ರಾಜ್ಯದಲ್ಲಿ ಕುಮಾರ ಪರ್ವ ಆರಂಭ
ಕ.ಪ್ರ.ವಾರ್ತ್ಣೆ ಮಾಗಡಿ ಮೇ.2
ಎಚ್.ಸಿ. ಬಾಲಕೃಷ್ಣ ನನ್ನ ಸಹೋದರನಿದ್ದಂತೆ, ಆತನಿಗೆ ಮಂತ್ರಿಯಾಗುವ ಯೋಗವಿದೆ, ಬಾಲಕೃಷ್ಣ ಅವರನ್ನು 30 ಸಾವಿರ ಮತಗಳ ಅಂತರದಿಂದ ಮತದಾರರು ಗೆಲ್ಲಿಸಿ. ಕ್ಷೇತ್ರಕ್ಕೆ ಶಾಶ್ವತವಾದ ನೀರಾವರಿ ಯೋಜನೆ ತರುವ ಸಂಕಲ್ಪ ಮಾಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಅವರು ಮಾಗಡಿ ಕೆಂಪೇಗೌಡ ಬಯಲು ರಂಗಮಂದಿರದಲ್ಲಿ ಜೆಡಿಎಸ್ ಏರ್ಪಡಿಸಿದ್ದ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿ ಕುಮಾರ ಪರ್ವ ಆರಂಭಗೊಂಡಿದೆ. ರಾಜ್ಯದಲ್ಲಿ ಈ ಬಾರಿ ಜೆಡಿಎಸ್ ್ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧಿಸಿದೆ. 40 ರಿಂದ 50 ಸ್ಥಾನಗಳನ್ನು ಜೆಡಿಎಸ್ ಗೆಲ್ಲುತ್ತದೆ ಎಂದು ಮಾಧ್ಯಮಗಳು ಹೇಳುತ್ತಿವೆ. ಆದರೆ ನನ್ನ ಪ್ರಕಾರ 121 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ನಾಡಿನ ಚರಿತ್ರೆಯೇ ಬದಲಾಗಲಿದೆ ಎಂದರು.
ಎಚ್.ಸಿ.ಬಾಲಕೃಷ್ಣ ಅವರಿಗೆ ಮಂತ್ರಿಯೋಗ ಇರುವುದರಿಂದ ಮತದಾರರು ಬೇರೆ ಪಕ್ಷದ ಅಭ್ಯರ್ಥಿಗಳ ಬಗ್ಗೆ ಚಿಂತೆ ಬಿಡಿ, ದುಡಿಮೆಗೆ ಇನ್ನೊಂದು ಹೆಸರೇ ಎಚ್.ಸಿ. ಬಾಲಕೃಷ್ಣ ಎಂದರು.
ಪಕ್ಷದ ಆರೋಗ್ಯ ಬಹಳ ಮುಖ್ಯ: ಬೇಸಿಗೆ, ಬಿರುಬಿಸಿಲಿನಲ್ಲಿ ಚುನಾವಣಾ ಪ್ರಚಾರದ ಮಾಡುತ್ತಿದ್ದು, ನನ್ನ ಆರೋಗ್ಯದಲ್ಲಿ ಏರುಪೇರಾಗಿದೆ. ಆದರೂ ಪರವಾಗಿಲ್ಲ, ನನಗೆ ನನ್ನ ಆರೋಗ್ಯಕ್ಕಿಂತ ಪಕ್ಷದ ಆರೋಗ್ಯ ಮತ್ತು ಜನರ ಹಿತ ಬಹಳ ಮುಖ್ಯ ಎಂದು ಎಚ್ಡಿಕೆ ತಿಳಿಸಿದರು.
ಕಾಂಗ್ರೆಸ್, ಬಿಜೆಪಿ ವಿರುದ್ಧ ವಾಗ್ದಾಳಿ: 6 ದಶಕಗಳ ಕಾಲ ಆಡಳಿತ ನಡೆಸಿರುವ ಕಾಂಗ್ರೆಸ್ನಿಂದ ರಾಜ್ಯದ ಜನತೆಗೆ ಸಾಮಾಜಿಕ ನ್ಯಾಯ ಸಿಗಲಿಲ್ಲ. ಕಾವೇರಿ ನೀರಾವರಿ ನ್ಯಾಯಾಧೀಕರಣದಲ್ಲೂ ನಿರ್ಣಯ ಕೈಗೊಳ್ಳಲು ಕಾಂಗ್ರೆಸ್ ವಿಫಲವಾಗಿದೆ. ಕಾಂಗ್ರೆಸ್ ನಾಯಕರಿಂದ ಹೆಲಿಕಾಪ್ಟರ್ ಹಗರಣ ನಡೆದಿದೆ. ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಹೆಸರಿನಲ್ಲಿ ಮತ ಹಾಕಿಸಿಕೊಂಡು ಸೌಲತ್ತು ನೀಡದೆ ಜನತೆಗೆ ಅನ್ಯಾಯ ಮಾಡಿದೆ ಎಂದರು.
ಜಿ.ಪಂ. ಅಧ್ಯಕ್ಷ ಮುದ್ದುರಾಜ ಯಾದವ್, ಅ.ದೇವೇಗೌಡ, ಬಮೂಲ್ ನಿರ್ದೇಶಕ ನರಸಿಂಹಮೂರ್ತಿ, ರೂಪೇಶ್, ಮೂರ್ತಿ, ನಾಗರಾಜು, ಸೂರಪ್ಪ, ಜಯರಾಮಯ್ಯ, ಎಂ. ನಾಗರಾಜು, ಜಯಕುಮಾರ್ ಇತರರಿದ್ದರು.