ನಟಿ ಶುಭ ಪೂಂಜಾ ಸಹಿತ ಮೂವರು ತಾರಾ ಮಣಿಗಳಿಂದ ಕೆಜೆಪಿ ಪರ ಪ್ರಚಾರ
ಕ.ಪ್ರ. ವಾರ್ತೆ ರಾಮನಗರ ಮೇ 1
ಮಾಗಡಿ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಎಚ್.ಎಂ.ಕೃಷ್ಣಮೂರ್ತಿ(ಜೇಡ್ರಳ್ಳಿ ಕೃಷ್ಣಪ್ಪ) ಪರ ಮತಯಾಚನೆಗೆ ಆಗಮಿಸಿದ್ದ ನಟಿ ಶುಭ ಪೂಂಜಾ ಸಹಿತ ಮೂವರು ತಾರಾ ಮಣಿಗಳು ತೆಂಗಿನಕಾಯಿ ಹಿಡಿದು ಬಿಡದಿಯಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ನಟ ನವೀನ್ ಕೃಷ್ಣ, ರೇಖಾ ಜತೆಗೂಡಿ ಶುಭ ಪೂಂಜಾ ಕೆಲವೆಡೆ ಪಾದಯಾತ್ರೆ ನಡೆಸಿ ಕೃಷ್ಣಮೂರ್ತಿ ಅವರ ಪರ ಮತಯಾಚಿಸಿದರು. ಉಳಿದಂತೆ ತೆರೆದ ವಾಹನವೇರಿ ರೋಡ್ ಶೋ ಮೂಲಕ ಪ್ರಚಾರ ನಡೆಸಿದ್ದಾರೆ. ಚಲನಚಿತ್ರ ರಂಗದಲ್ಲೂ ಕೆಲಸ ಮಾಡಿರುವ ಕೃಷ್ಣಮೂರ್ತಿ ಅವರು ಮಾಗಡಿ ಕ್ಷೇತ್ರದಲ್ಲಿ ಸಾಕಷ್ಟು ಸಮಾಜ ಸೇವೆ ನಡೆಸಿದ್ದಾರೆ. ಅವರ ಪರವಾಗಿ ಚುನಾವಣಾ ಪ್ರಚಾರ ಮಾಡುವುದು ನನಗೆ ಹೆಮ್ಮಯ ಸಂಗತಿ ಎಂದು ಶುಭ ಪೂಂಜಾ ಅಭಿಪ್ರಾಯಪಟ್ಟರು.
ಕೃಷ್ಣಮೂರ್ತಿ ಅವರು ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಅಂತೆಯೇ ನಾನು ಕಂಡಂತೆ ಸಾಮಾಜಿಕವಾಗಿಯೂ ಒಳ್ಳೆಯ ಕೆಲಸಗಳನ್ನು ಮಾಡಿದ್ದು, ಅವರನ್ನು ಭಾರಿ ಬಹುಮತದಿಂದ ಆಯ್ಕೆ ಮಾಡಬೇಕು ಎಂದು ನಟ ನವೀನ್ ಕೃಷ್ಣ ಮನವಿ ಮಾಡಿದರು. ಕೆಜೆಪಿ ಮುಖಂಡ ಎಂ.ರುದ್ರೇಶ್ ಮಾತನಾಡಿ, ಕೃಷ್ಣಮೂರ್ತಿ ಅವರ ವಿರೋಧಿಗಳು ನಡೆಸುತ್ತಿರುವ ಅಪಪ್ರಚಾರಕ್ಕೆ ಜನತೆ ಕಿವಿಗೊಡಬಾರದು. ಅವರ ಸಮಾಜ ಸೇವೆಯನ್ನು ಪರಿಗಣಿಸಿ, ಆಯ್ಕೆ ಮಾಡಬೇಕು ಎಂದು ತಿಳಿಸಿದರು. ಅಭ್ಯರ್ಥಿ ಕೃಷ್ಣಮೂರ್ತಿ ಪತ್ನಿ ಪುಷ್ಪಾ ಹಾಜರಿದ್ದರು.