ಕ.ಪ್ರ ವಾರ್ತೆ, ಆನೇಕಲ್, ಮಾ.30
ಆನೇಕಲ್ ವಿಧಾಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಮೀನ ಮೇಷ ಎಣಿಸುತ್ತಿದ್ದರೆ ಬಿಜೆಪಿ ತಾಲೂಕಿನ ಈಶಾನ್ಯ ಭಾಗದ ಮುಗಳೂರಿನಿಂದ ಚುನಾವಣಾ ಪ್ರಚಾರ ಕಾರ್ಯ ಪ್ರಾರಂಭಿಸಿ ತನ್ನ ಅಭ್ಯರ್ಥಿ ಪರ ಪ್ರಚಾರ ಕಾರ್ಯದಲ್ಲಿ ತಲ್ಲೀನವಾಗಿದೆ.
ಆನೇಕಲ್ ಕ್ಷೇತ್ರದಲ್ಲಿ ಸತತ 4 ಬಾರಿ ಗೆದ್ದಿರುವ ಸಚಿವ ಎ. ನಾರಾಯಣಸ್ವಾಮಿ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಜಯಗಳಿಸಿರುವ ಎಂ. ಕೃಷ್ಣಪ್ಪ ಮತ್ತೆ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ. ಚುನಾವಣೆ ಸಿದ್ಧತೆ ಪೂರ್ಣಗೊಳಿಸಿರುವ ಬಿಜೆಪಿ ಮತ ಬೇಟೆ ಆರಂಭಿಸಿದ್ದು, ಮೊದಲ ಹಂತವಾಗಿ ಕಾಯಕರ್ತರನ್ನು ಸಂಘಟಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.
ಜೆಡಿಎಸ್ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಿಸಿದ್ದು ಕಾಂಗ್ರೆಸ್ ಎರಡೂ ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ಮಾಡಿಲ್ಲ. ಕೆಜೆಪಿ ಹಾಗು ಸಿಪಿಎಂ ಆನೇಕಲ್ ಕ್ಷೇತ್ರದಲ್ಲಿ ಮತ್ತು ಜೆಡಿಯು ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಿಸಿದೆ. ಟಿಕೆಟ್ ಹಂಚಿಕೆ ವಿಷಯವಾಗಿ ಕಾಂಗ್ರೆಸ್ ಈ ಬಾರಿಯೂ ಅಂತಿಮ ದಿನದ ಸಂಪ್ರದಾಯಕ್ಕೆ ಶರಣಾಗಿದೆ.
ಗೊಂದಲ: ಆನೇಕಲ್ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿ ಅಭ್ಯರ್ಥಿಗಳು ದಿಲ್ಲಿಯಲ್ಲಿ ಬೀಡು ಬಿಟ್ಟಿದ್ದು ಯಾರ ಹೆಸರೂ ಅಂತಿಮವಾಗಿಲ್ಲ.
ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಮೈಲಸಂದ್ರ ಪ್ರಭಾಕರ ರೆಡ್ಡಿ ಜೆಡಿಎಸ್ ಅಭ್ಯರ್ಥಿಯಾಗಿ ಪ್ರಚಾರ ಕಾರ್ಯ ಪ್ರಾರಂಭಿಸಿದ್ದು ಸಂಘ ಸಂಸ್ಥೆಗಳು ಕೈಜೋಡಿಸುವಂತೆ ಮನವಿ ಮಾಡಿದ್ದಾರೆ.
ಇನ್ನು ಕೆಜೆಪಿ, ಆನೇಕಲ್ ಕ್ಷೇತ್ರದಲ್ಲಿ ಮಾಜಿ ಸಚಿವ ವೈ. ರಾಮಕೃಷ್ಣ ಅವರ ಪುತ್ರನನ್ನು ಕಣಕ್ಕಿಳಿಸಿದ್ದು, ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿಯನ್ನು ಈವರೆವಿಗೂ ಘೋಷಿಸಿಲ್ಲ.
ಸಚಿವ ಎ. ನಾರಾರ್ಯಸ್ವಾಮಿ ನೂರಾರು ಕೋಟಿ ರು.ಗಳ ಅಭಿವೃದ್ಧಿಯನ್ನು ವಿವರಿಸಿ ಬಿಜೆಪಿ ಸರ್ಕಾರದ ಜನಪ್ರಿಯ ಕಾರ್ಯಕ್ರಮಗಳ ಬಗ್ಗೆ ಹೇಳುತ್ತಾ ಮತ ಭೇಟೆ ಆರಂಭಿಸಿದ್ದಾರೆ. ಕಾರ್ಯಕರ್ತರ ಪಡೆ ಮನೆ-ಮನೆಗೂ ತೆರಳಿ ಮತ ಯಾಚನೆ ಕಾರ್ಯದಲ್ಲಿ ನಿರತರಾಗಿದ್ದಾರೆ.