ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಶಾಶ್ವತ ನೀರಾವರಿ ಅಸಾಧ್ಯವಾದಲ್ಲಿ ರಾಜಕೀಯ ಸನ್ಯಾಸ

Rashmi Kasaragodu
Updated On : 30 Mar 2013, 11:19 am

ಬಿಡದಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಎಚ್.ಸಿ. ಬಾಲಕೃಷ್ಣ ಶಪಥ

ಕ.ಪ್ರ.ವಾರ್ತೆ   ರಾಮನಗರ   ಮಾ.29
ಜೆಡಿಎಸ್ ಅಧಿಕಾರಕ್ಕೆ ಬಂದರೆ ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸಲಾಗುವುದು. ಈ ಭರವಸೆ ಈಡೇರಿಸುವಲ್ಲಿ ವಿಫಲವಾದರೆ ಕುಮಾರಸ್ವಾಮಿ ಮತ್ತು ಸಂಗಡಿಗರು ಸಾಮೂಹಿಕವಾಗಿ ರಾಜಕೀಯ ಸನ್ಯಾಸ ಸ್ವೀಕರಿಸಲು ಸಿದ್ಧ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಶಪಥ ಮಾಡಿದರು.
ತಾಲೂಕಿನ ಕೇತಗಾನಹಳ್ಳಿಯ ಕುಮಾರಸ್ವಾಮಿ ತೋಟದಲ್ಲಿ ಶುಕ್ರವಾರ ಬಿಡದಿ ಹೋಬಳಿ ಜೆಡಿಎಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪೊಳ್ಳು ಭರವಸೆ ನೀಡಿ, ಪಲಾಯನ ಮಾಡುವ ಜಾಯಮಾನ ತಮ್ಮದಲ್ಲ. ಮತ್ತೊಮ್ಮೆ ಕುಮಾರಸ್ವಾಮಿ ನೇತೃತ್ವದ ಸರ್ಕಾರ ರಚನೆಯಾದರೆ ಇಡೀ ರಾಮನಗರ ಜಿಲ್ಲೆಯ ಚಿತ್ರಣವನ್ನೇ ಬದಲಿಸುತ್ತೇವೆ ಎಂದು ಘೋಷಿಸಿದರು.
20 ತಿಂಗಳ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರಚನೆಯಾದ ರಾಮನಗರ ಜಿಲ್ಲೆಗೆ ಕುಮಾರಸ್ವಾಮಿ ವಿವಿಧ ಕೊಡುಗೆ ನೀಡಿದ್ದಾರೆ. ಶಿಕ್ಷಣ, ಆರೋಗ್ಯ, ರಸ್ತೆ, ಚರಂಡಿ ಸಹಿತ ಮೂಲಭೂತ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಡದಿ ಹೆಸರುವಾಸಿಯಾಗಲು ಕುಮಾರಸ್ವಾಮಿ ಕಾರಣ ಎಂದು ಹೇಳಿದರು.
ಮಾನನಷ್ಟ ಮೊಕದ್ದಮೆ: ಹತ್ತು ವರ್ಷದಿಂದ ಅಧಿಕಾರವಿಲ್ಲದೆ ಹಪಾಹಪಿಸುತ್ತಿರುವ ಕಾಂಗ್ರೆಸ್ ಮುಖಂಡರು ನನ್ನ ಅವಧಿಯಲ್ಲಾದ ಅಭಿವೃದ್ಧಿ ಸಹಿಸದೆ, ಅಪ ಪ್ರಚಾರದಲ್ಲಿ ತೊಡಗಿದ್ದಾರೆ. ಅವರ ವಿರುದ್ಧ ಮಾನನಷ್ಟ  ಮೊಕದ್ದಮೆ ಹೂಡಲು ನಿರ್ಧರಿಸಿದ್ದು, ಈಗಾಗಲೇ ನೊಟೀಸ್ ಜಾರಿಗೊಳಿಸಲಾಗಿದೆ ಎಂದು ಬಾಲಕೃಷ್ಣ ತಿಳಿಸಿದರು.
