ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕಡೆಯ ಕಸರತ್ತು; ಮತ ಬೇಟೆ ಮಸಲತ್ತು

Mainashree
Updated On : 2 May 2013, 12:31 pm

ಕ.ಪ್ರ.ವಾರ್ತೆ  ರಾಮನಗರ  ಮೇ 1
ವಿಧಾನಸಭೆ ಚುನಾವಣೆಗಿನ್ನು ಮೂರೇ ದಿನ ಬಾಕಿ. ಕ್ಷೇತ್ರದ ಹಳ್ಳಿ, ಗಲ್ಲಿಗಳನ್ನೆಲ್ಲಾ ಸುತ್ತಿ ಬಂದಿರುವ ಪ್ರಮುಖ ಹುರಿಯಾಳುಗಳು ಇದೀಗ ಒಳ ಕೆಲಸಕ್ಕೆ ಅಣಿಯಾಗುತ್ತಿದ್ದಾರೆ. ಮತಬೇಟೆಗಾಗಿ ಪ್ರತಿಸ್ಪರ್ಧಿ ಕಡೆಗಳಿಗೆಯಲ್ಲಿ ಹೂಡಿಕೆ ಮಾಡುತ್ತಿರುವ ಸಂಪನ್ಮೂಲ ಮತ್ತು ಅನುಸರಿಸುತ್ತಿರುವ ತಂತ್ರದ ಮೇಲೆ ಪ್ರಬಲ ಎದುರಾಳಿಗಳ ಚಿತ್ತ ನೆಟ್ಟಿದೆ.  
ಚುನಾವಣೆಯ ಬಹಿರಂಗ ಪ್ರಚಾರ ಮೇ 3ರ ಸಂಜೆ ಅಂತ್ಯಗೊಳ್ಳಲಿದೆ. ಹಿಂದೆಲ್ಲಾ ಬಹಿರಂಗ ಪ್ರಚಾರದ ಕಡೆಯಲ್ಲಿ ಬೃಹತ್ ಸಮಾವೇಶ ಆಯೋಜನೆ ಮೂಲಕ ಶಕ್ತಿ ಪ್ರದರ್ಶನ ನಡೆಸಲು ಅಭ್ಯರ್ಥಿಗಳು ಒತ್ತು ನೀಡುತ್ತಿದ್ದರು. ಈ ಬಾರಿ ಅಂತಹ ಪ್ರಯತ್ನವನ್ನು ಬಹುತೇಕರು ಕೈಬಿಟ್ಟಿದ್ದಾರೆ. ಸಮಾವೇಶ ಕೈ ಬಿಡುವ ಹಿಂದೆ ವೆಚ್ಚ ಮಿತಿ ಹೆಚ್ಚು ಭೀತಿ ಮನೆ ಮಾಡಿದೆ.
ಒಂದು ಕಾಲಕ್ಕೆ ರಾಜಕೀಯ ಪ್ರಜ್ಞಾವಂತಿಕೆಗೆ ಹೆಸರಾಗಿದ್ದ ರಾಮನಗರ ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಈಗಿನ ಚುನಾವಣಾ ವ್ಯವಸ್ಥೆ ತೀರಾ ಹದಗೆಟ್ಟಿದೆ. ಅಭ್ಯರ್ಥಿ ಅರ್ಹತೆ, ಯೋಗ್ಯತೆ, ಜನಪರ ಕಾಳಜಿಗಿಂತಲೂ ಆತ ಎಸೆಯುವ ಎಂಜಿಲು ಕಾಸಿಗೆ ಮತ ಮಾರಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಜಾತಿ, ಹಣ, ಮದ್ಯ, ತೋಳ್ಬಲದ ರಾಜಕಾರಣದ ಮೇಲಾಟ ಇಲ್ಲಿ ನಡೆಯುತ್ತಿದೆ.
ವ್ಯವಸ್ಥೆಯನ್ನು ಕುಲಗೆಡಿಸಿರುವ ರಾಜಕಾರಣಿಗಳು ಇದೀಗ ಮತದಾರರ ನಿರೀಕ್ಷೆಗಳನ್ನು ಪೂರೈಸಲಾಗದೆ ಹೈರಾಣಾಗುತ್ತಿದ್ದಾರೆ. ತಾವೇ ತೋಡಕೊಂಡ ಖೆಡ್ಡಕ್ಕೆ ಬಿದ್ದು, ಒದ್ದಾಡುತ್ತಿರುವ ರಾಜಕಾರಣಿಗಳು ಚುನಾವಣಾ ರಣಾಂಗಣದಲ್ಲಿ ಗೆಲವೊಂದನ್ನೇ ಗುರಿಯಾಗಿಟ್ಟುಕೊಂಡು ಕಲಿತ ವಿದ್ಯೆಯನ್ನೆಲ್ಲಾ ಪ್ರಯೋಗಿಸುತ್ತಿದ್ದಾರೆ.
ಕಸರತ್ತು-ಮಸಲತ್ತು : ಅಭ್ಯರ್ಥಿಗಳಿಂದ ನಿಜವಾದ ಚುನಾವಣಾ ಕಸರತ್ತು ಮತ್ತು ಮಸಲತ್ತು ನಡೆಯುವುದೇ ಮತದಾನಕ್ಕೆ ಇನ್ನೆರಡು ದಿನ ಇದೆ ಎನ್ನುವಾಗಷ್ಟೇ. ಇಲ್ಲಿವರೆಗೆ ತಾವು ಮಾಡಿರುವ ಸಾಧನೆ, ಮುಂದಿರುವ ಯೋಜನೆ ಮತ್ತು ಎದುರಾಳಿಯ ವೈಫಲ್ಯಗಳನ್ನು ಎತ್ತಿ ಹಿಡಿದು ಗಂಟಲು ಶೋಷಣೆ ಮಾಡಿಕೊಂಡಾಗಿದೆ. ಇದೀಗ ಖಜಾನೆಯ ತಿಜೋರಿ ತೆಗೆದು ಹಣದ ಕಂತೆ ಎಳೆದೆಳೆದು ಹಂಚುವುದೇ ಮುಖ್ಯ ಕೆಲಸ.
ಪ್ರಮುಖ ಸ್ಪರ್ಧಿಗಳೆಲ್ಲರೂ ಎದುರಾಳಿಗಳು ಹೂಡುವ ಬಂಡವಾಳದ ಮೊತ್ತ ತಿಳಿಯುವುದಕ್ಕೆ ಕಾತರರಾಗಿದ್ದಾರೆ. ಅವರಿಗಿಂತ ಒಂದು ಕೈ ಜೋರಾಗಿ ಹಣ ಚೆಲ್ಲಿ, ಜನರನ್ನು ಸೆಳೆಯುವುದೇ ಇದರ ಹಿಂದಿನ ಉದ್ದೇಶ. ಬಹುತೇಕರು ವೆಚ್ಚಕ್ಕೆ ಸಾಕಷ್ಟು ಹಣ ಹೊಂದಿಸಿಕೊಂಡು ಸಿದ್ಧರಾಗಿದ್ದರೆ, ಕೆಲವರು ಆಸ್ತಿ ಪತ್ರಗಳನ್ನಿಡಿದು ಸಾಲಕ್ಕಾಗಿ ಧನಿಕರಿಗೆ ದುಂಬಾಲು ಬಿದ್ದಿದ್ದಾರೆ.  
ರಾಮನಗರ ಜಿಲ್ಲೆಯ ನಾಲ್ಕೂ ಪ್ರತಿಷ್ಠಿತ ಕಣಗಳ ಪ್ರಮುಖ ಹುರಿಯಾಳುಗಳ ಪೈಕಿ ಒಬ್ಬಿಬ್ಬರನ್ನು ಹೊರತುಪಡಿಸಿ ಬಹುತೇಕರು ಭಾರಿ ಬಂಡವಾಳಗಾರರೇ ಆಗಿದ್ದಾರೆ. ತಿಂಗಳು ಮುಂಚೆಯೇ ಟಾರ್ಗೆಟ್ ನಿಗದಿಪಡಿಸಿಕೊಂಡು, ಸುರಕ್ಷಿತವೆನಿಸಿದ ನಾಲ್ಕಾರು ಕಡೆ ಹಣ ಶೇಖರಿಸಿದ್ದಾರೆ. ಒಂದಾದ ಬಳಿಕ ಒಂದು ಕಡೆಯಿಂದ ಕಂತೆಗಟ್ಟಲೆ ಹಣ ಸರಾಗವಾಗಿ ಗುರಿ ತಲುಪುತ್ತಿದೆ.
ಚನ್ನಪಟ್ಟಣದತ್ತ ಚಿತ್ತ: ಹಣದ ಥೈಲಿಯ ವಿಷಯದಲ್ಲಿ ಎಲ್ಲರ ಚಿತ್ತ ಜಿದ್ದಾಜಿದ್ದಿನ ರಣಾಂಗಣವಾದ ಚನ್ನಪಟ್ಟಣ ಕ್ಷೇತ್ರದತ್ತ ನೆಟ್ಟಿದೆ. ಅಲ್ಲಿ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಮತ್ತು ಸಮಾಜವಾದಿ ಪಕ್ಷದ ಸಿ.ಪಿ.ಯೋಗೇಶ್ವರ್ ನಡುವೆ ನೇರ ಹಣಾಹಣಿ ಇದೆ. ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಅವರಿಬ್ಬರೂ ಸೇರಿಗೆ ಸವ್ವಾ ಸೇರು ಎನ್ನುವಂತೆ ಸಜ್ಜಾಗಿದ್ದಾರೆ.
ಉಳಿದೆಡೆಯೂ ಅಬ್ಬರ: ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಪಡೆಯನ್ನು ಸಜ್ಜುಗೊಳಿಸಲು, ಮತದಾರರನ್ನು ಸೆಳೆಯಲು ಎಲ್ಲ ಕ್ಷೇತ್ರಗಳ ಪ್ರಬಲ ಅಭ್ಯರ್ಥಿಗಳೂ ಗಂಟು ಬಿಚ್ಚಿದ್ದಾರೆ. ರಾಮನಗರ ಕ್ಷೇತ್ರದ ಮಟ್ಟಿಗೆ ಹೇಳುವುದಾದರೆ ಜೆಡಿಎಸ್ ಮತ್ತು ಕಾಂಗ್ರೆಸ್ ಉಭಯ ಪಕ್ಷಗಳೂ ಕನಕಪುರ ತಾಲೂಕಿನ ಭಾಗವಾದ ಹಾರೋಹಳ್ಳಿ, ಮರಳವಾಡಿ ಹೋಬಳಿಗಳಲ್ಲಿ ಹೆಚ್ಚು ಬಂಡವಾಳದೊಂದಿಗೆ ಹೋರಾಡುತ್ತಿದ್ದಾರೆ.
ಕನಕಪುರದ ಗಡಿಯಂಚಿನಲ್ಲಿ ಕಾವೇರಿ ನದಿಯಲ್ಲಿ ನೀರಿನ ಹರಿವು ಇಳಿಮುಖವಾಗಿದ್ದರೆ, ಚುನಾವಣೆಯಲ್ಲಿ ಹಣದ ಹೊಳೆ ಪ್ರವಾಹದೋಪಾದಿ ಹರಿಯುತ್ತಿದೆ. ಮಾಜಿ ಸಚಿವದ್ವಯರಾದ ಡಿ.ಕೆ.ಶಿವಕುಮಾರ್ ಮತ್ತು ಪಿ.ಜಿ.ಆರ್.ಸಿಂಧ್ಯಾ ನಡುವಣ ಮದಗಜಗಳ ಹೋರಾಟ ರೋಚಕ ಘಟ್ಟಕ್ಕೆ ತಲುಪಿದೆ. ತ್ರಿಕೋನ ಸ್ಪರ್ಧೆಯಿರುವ ಮಾಗಡಿ ಕ್ಷೇತ್ರದಲ್ಲೂ ಜೆಡಿಎಸ್ ಎಚ್.ಸಿ.ಬಾಲಕೃಷ್ಣ, ಕಾಂಗ್ರೆಸ್‌ನ ಮಂಜುನಾಥ್, ಕೆಜೆಪಿಯ ಜೇಡ್ರಳ್ಳಿ ಕೃಷ್ಣಮೂರ್ತಿ ನಡೆಸುತ್ತಿರುವ ಕಸರತ್ತು ಉಳಿದೆಡೆಗಿಂಗ ಭಿನ್ನವಲ್ಲ.
ಅಖಾಡಕ್ಕೆ ದಳಪತಿ: ನಾಮಪತ್ರ ಸಲ್ಲಿಸಿ ರಾಜ್ಯ ಪ್ರವಾಸಕ್ಕೆ ತೆರಳಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನಾಳೆ(ಮೇ 2) ಸ್ವಕ್ಷೇತ್ರಕ್ಕೆ ವಾಪಸಾಗಲಿದ್ದಾರೆ. 2004ರ ಬಳಿಕ ಇದೇ ಮೊದಲ ಬಾರಿ ಇಲ್ಲಿ ಕುಮಾರಸ್ವಾಮಿ ಅವರಿಗೆ ಪ್ರಬಲ ಸ್ಪರ್ಧೆ ಎದುರಾಗಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸ್ವಯಂ ನಿವೃತ್ತ ಸರ್ಕಾರಿ ನೌಕರ ಮರಿದೇವರು ತರಾವರಿ ಕಸರತ್ತುಗಳ ಮೂಲಕ ದಳಪತಿಗಳ ನಿದ್ದೆಗೆಡಿಸಿದ್ದಾರೆ.  ರಾಮನಗರದಲ್ಲಿ ಜೆಡಿಎಸ್ ಕುಮಾರಸ್ವಾಮಿ ನಾಮಬಲವೇ ಶ್ರೀರಕ್ಷೆ. ಸ್ಥಳೀಯ ಮುಖಂಡರ ಸಾಮರ್ಥ್ಯ ನಗರಸಭೆ ಚುನಾವಣೆಯಲ್ಲೇ ವೇದ್ಯವಾಗಿದೆ. ಸದ್ಯಕ್ಕೆ ರಾಮನಗರದ ಮತದಾರರು ಗುಟ್ಟು ಬಿಟ್ಟುಕೊಡುತ್ತಿಲ್ಲ. ಕುಮಾರಸ್ವಾಮಿ ರಂಗ ಪ್ರವೇಶದ ಬಳಿಕವಷ್ಟೇ ರಾಮನಗರ ರಣಾಂಗಣದ ಸ್ಪಷ್ಟ ಚಿತ್ರಣ ಹೊರಬೀಳಲಿದೆ.

 ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement