ಬೆಂಗಳೂರು ಗ್ರಾಮಾಂತರ

ನಾಮಪತ್ರಕ್ಕೆ ಮುನ್ನವೇ ಅಬ್ಬರದ ಪ್ರಚಾರ

ರಾಮನಗರ: ನಾಮಪತ್ರ ಸಲ್ಲಿಕೆಗೆ ಮುನ್ನವೇ ರೇಷ್ಮೆ ನಾಡಿನಲ್ಲಿ ಪ್ರಚಾರದ ಅಬ್ಬರ ಜೋರಾಗಿದೆ. ಘಟಾನುಘಟಿ ನಾಯಕರೂ ಸಹಿತ ಸಂಭವನೀಯ ಅಭ್ಯರ್ಥಿಗಳು ಮತಬೇಟೆಗೆ ಹರ ಸಾಹಸ ನಡೆಸುತ್ತಿದ್ದಾರೆ.
 ಆರೋಪ-ಪ್ರತ್ಯಾರೋಪಗಳ ಮೂಲಕ ಎದುರಾಳಿಯನ್ನು ಹಣಿಯುವ ರಾಜಕೀಯ ಮಸಲತ್ತು ಕೂಡ ಇಲ್ಲಿ ತೀವ್ರಗೊಂಡಿದೆ.
ಕಾರ್ಯಕರ್ತರ ಸಭೆ, ಮನೆ ಮನೆಗೆ ತೆರಳಿ ಮತಯಾಚನೆ, ರೋಡ್ ಶೋ, ಪ್ರಮುಖರ ಭೇಟಿಯ ಪ್ರಯತ್ನ ನಿರಂತರವಾಗಿ ಸಾಗಿದೆ. ಹಿಂದೆ ಪಕ್ಷ ತ್ಯಜಿಸಿದವರು, ಮುನಿದು ಮನೆ ಸೇರಿದವರು ಮತ್ತು ತಾವಿರುವ ಪಕ್ಷದಿಂದ ಒಂದು ಹೆಜ್ಜೆ ಹೊರಗಿಟ್ಟವರವನ್ನು ಮನವೊಲಿಸಿ ಸೆಳೆಯುವ ಕಸರತ್ತು ಭರ್ಜರಿಯಾಗಿಯೇ ನಡೆದಿದೆ.
ಫಾರ್ಮುಲಾ ಅಡ್ಡಿ: ರಾಜ್ಯ ಕಾಂಗ್ರೆಸ್‌ನ ಪ್ರಭಾವಿ ನಾಯಕರಲ್ಲಿ ಒಬ್ಬರಾದ ಡಿ.ಕೆ.ಶಿವಕುಮಾರ್ ಅವರಿಗೆ ಕನಕಪುರದಿಂದ ಟಿಕೆಟ್ ಖಚಿತವಾಗಿದೆ. ರಾಮನಗರದಲ್ಲಿ ಮರಿದೇವರು ಸಂಭವನೀಯ ಅಭ್ಯರ್ಥಿ. ಚನ್ನಪಟ್ಟಣ ಮತ್ತು ಮಾಗಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಈ ಕುತೂಹಲಕ್ಕೆ ರಾಹುಲ್ ಗಾಂಧಿ ಫಾರ್ಮುಲಾ ಕಾರಣವಾಗಿದೆ.
