ಪ್ಲಾಸ್ಟಿಕ್, ಫೈಬರ್ ವಾದ್ಯ ಬಳಕೆ ವಿಷಾದದ ಸಂಗತಿ
ಕ.ಪ್ರ.ವಾರ್ತೆ, ರಾಮನಗರ, ಮೇ 2-
ಇತ್ತೀಚಿನ ದಿನಗಳಲ್ಲಿ ಜಾನಪದ ಸಂಗೀತ ಕ್ಷೇತ್ರದಲ್ಲಿ ಮೂಲ ಪರಂಪರೆಯ ಚರ್ಮ ವಾದ್ಯಗಳ ಬದಲಿಗೆ ಪ್ಲಾಸ್ಟಿಕ್, ಫೈಬರ್ ವಾದ್ಯಗಳನ್ನು ಬಳಸುತ್ತಿರುವುದು ವಿಷಾದದ ಸಂಗತಿಯಾಗಿದೆ. ಪರಂಪರೆಯ ಮೂಲ ಚರ್ಮ ವಾದ್ಯಗಳನ್ನು ತಯಾರು ಮಾಡಿಕೊಂಡು ಭಾರಿಸುವ ನಾದಕ್ಕೂ ಫೈಬರ್ ವಾದ್ಯಗಳ ನಾದಕ್ಕೂ ಬಹಳ ವ್ಯತ್ಯಾಸವಿದೆ.
ಮೂಲ ತಲೆಮಾರಿನ ವಾದ್ಯಗಳನ್ನೇ ತಯಾರು ಮಾಡಿಕೊಂಡು ನುಡಿಸುವುದನ್ನು ಕಲಾವಿದರುಗಳಿಗೆ ತಿಳಿಸಿಕೊಡಲು ವಾದ್ಯ ತಯಾರು ಮಾಡಿಕೊಳ್ಳುವ ಕಾರ್ಯಾಗಾರವನ್ನು ಕರ್ನಾಟಕ ಜಾನಪದ ಅಕಾಡೆಮಿಯು ಆಯೋಜಿಸಿದೆ.
ಕಾರ್ಯಾಗಾರದಲ್ಲಿ ರಾಜ್ಯ ಮಟ್ಟದ ಚರ್ಮ ವಾದ್ಯ ತಯಾರಿಕಾ ಕಮ್ಮಟ ನಂತರ ರಾಜ್ಯ ಮಟ್ಟದ ಚರ್ಮ ವಾದ್ಯ ಸಮ್ಮೇಳನ ಮತ್ತು ವಿದ್ವಾಂಸರಿಂದ ಜಾನಪದ ಚರ್ಮ ವಾದ್ಯಗಳ ಕುರಿತು ವಿಚಾರ ಸಂಕಿರಣ ನಡೆಯಲಿದೆ.
ಹಲಿಗೆ ವಾದನ, ಡಮರುಗ ವಾದನ, ಡೊಳ್ಳಿನ ಕೈಪಟ್ಟು, ನಗಾರಿ ವಾದ್ಯ, ಗುಮ್ಮಟೆ ವಾದ್ಯ, ಚಂಡೆ ವಾದ್ಯ, ಸೂರ್ಯ ವಾದ್ಯ, ಕರಡಿ ಮಜರು, ಡೊಳ್ಳು ವಾದ್ಯ, ತಮಟೆ ವಾದನ, ಜಗಲಿಗೆ ವಾದನ, ಮದ್ದನೆ ವಾದನ, ಗೀಗೀ ಮೇಳ, ತಾರಸಿ ವಾದ್ಯ, ಚಂದ್ರ ವಾದ್ಯ, ಚೌಡಿಕೆ ವಾದ್ಯ, ಉರುಮೆ, ಚಿಟ್ಟಿಹಲಗೆ ವಾದನ, ಕೋಣಿಮೀ ವಾದ್ಯ, ದುಡಿ ಕಂಜರಿ ವಾದನ ತಾಸೆ ವಾದನ, ಸಂಪ್ರದಾನೆ ವಾದನ, ರಣಹಲಿಗೆ ವಾದನ ಪ್ರಕಾರಗಳ ಚರ್ಮವಾದ್ಯಗಳನ್ನು ತಯಾರಿಸುವವರು, ಚರ್ಮ ವಾದ್ಯ ಮೇಳಗಳ ಮುಖ್ಯಸ್ಥರು ತಮ್ಮ ಸಂಪೂರ್ಣ ವಿಳಾಸದ ಮಾಹಿತಿಯನ್ನು ಮೇ 30ರೊಳಗೆ ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡಮಿ, 2ನೇ ಮಹಡಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002 ಇವರಿಗೆ ಕಳುಹಿಸಿಕೊಡಲು ಕೋರಿದೆ.
ಹೆಚ್ಚಿನ ಮಾಹಿತಿಗೆ ದೂ 080-22215509 ಸಂಪರ್ಕಿಸಲು ಕೋರಿದೆ.