಾಗಿವೆ. ಈ ಪೈಕಿ ಸುಮಾರು 20 ಕೆರೆಗಳಿಗೆ ಹುಲಿಗಳು ಮತ್ತು ಆನೆಗಳು ನೀರು ಕುಡಿಯಲು ಆಗಮಿಸುವುದು ಸಾಮಾನ್ಯ. ಈಗ ಆ ಎಲ್ಲಾ ಕೆರೆಗಳೂ ಬರಿದಾದ್ದರಿಂದ ಸಾಕಷ್ಟು ಸಂಖ್ಯೆಯ ಆನೆಗಳು ಮತ್ತು ಇತರ ಕೆಲವು ಪ್ರಾಣಿಗಳು ಕೇರಳ ಗಡಿ ದಾಟಿವೆ. ಆದ್ದರಿಂದ ಸುಮಾರು 2500ಕ್ಕೂ ಹೆಚ್ಚು ಆನೆಗಳು ಇರುವ ಬಂಡೀಪುರದಲ್ಲಿ ಅವುಗಳ ಸಂಖ್ಯೆ ಕ್ಷೀಣಿಸಿದೆ. ಉಳಿದ ಆನೆಗಳು ಈಗಾಗಲೇ ಕಬಿನಿ ಮತ್ತು ನುಗು ಜಲಾಶಯದ ಹಿನ್ನೀರಿನಲ್ಲಿ ಬೀಡುಬಿಟ್ಟಿದ್ದು, ಆ ಭಾಗದಲ್ಲಿಯೇ ಆಶ್ರಯ ಪಡೆದಿವೆ. ಆನೆಗಳಿಗೆ ಒಮ್ಮೆಗೆ ಸುಮಾರು 150 ರಿಂದ 200 ಲೀ. ನೀರು ಬೇಕಾಗುತ್ತದೆ. ಆದ್ದರಿಂದ ಇವು ಜಲಾಶಯದ ಹಿನ್ನೀರನ್ನು ಹೆಚ್ಚು ಅವಲಂಬಿಸಿವೆ. ಇದೇ ಹಾದಿಯನ್ನು ಅನೇಕ ಜಿಂಕೆಗಳೂ ಹಿಡಿದಿವೆ. ಆದರೆ, ಹೆಚ್ಚು ದೂರ ವಲಸೆ ಹೋಗಲಾರದ ವಯಸ್ಸಾದ ಮತ್ತು ಮರಿ ಜಿಂಕೆಗಳು ಬಂಡೀಪುರದಲ್ಲಿ ಉಳಿದಿವೆ. ಅಲ್ಲದೆ, ಕಡವೆ ಮುಂತಾದ ಪ್ರಾಣಿಗಳು ಹೆಚ್ಚು ವಲಸೆ ಹೋಗುತ್ತಿವೆ.
ಈ ಕಾರಣಕ್ಕೆ ಅರಣ್ಯ ಇಲಾಖೆಯು ಕಬಿನಿ ಮತ್ತು ನುಗು ಜಲಾಶಯದ ಹಿನ್ನೀರಿನಿಂದ ವಾರಕ್ಕೊಮ್ಮೆ 1 ಲಕ್ಷ ಲೀಟರ್ ನೀರನ್ನು ಪ್ರಮುಖ 20 ಕೆರೆಗಳಿಗೆ ತುಂಬುತ್ತಿದ್ದಾರೆ. ಹುಲಿಗಳಿಗೆ ಸುಮಾರು 1 ರಿಂದ 2 ಬಕೆಟ್ನಷ್ಟು ನೀರು ಸಿಕ್ಕರೆ ಸಾಕು. ಆ ಕಾರಣದಿಂದ ಹುಲಿಗಳು ವಲಸೆ ಹೋಗಿಲ್ಲ. ಕೇವಲ ಆನೆ, ಜಿಂಕೆ, ಕಡವೆ ಮುಂತಾದ ಪ್ರಾಣಿಗಳು ಮಾತ್ರ ವಲಸೆ ಹೋಗಿವೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.
ಮೃತಪಟ್ಟಿಲ್ಲ: ಅದೃಷ್ಟವಶಾತ್ ಇದುವರೆರೆಗೆ ನೀರಿಲ್ಲ ಎಂಬ ಕಾರಣಕ್ಕೆ ಯಾವ ಪ್ರಾಣಿಯೂ ಮೃತಪಟ್ಟ ಬಗ್ಗೆ ವರದಿಯಾಗಿಲ್ಲ. ಆದರೆ, ಬೇಸಿಗೆ ಅವಧಿ ಮುಂದುವರಿಯುವುದರಿಂದ ಆತಂಕ ಹೆಚ್ಚಾಗಿದೆ. ಈಗಲೂ ಮಳೆಯಾಗದಿದ್ದರೆ ಕನಿಷ್ಠ ಇನ್ನೂ ಒಂದೂವರೆ ತಿಂಗಳವರೆಗೆ ಹೀಗೆ ಕೆರೆಗಳಿಗೆ ನೀರು ತುಂಬ ಬೇಕಾದ ಪರಿಸ್ಥಿತಿ ಮುಂದುವರಿಯುತ್ತದೆ.
ರಾಜ್ಯದಲ್ಲಿ ವಾಡಿಕೆಯಂತೆ ಮಳೆ ಆದಲ್ಲಿ ಪ್ರಾಣಿಗಳಿಗೆ ನೀರಿನ ಸಮಸ್ಯೆ ಹೆಚ್ಚು ಕಾಡುವುದಿಲ್ಲ. ಒಮ್ಮೆ ಚೆನ್ನಾಗಿ ಮಳೆ ಬಿದ್ದರೆ ಜಿಂಕೆ, ಕಡವೆ ಮುಂತಾದ ಪ್ರಾಣಿಗಳಿಗೆ ಬೇಕಾದ ಮೇವು ಸಿಗುತ್ತದೆ. ಆದರೆ, ಈಗ ಜಲಾಶಯಗಳ ಹಿನ್ನೀರಿನಲ್ಲಿ ಹೆಚ್ಚು ಹಸಿರು ಇರುವುದರಿಂದ ಅಲ್ಲಿಗೆ ಆಹಾರ ಹುಡುಕುತ್ತ ವಲಸೆ ಹೋಗಿವೆ ಎಂದು ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಒಟ್ಟಾರೆ ಕಾವೇರಿ ನದಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗದೆ ಇದ್ದಿದ್ದರೆ ಕಬಿನಿ ಹಿನ್ನೀರಿನ ತೇವಾಂಶದಿಂದಲೇ ಅರಣ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಜಿಂಕೆ ಮುಂತಾದ ಪ್ರಾಣಿಗಳಿಗೆ ಮೇವು ಲಭಿಸುತಿತ್ತು. ಆದರೆ, ಈಗ ಕಬಿನಿ ಬರಿದಾಗಿರುವುದರಿಂದ ಬಂಡೀಪುರ ಅರಣ್ಯ ಬಿಸಿಲಿನ ಝಳ ಹೆಚ್ಚಾಗಿದೆ.