ಕುಮಾರಸ್ವಾಮಿ ಸಿಎಂ ಆದ್ರೆ ಕಲ್ಯಾಣ ಕರ್ನಾಟಕ
ಕ.ಪ್ರ. ವಾರ್ತ್ಣೆ ಕನಕಪುರ ಮೇ 2
ಕರ್ನಾಟಕ ಕಲ್ಯಾಣ ರಾಜ್ಯವಾಗಬೇಕಾದರೆ ದಲಿತ, ಅಲ್ಪಸಂಖ್ಯಾತ, ಅಂಗವಿಕಲ, ಹಿಂದುಳಿದವರು, ರೈತರ ಅಭಿವೃದ್ಧಿ ಪಡಿಸುವ ಜನಪರ ಸರ್ಕಾರ ರಚನೆಯಾಗಬೇಕು, ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು ಎಂದು ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಹೇಳಿದರು.
ಅವರು ಕನಕಪುರದ ತಾಲೂಕು ಕ್ರೀಡಾಂಗಣದಲ್ಲಿ ಬೃಹತ್ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡುತ್ತಾ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿದ ಎಚ್.ಡಿ. ದೇವೇಗೌಡರು ಕರ್ನಾಟಕದ ಅಂಬೇಡ್ಕರ್ ಇದ್ದಂತೆ. ಕಾವೇರಿ ವಿವಾದ ಬಗೆಹರಿಸಿ ರಾಜ್ಯದ ರೈತರ ಹಿತ ಕಾಯಲು ಜೆಡಿಎಸ್ನಿಂದ ಮಾತ್ರ ಸಾಧ್ಯ. ಕನಕಪುರಕ್ಕೆ ಸ್ವಚ್ಛ, ಪ್ರಾಮಾಣಿಕ ಆಡಳಿತ ಬೇಕೇ ಹೊರತು ಕೊತ್ವಾಲ್ ಸಂಸ್ಕೃತಿ ಅಗತ್ಯವಿಲ್ಲ ಎಂದರು.
ಜೆಡಿಎಸ್ ಅಧಿಕಾರಕ್ಕೆ ಬಂದರೆ ಸುಪ್ರೀಂ ಕೋರ್ಟ್ನಲ್ಲಿ ಕಾವೇರಿ ವಿವಾದ ಬಗ್ಗೆ ರಿಟ್ ಅರ್ಜಿ ಸಲ್ಲಿಸಿ ಹೋರಾಟ ನಡೆಸುತ್ತದೆ. ಕನಕಪುರದ ತಹಸೀಲ್ದಾರ್ ಶಾಸಕರ ಏಜೆಂಟರಂತೆ ವರ್ತಿಸಿ ಪುರಸಭಾ ಚುನಾವಣೆಯಲ್ಲಿ ಜೆಡಿಎಸ್ ಸೋಲಿಗೆ ಕಾರಣರಾಗಿದ್ದಾರೆ. ಚುನಾವಣಾಧಿಕಾರಿಗಳು ಜೆಡಿಎಸ್ ಮೇಲೆ ವಿನಾಕಾರಣ ಒತ್ತಡ ಹೇರುತ್ತಿದ್ದಾರೆ ಎಂದು ಸಿಂಧ್ಯಾ ಆರೋಪಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಮುಖ್ಯಮಂತ್ರಿ, ಸಂಸದ ಎಚ್.ಡಿ. ಕುಮಾರಸ್ವಾಮಿ ಮಾತನಾಡುತ್ತಾ, ತಮಗೆ ರಾಜಕೀಯ ಪುನರ್ಜನ್ಮ ನೀಡಿದ ಕನಕಪುರದ ಋಣ ತೀರಿಸಬೇಕಾಗಿದೆ, ಇಲ್ಲಿ ನಡೆಯುತ್ತಿರುವ ಧರ್ಮಯುದ್ಧದಲ್ಲಿ ಸತ್ಯಕ್ಕೆ ಜಯವಾಗಬೇಕು. ರಾಜ್ಯದ ಬಿಜೆಪಿ ಸರ್ಕಾರ ಜನರ ಆಶಯಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಲು ವಿಫಲವಾಗಿ ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿದೆ. ಇವರ ಅನಾಚಾರಕ್ಕೆ ಕಾಂಗ್ರೆಸ್ ಬೆಂಗಾವಲಾಗಿ ನಿಂತಿದ್ದು, ವಿರೋಧಪಕ್ಷವಾಗಿ ಹೊಣೆಗಾರಿಕೆ ನಿರ್ವಹಿಸಲು ವಿಫಲವಾಗಿದೆ ಎಂದರು.
ಜೆಡಿಎಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲ ಗ್ರಾಮಗಳಿಗೂ 65 ಸಾವಿರ ಕೋಟಿ ವೆಚ್ಚದಲ್ಲಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು, ರೈತರ ಸಂಪೂರ್ಣ ಸಾಲ ಮನ್ನಾ, ಬಿಜೆಪಿ ಸರ್ಕಾರ ರದ್ದುಗೊಳಿಸಿರುವ 9 ಲಕ್ಷ ಪಿಂಚಣಿಯ ಮರುನೀಡಿಕೆ, 70 ವರ್ಷ ಮೀರಿದ ಹಿರಿಯ ನಾಗರಿಕರಿಗೆ ಮಾಸಿಕ 6 ಸಾವಿರ ನೀಡಿಕೆ ಮೊದಲಾದವುಗಳನ್ನು ಜಾರಿಗೊಳಿಸುವ ಆಶ್ವಾಸನೆ ನೀಡಿದರು.
ಹಗಲು ದರೋಡೆ ಶ್ರೀಮಂತ: ಪ್ರಾಸ್ತಾವಿಕ ನುಡಿಗಳನ್ನಾಡಿದ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಎಂ. ವಿಶ್ವನಾಥ್ ಮಾತನಾಡಿ, ಕನಕಪುರ ತಾಲೂಕಿನಲ್ಲಿ ದರ್ಪ, ದೌರ್ಜನ್ಯ, ದುರಾಡಳಿತ, ಮರಳು, ಗ್ರಾನೈಟ್ ಲೂಟಿಗಳು ಮೇರೆ ಮೀರಿವೆ. ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆಗಳನ್ನು ಹೂಡಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಜೆಡಿಎಸ್ ರಾಷ್ಟ್ರೀಯ ಕಾರ್ಯದರ್ಶಿ ಡ್ಯಾನಿಷ್ ಅಲಿ, ಮಾಜಿ ಶಾಸಕ ಕೆ.ಎಲ್.ಶಿವಲಿಂಗೇಗೌಡ, ಮರಿಲಿಂಗೇಗೌಡ, ಜೆಡಿಎಸ್ ಮುಖಂಡರುಗಳಾದ ಅಬ್ದುಲ್ವಾಜೀದ್, ಕೀರ್ತಿಹಾಸನ್, ತಂಬೂಶೆಟ್ರು, ಬಾಲನರಸಿಂಹ, ಸಿದ್ಧಮರಿ ಗೌಡ, ಬಿ.ಎಸ್.ಗೌಡ, ಪುಟ್ಟರಾಜು, ಚಂದ್ರು, ಬಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ನಾರಾಯಣಗೌಡ, ದೊಡ್ಡಕೊಪ್ಪ ಕೆ.ಎಲ್.ರಾಜು, ಮಾರೇಗೌಡ, ಹುಚ್ಚಪ್ಪ, ಬಿ.ನಾಗರಾಜು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಹಳ್ಳಿಗಳಿಂದ ಆಗಮಿಸಿದ್ದ 20 ಸಾವಿರಕ್ಕೂ ಹೆಚ್ಚುಮಂದಿ ಪಾಲ್ಗೊಂಡಿದ್ದರು. ಕೋಡಿಹಳ್ಳಿ ಹೋಬಳಿಯ ನೂರಾರು ಯುವಕರು ಮುಖಂಡರಾದ ಹಲಸೂರು ಸಿದ್ಧರಾಜು, ಕೋಡಿಹಳ್ಳಿ ಗಣೇಶ್ ನೇತೃತ್ವದಲ್ಲಿ 16 ಕಿಮೀ ಪಾದಯಾತ್ರೆ ಮೂಲಕ ಸಭೆಗೆ ಆಗಮಿಸಿದ್ದು ವಿಶೇಷವಾಗಿತ್ತು.