ಆಪರೇಷನ್ ಕಮಲ ಕಾರ್ಯಾಚರಣೆಗೆ ಒಳಗಾಗಿದ್ದವರಿಗೆ ಟಿಕೆಟ್ ಇಲ್ಲವೆನ್ನುವ ನಿಲವಿಗೆ ಕಾಂಗ್ರೆಸ್ ಹೈಕಮಾಂಡ್ ಅಂಟಿಕೊಂಡರೆ, ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಕನಸು ಭಗ್ನವಾಗಲಿದೆ. ಆಗ ಅವರು ಪಕ್ಷೇತರರಾಗಿ ಕಣಕ್ಕೆ ಇಳಿಯುವ ಅನಿವಾರ್ಯತೆ ಎದುರಾಗಲಿದೆ. ಮಾಗಡಿ ಕೋಟೆಯಲ್ಲಿ ಕೈ ಪಾಳಯದ ನಾಯಕತ್ವಕ್ಕಾಗಿ ಜೇಡ್ರಳ್ಳಿ ಕೃಷ್ಣಪ್ಪ ಮತ್ತು ಮಂಜುನಾಥ್ ನಡುವೆ ಕದನ ಮುಂದುವರೆದಿದೆ.
ಅಭ್ಯರ್ಥಿಗಳ ಹುಡುಕಾಟ: ಆಡಳಿತಾರೂಢ ಬಿಜೆಪಿಗೆ ಸಿ.ಪಿ.ಯೋಗೇಶ್ವರ್ ನಿರ್ಗಮನ ದೊಡ್ಡ ಪೆಟ್ಟು ನೀಡಿದೆ. ಬಿಜೆಪಿಯಲ್ಲಿ ಅಧಿಕಾರ ಉಂಡವರೆಲ್ಲ ಗಂಟು-ಮೂಟೆ ಕಟ್ಟುತ್ತಿದ್ದಾರೆ. ನಿಗಮ-ಮಂಡಳಿ ಅಧ್ಯಕ್ಷರಾಗಿದ್ದವರ ಪೈಕಿ ರುದ್ರೇಶ್ ಈಗಾಗಲೇ ಕೆಜೆಪಿ ಪಡಸಾಲೆಯಲ್ಲಿ ಕುಳಿತಿದ್ದಾರೆ. ರಾ-ಚ ಪ್ರಾಧಿಕಾರದ ಅಧ್ಯಕ್ಷ ಶೇಷಾದ್ರಿ ಮತ್ತು ಕೆಎಂಎಫ್ ನಿರ್ದೇಶಕ ಪಿ. ನಾಗರಾಜು ಕೂಡ ಪಕ್ಷಾಂತರಕ್ಕೆ ಸಿದ್ಧವಾಗಿದ್ದು, ಪಕ್ಷ ಆಯ್ಕೆ ಗೊಂದಲದಲ್ಲಿದ್ದಾರೆ.  ಇನ್ನು, ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ಹಾಗೂ ಚನ್ನಪಟ್ಟಣದ ಮಾಜಿ ಶಾಸಕ ಎಂ.ಸಿ.ಅಶ್ವತ್ಥ್ ಚಟುವಟಿಕೆಯಿಂದ ದೂರವಾಗಿದ್ದಾರೆ. ಬಿಜೆಪಿ ಈಗ ಎಲ್ಲ 4 ಕ್ಷೇತ್ರಗಳಲ್ಲೂ ಹೊಸ ಮುಖಗಳನ್ನು ಕಣಕ್ಕಿಳಿಸಲು ಹೋರಾಟ ನಡೆಸುತ್ತಿದೆ. ನವಜಾತ ಪಕ್ಷಗಳಾದ ಕೆಜೆಪಿ ಹಾಗೂ ಬಿಎಸ್‌ಆರ್ ಪಕ್ಷಗಳಿಗೂ ಅಭ್ಯರ್ಥಿಗಳ ಹುಡುಕಾಟದ್ದೇ ದೊಡ್ಡ ಚಿಂತೆಯಾಗಿದೆ.
ನಾಯಕರ ನಾಗಾಲೋಟ: ರಾಮನಗರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮೂರು ದಿನದಿಂದ ಬಿಡುವಿಲ್ಲದೆ ಪ್ರಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿ ಮರಿದೇವರು ಮನೆ ಮನೆಗೆ  ತೆರಳಿ ಮತಯಾಚಿಸುವಲ್ಲಿ ನಿರತರಾಗಿದ್ದಾರೆ. ಚನ್ನಪಟ್ಟಣದಲ್ಲಿ ಅನಿತಾ ಕುಮಾರಸ್ವಾಮಿ ಮತ್ತು ಯೋಗೇಶ್ವರ್ ಚುನಾವಣಾ ಪ್ರಚಾರ ಬಿರುಸಾಗಿದೆ.
ಮಾಗಡಿಯಲ್ಲಿ ಕಾಂಗ್ರೆಸ್ ಟಿಕೆಟ್ ಮೇಲೆ ಕಣ್ಣಿಟ್ಟವರಿಬ್ಬರೂ ದೆಹಲಿಗೆ ಹಾರಿದ್ದಾರೆ. ಇತ್ತ ಜೆಡಿಎಸ್ ಶಾಸಕ ಎಚ್.ಸಿ. ಬಾಲಕೃಷ್ಣ ಊರೂರು ಅಲೆಯುತ್ತಿದ್ದಾರೆ. ಕನಕಪುರದಲ್ಲಿ ಸಿಂಧ್ಯಾ ಮತ್ತು ಶಿವಕುಮಾರ್ ನಡುವಿನ ಜಂಗೀಕುಸ್ತಿ  ತಾರಕಕ್ಕೇರಿದೆ. ಮತದಾರರ ಪಟ್ಟಿಯ ಲೋಪ, ಬಳುವಳಿಗಳ ಹಂಚಿಕೆಯ ದೂರು ಚುನಾವಣಾ ಆಯೋಗದ ಮೆಟ್ಟಿಲೇರಿದೆ.
ನೀರಾವರಿಯೇ ಅಸ್ತ್ರ: ಬರದ ನಾಡಾಗಿರುವ ರಾಮನಗರದಲ್ಲಿ ನಿರೀಕ್ಷೆಯಂತೆಯೇ ಎಲ್ಲ ಪಕ್ಷಗಳು ನೀರಾವರಿಯ ಅಸ್ತ್ರ ಪ್ರಯೋಗಿಸುತ್ತಿವೆ. ಗಂಗೆಯನ್ನೇ ಇಲ್ಲಿ ಹರಿಸಿ ಭಗೀರಥರಾಗುತ್ತೇವೆ ಎನ್ನುವಂತೆಯೇ ಎಲ್ಲರೂ ಭರವಸೆ ನೀಡುತ್ತಿದ್ದಾರೆ. ಚನ್ನಪಟ್ಟಣದಲ್ಲಿ ಯೋಗೇಶ್ವರ್ ಕಣ್ವ-ಶಿಂಷಾ ಸಂಗಮದ ಸಂಕಲ್ಪತೊಟ್ಟರೆ, ಜೆಡಿಎಸ್ ಪಾಳಯವು ಶಾಶ್ವತ ನೀರಾವರಿಯ ಮಂತ್ರ ಜಪಿಸುತ್ತಿದೆ. ಮಾಗಡಿ, ರಾಮನಗರ, ಕನಕಪುರದಲ್ಲಿ ಜಲಫಿರಂಗಿ ಪ್ರಯೋಗ ನಡೆದಿದೆ.

ಬೀಡು ಬಿಟ್ಟ ದಳಪತಿ
ರಾಜ್ಯ ಪ್ರವಾಸದ ಭರಾಟೆಯಲ್ಲಿ ಸ್ವಕ್ಷೇತ್ರದ ಕಡೆ ತಲೆ ಹಾಕದಿದ್ದ ದಳಪತಿ ಎಚ್.ಡಿ.ಕುಮಾರಸ್ವಾಮಿ ನಗರಸಭೆ ಚುನಾವಣೆಯಲ್ಲಿ ಸ್ಥಳೀಯ ಮುಖಂಡರ ವೈಫಲ್ಯದ ಪರಿಣಾಮ ಎದುರಾದ ಸೋಲಿನಿಂದ ಎಚ್ಚೆತ್ತುಕೊಂಡಿದ್ದಾರೆ. ರಾಮನಗರ ಕ್ಷೇತ್ರಾದ್ಯಂತ 3 ದಿನ ಪ್ರವಾಸ ಕೈಗೊಂಡು, ವಿರೋಧಿಗಳ ಟೀಕೆಗೆ ಎದಿರೇಟು ನೀಡಿದ್ದಾರೆ.
