'ಶಾಶ್ವತ ನೀರಾವರಿಗಾಗಿ ಜೆಡಿಎಸ್‌ಗೆ ಮತ ನೀಡಿ'
ಕ.ಪ್ರ.ವಾರ್ತೆ ದೇವನಹಳ್ಳಿ ಮೇ 2
ಬಯಲುಸೀಮೆ ಜಿಲ್ಲೆಗಳ ರೈತರ ಪ್ರಮುಖ ಬೇಡಿಕೆಯಾಗಿರುವ ಶಾಶ್ವತ ನೀರಾವರಿ ಯೋಜನೆಗೆ ಪ್ರಥಮ ಆದ್ಯತೆ ನೀಡುವ ಭರವಸೆ ಕೊಟ್ಟಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿರವರ ಜೆಡಿಎಸ್‌ಗೆ ಮತ ನೀಡಬೇಕೆಂದು ನೀರಾವರಿ ತಜ್ಞ ಮಧು ಸೀತಪ್ಪರವರು ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈಗಾಗಲೇ ರಾಜ್ಯ ಸರ್ಕಾರ ಎತ್ತಿನ ಹೊಳೆ ಯೋಜನೆಗೆ ಹಣ ಬಿಡುಗಡೆ ಮಾಡಿದ್ದರೂ ಈ ಯೋಜನೆಗೆ ಮುಖ್ಯವಾಗಿ ಅಗತ್ಯವಾಗಿರುವ ಕೇಂದ್ರ ಪರಿಸರ ಅರಣ್ಯ ಇಲಾಖೆ ಒಪ್ಪಿಗೆ ನೀಡಿರುವುದಿಲ್ಲ. ಇಲಾಖೆಯ ಒಪ್ಪಿಗೆ ಇಲ್ಲದೆ ಯೋಜನೆ ಅನುಷ್ಠಾನಕ್ಕೆ ಬರಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಎತ್ತಿನ ಹೊಳೆ ಯೋಜನೆಯಂತೆ ಬಯಲು ಸೀಮೆ ಜಿಲ್ಲೆಗಳಿಗೆ 24 ಟಿಎಂಸಿ ನೀರು ಲಭ್ಯವಿದೆ ಎಂದು ಸರ್ಕಾರ ತಿಳಿಸುತ್ತದೆ. ಆದರೆ ವಾಸ್ತವವಾಗಿ 4 ಟಿಎಂಸಿ ಮಾತ್ರ ನೀರು ಲಭ್ಯವಿದೆ. ಈ ಯೋಜನೆ ಕಾರ್ಯರೂಪಕ್ಕೆ ಬಂದರೂ ನಿರೀಕ್ಷಿತ ನೀರು ಎಲ್ಲ ಜಿಲ್ಲೆಗಳಿಗೆ ಹರಿಸಲು ಸಾಧ್ಯವಿರುವುದಿಲ್ಲ ಎಂದು ಮಧು ಸೀತಪ್ಪರವರು ತಿಳಿಸಿ ಮುಂದಿನ ದಿನಗಳಲ್ಲಿ ಯಾವುದೇ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರಲಿ ಶಾಶ್ವತ ನೀರಾವರಿ ಯೋಜನೆ ಬಗ್ಗೆ ಡಾ.ಪರಮಶಿವಯ್ಯರವರ ಮತ್ತು ನೀರಾವರಿ ತಜ್ಞರ ಸಲಹೆ ಪಡೆದು ಯೋಜನೆ ಕಾರ್ಯರೂಪಕ್ಕೆ ಬರಬೇಕು. ಬಯಲು ಸೀಮೆ ಜಿಲ್ಲೆಗಳ ಪ್ರಜಾ ಪ್ರತಿನಿಧಿಗಳ ರಾಜಕೀಯ ಇಚ್ಚಾಶಕ್ತಿ ಇದ್ದರೆ ಮಾತ್ರ ಶಾಶ್ವತ ನೀರಾವರಿ ಯೋಜನೆ ಕಾರ್ಯರೂಪಕ್ಕೆ ಬರಲು ಸಾಧ್ಯ ಎಂದರು. ಈ ಸಂಧರ್ಭದಲ್ಲಿ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಆರ್.ಎನ್.ಕೃಷ್ಣಮೂರ್ತಿ, ತಾಲೂಕು ಜೆಡಿಎಸ್ ಅಧ್ಯಕ್ಷ ಮುನಿಶಾಮಯ್ಯ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಮುನಿರಾಜು ಹಾಗೂ ಸಂಚಾಲಕರಾದ ಕಲ್ಯಾಣಕುಮಾರ್ ಉಪಸ್ಥಿತರಿದ್ದರು.