ಕ್ಷಮೆಯಾಚಿಸಲಿ: ಮತದಾರರಿಗೆ ನೀಡಿರುವ ವಚನ ಈಗಾಗಲೇ ಪಾಲಿಸಿದ್ದೇನೆ. ಪಕ್ಷದ ಕಾರ್ಯಕರ್ತರು ಮತ್ತು ಮತದಾರರಿಗೆ ಕಳಂಕ ತರುವ ಕೆಲಸ ಮಾಡಿಲ್ಲ. ಅಪಪ್ರಚಾರ ನಡೆಸುತ್ತಿರುವವರು ನ್ಯಾಯಾಲಯದಲ್ಲಿ ಆರೋಪಗಳಿಗೆ ಪೂರಕ ದಾಖಲೆಗಳನ್ನು ಒದಗಿಸಬೇಕು. ಇಲ್ಲವೇ ಕ್ಷಮೆಯಾಚನೆ ಮಾಡಬೇಕು ಎಂದರು.
ವಿರೋಧಿಗಳಿಗೆ ಸವಾಲು: ಕಾಂಗ್ರೆಸ್ನ ಕೆಲ ಮುಖಂಡರು ನನ್ನ ವಿರುದ್ಧ ಅಪಪ್ರಚಾರ ನಡೆಸುತ್ತಲೇ ಬಂದಿದ್ದಾರೆ. ಲೋಕೋಪಯೋಗಿ ಹಗರಣಕ್ಕೆ ಸಂಬಂಧಿಸಿದಂತೆ ಸದನ ಸಮಿತಿಯಿಂದ ತನಿಖೆ ಪ್ರಗತಿಯಲ್ಲಿದೆ. ನನ್ನಿಂದ ಒಂದೇ ಒಂದು ರುಪಾಯಿ ಅವ್ಯವಹಾರ ನಡೆದಿದೆ ಎನ್ನುವುದನ್ನು ಸಾಬೀತುಪಡಿಸಿದಲ್ಲಿ ರಾಜಕೀಯ ನಿವೃತ್ತಿ ಹೊಂದುವೆ ಎಂದು ಶಾಸಕರು ಸವಾಲು ಹಾಕಿದರು.
ಮಾಗಡಿಯಲ್ಲಿ ರು. 600 ಕೋಟಿ ಹಗರಣ ನಡೆದಿದೆ ಎಂದು ಮಹಾನ್ ನಾಯಕರೊಬ್ಬರು ಬೊಬ್ಬೆ ಹಾಕುತ್ತಿದ್ದಾರೆ. 2008 ರಿಂದ 2013ರವರೆಗೆ ಮಾಗಡಿಗೆ ಘೋಷಣೆ ಆಗಿರುವುದು ರು. 275 ಕೋಟಿ ಮಾತ್ರ. ಈ ಪೈಕಿ ಬಿಡುಗಡೆ ಆಗಿರುವ ಮೊತ್ತ ರು.108 ಕೋಟಿ ಮಾತ್ರವೇ. ಸದನ ಸಮಿತಿ ವರದಿ ಬಂದ ಮೇಲೆ ಆರೋಪ ಎಸಗಿದವರ ಜಾತಕ ಬಯಲು ಮಾಡುವೆ ಎಂದು ತಿಳಿಸಿದರು.
ಗುತ್ತಿಗೆದಾರರ ಕಂಟಕ: ಮಾಗಡಿ ಪುರಸಭೆಯಲ್ಲಿ ಜೆಡಿಎಸ್ ಸೋಲಿಗೆ ಕಳೆದ ಬಾರಿ ಆಯ್ಕೆಯಾಗಿದ್ದ ಪುರಪಿತೃಗಳ ಸ್ವೇಚ್ಚಾಚಾರ ಕಾರಣವಾಯಿತು. ಕಳೆದ ಅವಧಿಯಲ್ಲಿ ಪ್ರತಿಪಕ್ಷವೇ ಇರಲಿಲ್ಲ. ಗೆದ್ದ ಇಬ್ಬರು ನಮ್ಮದೇ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.
ಮತ್ತೆ ಸ್ಪರ್ಧೆಗೆ ಇಳಿಯುತ್ತೇವೋ ಇಲ್ಲವೋ ಎಂದು ಬೇಕಾಬಿಟ್ಟಿ ಕೆಲಸ ಮಾಡಿದ ಹಲವರು ಈಗ ಪಕ್ಷಕ್ಕೆ ಧಕ್ಕೆ ತಂದಿದ್ದಾರೆ. ಇದು, ನನ್ನ ಗಮನಕ್ಕೆ ತಡವಾಗಿ ಬಂತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement