ಸುದ್ದಿ ಸಂಕ್ಷೇಪ
ಮಾಜಿ ಸಚಿವ ಸಿಂಧ್ಯಾ ಪ್ರಚಾರ
ಕನಕಪುರ: ಮಾಜಿ ಸಚಿವ, ಜೆಡಿಎಸ್ಅಭ್ಯರ್ಥಿ ಪಿಜಿಆರ್ ಸಿಂಧ್ಯಾ ಕನಕಪುರ ಪಟ್ಟಣದ ಪೇಟೆಬೀದಿ, ಮುಸ್ಲೀಂ ಬ್ಲಾಕ್, ಮೆಳೇಕೋಟೆ, ಮೇಗಳಬೀದಿ ಪ್ರದೇಶಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಜೆಡಿಎಸ್ಮುಖಂಡರುಗಳಾದ ಬಿಎಸ್ಗೌಡ,ಅಬ್ದುಲ್ ವಾಜೀದ್, ಸರ್ದಾರ್,ಚಂದ್ರು,ಬಿ.ನಾಗರಾಜು,ಪುಟ್ಟರಾಜು ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಅಭ್ಯರ್ಥಿ ಸಿಂಧ್ಯಾ ಮಾತನಾಡುತ್ತಾ, ಕ್ಷೇತ್ರದ ಪರಿಸರವನ್ನು ಹಾಳುಗೆಡವಿ ಹಣಮಾಡಿರುವ ಶಾಸಕ ಶಿವಕುಮಾರ್ ಕನಕಕಪುರ ತಾಲೂಕಿನಲ್ಲಿ ದರ್ಪ, ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದರು.
ಕಂದಾಯ ಪಾವತಿ: ಜನರ ಪರದಾಟ
ವಿಜಯಪುರ: ಪುರಸಭೆ, ನಾಡಕಚೇರಿ ಹಾಗೂ ಕಂದಾಯ ಇಲಾಖೆಗಳ ಬಹುತೇಕ ಅಧಿಕಾರಿಗಳನ್ನು ಚುನಾವಣೆ ಕಾರ್ಯನಿಮಿತ್ತ ನೇಮಿಸಿರುವ ಕಾರಣ ಕಚೇರಿಯಲ್ಲಿ ಅಧಿಕಾರಿಗಳಿಲ್ಲದೆ ಸ್ಥಗಿತಗೊಂಡಿದೆ. ಕಂದಾಯ ಪಾವತಿಸಲು ಏ.30 ಕೊನೆಯ ದಿನವಾಗಿದ್ದು 15 ದಿನಗಳಿಂದ ಅಲೆದರೂ ನಮ್ಮ ಕೆಲಸವಾಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದರು. ರಾಜ್ಯದೆಲ್ಲೆಡೆ ಪುರಸಭೆಗಳ ಹಾಗೂ ನಗರ ಸಭೆಗಳ ಕಂದಾಯಗಳನ್ನು ಪಾವತಿಸಲು ಏ.30 ಕೊನೆಯ ದಿನವಾಗಿದ್ದು,ಇಲ್ಲಿನ ಪುರಸಭೆ ಕಚೇರಿಯಲ್ಲಿ ಕಂದಾಯ ಪಾವತಿಸಲು ಆಗಮಿಸುವ ನೂರಾರು ಮಂದಿ ಸಾರ್ವಜನಿಕರು ಸಿಬ್ಬಂದಿಗಳಾದರೂ ಕೈಗೆ ದೊರೆಯದೇ ಪದೇ ಪದೇ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಸಾರ್ವಜನಿಕರಿಗೆ ಸೂಕ್ತ ಮಾಹಿತಿ ಅಥವಾ ಕಂದಾಯ ವಿಸ್ತರಣೆ ಮಾಡಿರುವ ಬಗ್ಗೆ ಸೂಚನೆಗಳಿದ್ದರೆ ತಕ್ಷಣ ತಿಳಿಯಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.