ಗಳಗಳನೆ ಅತ್ತ ಮಾಜಿ ಸಿಎಂ ಕುಮಾರಸ್ವಾಮಿ
ರಾಮನಗರ: ಅನಾರೋಗ್ಯದ ನಡುವೆಯೂ ಪತಿ ಎಚ್.ಡಿ.ಕುಮಾರಸ್ವಾಮಿ ರಾಜಕೀಯವಾಗಿ ನಡೆಸುತ್ತಿರುವ ಏಕಾಂಗಿ ಹೋರಾಟವನ್ನು ನೆನೆದು ಮೊನ್ನೆಯಷ್ಟೇ ಅನಿತಾ ಕುಮಾರಸ್ವಾಮಿ ಕಣ್ಣೀರಿಟ್ಟಿದ್ದರು. ಗುರುವಾರ ಬಿಡದಿಯಲ್ಲಿ ಪ್ರಚಾರ ಭಾಷಣ ಮಾಡುತ್ತಿದ್ದಾಗ ಸ್ವತಃ ಕುಮಾರಸ್ವಾಮಿಯೂ ಗಳಗಳನೆ ಅತ್ತಿದ್ದಾರೆ. ಮಾಗಡಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಬಿಡದಿಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿರುವ ಆಪ್ತಮಿತ್ರ ಎಚ್.ಸಿ.
ಬಾಲಕೃಷ್ಣ ಪರ ಮತಯಾಚಿಸಿ ಮಾತನಾಡುವಾಗ ರಾಜಕೀಯ ವಿರೋಧಿಗಳು ನಡೆಸುತ್ತಿರುವ ಅಪಪ್ರಚಾರದ ಬಗ್ಗೆ ಪ್ರಸ್ತಾಪಿಸಿ ಸುಮಾರು 2 ನಿಮಿಷ ಕುಮಾರಸ್ವಾಮಿ ಕಣ್ಣೀರಿಟ್ಟರು. ನನಗೆ ರಾಜಕೀಯವಾಗಿ ಜನ್ಮ ನೀಡಿರುವುದು ರಾಮನಗರ ಜಿಲ್ಲೆ. ನಾನು ರಾಮನಗರದ ಮನೆಮಗ. ಮಣ್ಣಿನಲ್ಲಿ ಮಣ್ಣಾಗುವವರೆಗೆ ಈ ನೆಲ ಬಿಟ್ಟು ಎಲ್ಲೂ ಹೋಗುವುದಿಲ್ಲ. ನಾನು ರಾಜ್ಯಾದ್ಯಂತ ನಡೆಸುತ್ತಿರುವ ಹೋರಾಟ ಸ್ವಹಿತಾಸಕ್ತಿಗಲ್ಲ. ಪಟ್ಟಭದ್ರ ಹಿತಾಸಕ್ತಿಗಳು ನನ್ನನ್ನು ವಾಮಮಾರ್ಗದಲ್ಲಿ ಹಣಿಯಲು ಸಂಚು ನಡೆಸಿವೆ ಎಂದರು.
ರಾಮನಗರ ಜನತೆಯು ಕುಮಾರಸ್ವಾಮಿ ಎನ್ನುವ ಸಸಿ ನೆಟ್ಟು ಪೋಷಿಸಿದ್ದಾರೆ. ಬೆಳೆದಿರುವ ಈ ಹೆಮ್ಮರಕ್ಕೆ ಅವರೆಂದೂ ಕೊಡಲಿ ಹಾಕುವುದಿಲ್ಲ ಎನ್ನುವ ವಿಶ್ವಾಸವಿದೆ. ಕಾಂಗ್ರೆಸಿಗರು ನಡೆಸುತ್ತಿರುವ ಅಪಪ್ರಚಾರಕ್ಕೆ ಯಾರೂ ಕಿವಿಗೊಡಬಾರದು. ನಾನು ಎಲ್ಲೇ ಇರಲಿ, ಹೇಗೇ ಇರಲಿ ತಿಂಗಳಲ್ಲಿ ಎರಡು ದಿನ ರಾಮನಗರಕ್ಕೆ ಭೇಟಿ ಖಚಿತ ಎಂದು ಭರವಸೆ ನೀಡಿದರು.