ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ಕುಮಾರಸ್ವಾಮಿ ಕಣ್ಣೀರು ಹಾಸ್ಯಾಸ್ಪದ'

Mainashree
Updated On : 3 May 2013, 12:27 pm

ಕ.ಪ್ರ.ವಾರ್ತೆ  ಚನ್ನಪಟ್ಟಣ  ಮೇ.2-
ಅಧಿಕಾರದಲ್ಲಿದ್ದಾಗ ನಮ್ಮ ತಾಲೂಕಿಗೆ ಎಳ್ಳಷ್ಟೂ ಹಣಕಾಸು ನೀಡದ ಕುಮಾರಸ್ವಾಮಿ ಇದೀಗ ಈ ಕ್ಷೇತ್ರ ನನ್ನ ಕಣ್ಣಿದ್ದಂತೆ ಎಂಬುದಾಗಿ ಕಣ್ಣೀರಿಡುತ್ತಿರುವುದು ಹಾಸ್ಯಾಸ್ಪದ ಎಂದು ಮಾಜಿ ಸಚಿವ ಯೋಗೇಶ್ವರ್ ಅಣಕವಾಡಿದರು.
ತಾಲೂಕಿನ ಹೊಂಗನೂರು ಗ್ರಾಮದಲ್ಲಿ ಸಾರ್ವಜನಿಕರನ್ನುದ್ದೇಶಿ ಮಾತನಾಡಿ, ಕ್ಷೇತ್ರದಲ್ಲಿ ತಮ್ಮ ಪಕ್ಷದವರು ಗೆದ್ದಿಲ್ಲ ಎಂದು ದ್ವೇಷದ ರಾಜಕಾರಣ ನಡೆಸಿದವರು, ಕ್ಷೇತ್ರಕ್ಕೆ ಮುಖ್ಯಮಂತ್ರಿಯಾಗಿದ್ದಾಗ ನೀಡಿರುವ ಕೊಡುಗೆ ಏನೆಂಬುದಾಗಿ ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದರು.
ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಕ್ಷೇತ್ರದ ನೀರಾವರಿ ಯೋಜನೆ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ಸಾಕಷ್ಟು ಬಾರಿ ನೆರವು ಕೇಳಿದರೂ ಯಾವುದೇ ರೀತಿಯ ಸ್ಪಂದನೆ ದೊರೆಯಲಿಲ್ಲ. ಸಾರ್ವಜನಿಕರೆದುರು ನಾನು ಅವರ ಬಳಿ ಹೋಗಿಲ್ಲ ಎಂದು ಸುಳ್ಳು ಹೇಳುತ್ತಿರುವುದು ಸರಿಯಲ್ಲ ಎಂದರು.
ತಾಲೂಕಿನ ಜನತೆಯ ಕಣ್ಣೊರೆಸುವ ಕೆಲಸ ಮಾಡುತ್ತಿರುವ ಜೆಡಿಎಸ್ ಮುಖಂಡರ ಮಾತನ್ನು ಜನತೆ ನಂಬದೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ನನ್ನನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಸಾಧನೆ ನೋಡಿ ಮತಹಾಕಿ: ನಾನು ಮಂತ್ರಿಯಾಗಿ ತಾಲೂಕಿನ ಅಭಿವೃದ್ಧಿಗೆ ಅವ್ಯಾಹತವಾಗಿ ಶ್ರಮಿಸಿದ್ದೇನೆ. ಅಭಿವೃದ್ಧಿ ಕೆಲಸಗಳಿಗೆ ಸಾಕಷ್ಟು ಹಣಕಾಸನ್ನು ತಂದಿದ್ದು, ನಾನು ಮಂಜೂರು ಮಾಡಿಸಿರುವ ಯೋಜನೆಗಳನ್ನು ಪೂರ್ಣ ಗೊಳಿಸಲು ಕ್ಷೇತ್ರದ ಮತದಾರರು ನನ್ನನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ತಾಲೂಕಿನ ಜನತೆಯ ಅಭಿವೃದ್ಧಿ ಬಗ್ಗೆ ಸದಾಕಾಲ ಹೋರಾಟ ನಡೆಸುತ್ತಿದ್ದು, ತಾಲೂಕಿನ ಪ್ರತಿಯೊಬ್ಬ ವ್ಯಕ್ತಿಯೂ ಸ್ವಾವಲಂಬಿಯಾಗಿ ನಿಲ್ಲಬೇಕೆಂಬ ಉದ್ದೇಶದಿಂದ ನೀರಾವರಿ ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ನನ್ನ ಸಾಧನೆಗಳ ಬಗ್ಗೆ ಇತರರು ಪ್ರಮಾಣ ಪತ್ರ ನೀಡಬೇಕಿಲ್ಲ ಎಂದು ಟೀಕಾಕಾರಿಗೆ ತಿರುಗೇಟು ನೀಡಿದರು.
ಇದೇ ವೇಳೆ ತಗಚಗೆರೆ, ತಿಮ್ಮಸಂದ್ರ ಸೇರಿದಂತೆ ಹಲವು ಗ್ರಾಮಗಳಲ್ಲಿ ಯೋಗೇಶ್ವರ್ ಮತಯಾಚನೆ ಮಾಡಿದರು. ಮುಖಂಡರಾದ ಆರ್.ಎಂ.ಮಲವೇಗೌಡ, ಸಿಂಗರಾಜಪುರ ರಾಜಣ್ಣ, ಹರೂರು ರಾಜಣ್ಣ, ಸಿದ್ದರಾಮಣ್ಣ, ಸಿ.ಪಿ.ನಾಗೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement