ಬೀದಿವ್ಯಾಪಾರಿಗಳಿಗೆ ಬಡ್ಡಿ ರಹಿತ ಸಾಲ'
ನೆಲಮಂಗಲ: ಬೀದಿ ಬದಿ ವ್ಯಾಪಾರಿಗಳಿಗೆ ಬಡ್ಡಿ ರಹಿತ ಸಾಲ ನೀಡಿ ಆರ್ಥಿಕ ಸ್ವಾವಲಂಬಿಗಳಾಗಲು ವಿಶೇಷ ಯೋಜನೆಯನ್ನು ರೂಪಿಸಿದ್ದೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನುಡಿದರು. ಅವರು ಗುರುವಾರ ಪಟ್ಟಣದ ಬಿ.ಹೆಚ್.ರಸ್ತೆಯಲ್ಲಿ ಜೆಡಿಎಸ್ ಅಭ್ಯರ್ಥಿ ಡಾ.ಕೆ.ಶ್ರೀನಿವಾಸಮೂರ್ತಿ ಪರ ರೋಡ್ ಶೋ ನಡೆಸಿ ಮತ ಯಾಚಿಸಿ ಮಾತನಾಡಿದರು. ತಮ್ಮ ಪಕ್ಷ ಆಡಳಿತಕ್ಕೆ ಬಂದರೆ ಹಲವಾರು ಯೋಜನೆ ಜಾರಿಗೊಳಿಸಲಿದೆ ಎಂದು ಅವರು ತಿಳಿಸಿದರು.
ಟೈರ್ ಪಂಕ್ಚರ್: 60 ಮಂದಿ ಪಾರು
ಸೂಲಿಬೆಲೆ: ಚಲಿಸುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಒಂದರ ಮುಂಭಾಗ ಟೈರು ಪಂಕ್ಚರ್ ಆದ ಪರಿಣಾಮ ನಿಯಂತ್ರಣ ತಪ್ಪಿದ್ದ ಬಸ್ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಬಸ್ಸಿನಲ್ಲಿದ್ದ 60 ಮಂದಿ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಇಲ್ಲಿಗೆ ಸಮೀಪದ ನಂದಗುಡಿ ಹೋಬಳಿಯರಾಷ್ಟ್ರೀಯ ಹೆದ್ದಾರಿ-4 ರಲ್ಲಿ ಬುಧವಾರ ಕೋಲಾರ, ಬೆಂಗಳೂರು ಮಾರ್ಗವಾಗಿ ಚಲಿಸುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಬಸ್ ಎಂ.ಹೊಸ ಹಳ್ಳಿ ಗೇಟ್ ಬಳಿ ಬಸ್ಸಿನ ಬಲಭಾಗದ ಟೈರು ಒಡೆದು ಪಂಕ್ಚರಾಗಿ ಸ್ಫೋಟಗೊಂಡಿತು. ಇದರಿಂದ ವೇಗವಾಗಿದ್ದ ಬಸ್ ನಿಯಂತ್ರಣ ತಪ್ಪಿ ಮತ್ತೊಂದು ರಸ್ತೆಯ ಡಿವೈಡರ್ಗೆ ಡಿಕ್ಕಿ ಹೊಡೆಯಿತು. ಇದರ ಮುಂಭಾಗದಲ್ಲಿ ದೊಡ್ಡ ಮೋರಿಯನ್ನು ಗಮನಿಸಿದ ಚಾಲಕ ವಾಹನವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಅಪಾಯವಾಗದಂತೆ ನಿಲ್ಲಿಸಿದ. ಇದರಿಂದ ಬಸ್ಸಿನಲ್ಲಿದ್ದ 60 ಪ್ರಯಾಣಿಕರು ನಿಟ್ಟುಸಿರು ಬಿಟ್ಟರು.