ಪ್ರತಿಸ್ಪರ್ಧಿಯು ತಮ್ಮ ಮೇಲೆ ಮಾಡುತ್ತಿದ್ದ ಆರೋಪಗಳಿಗೆ ಪ್ರತ್ಯುತ್ತರದ ಜತೆಗೆ ಪ್ರತ್ಯಾರೋಪಗಳ ಸುರಿಮಳೆ ಗರೆದಿದ್ದಾರೆ. ಕಳಾಹೀನವಾಗಿದ್ದ ರಾಮನಗರ ಜೆಡಿಎಸ್ ಪಾಳಯ ಕುಮಾರಸ್ವಾಮಿ ಆಗಮನದೊಂದಿಗೆ ಮತ್ತೆ ಗರಿಗೆದರಿದೆ.
 ಕ್ಷೇತ್ರ ಸುತ್ತಿದ ಬಳಿಕ ತಮಗೆ ಇಲ್ಲಿ ಯಾವ ಆತಂಕವಿಲ್ಲ ಎಂದು ಕುಮಾರಸ್ವಾಮಿ ಬೀಗುತ್ತಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕೂಡ ಇಲ್ಲಿ ಕಾರ್ಯಕರ್ತರ ಸಭೆ ನಡೆಸಿ, ಹುರಿದುಂಬಿಸುವ ಕೆಲಸ ಮಾಡಿದ್ದಾರೆ. ನಿರೀಕ್ಷೆಯಂತೆ ರಾಮನಗರದಲ್ಲಿ ದೇವೇಗೌಡರೂ ಜಲಫಿರಂಗಿಯನ್ನೇ ಪ್ರಯೋಗಿಸಿದ್ದಾರೆ. ಕುಮಾರಸ್ವಾಮಿ ಜತೆಗೆ ದೇವೇಗೌಡರೂ ಬ್ಯಾಟಿಂಗ್‌ಗೆ ಇಳಿದಿದ್ದನ್ನು ಗಮನಿಸಿದರೆ ಈ ಮೊದಲು ಅವರಿಗಿಲ್ಲ ಆತಂಕ ಕಾಡಿತ್ತೆನ್ನುವ ಮಾತನ್ನು ಅಲ್ಲಗಳೆಯುವಂತಿಲ್ಲ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

'SIR' ವಿರುದ್ಧ ಭಾರೀ ಪ್ರತಿಭಟನೆ: ಜ್ಞಾನೇಶ್ ಕುಮಾರ್ Z+ ಭದ್ರತೆ ಮತ್ತಷ್ಟು ಹೆಚ್ಚಿಸಿದ ಕೇಂದ್ರ ಸರ್ಕಾರ!

ಚಲಿಸುತ್ತಿದ್ದ ಬಸ್`ನಲ್ಲೇ ವೃದ್ಧನ 'ಮೈ ಬಿಸಿ ಏರಿಸಿ', 1 ಕೋಟಿ ರೂ ಮೌಲ್ಯದ ಚಿನ್ನ ಎಗರಿಸಿದ 'ಖತರ್ನಾಕ್ ಕಳ್ಳಿಯರು', Video

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ CWRC ಮತ್ತೆ ಶಾಕ್: ತಮಿಳುನಾಡಿಗೆ ನಿತ್ಯ 3,000 ಕ್ಯೂಸೆಕ್ ನೀರು ಹರಿಸಲು ಸೂಚನೆ