ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಶಾಸಕ ಕೆ.ರಾಜುರಿಂದ ಬಿರುಸಿನ ಪ್ರಚಾರ

Rashmi Kasaragodu
Updated On : 3 May 2013, 1:02 am

ಕನಕಪುರ: ರಾಮನಗರ ಶಾಸಕ ಕೆ.ರಾಜು ಕನಕಪುರ ತಾಲೂಕಿನ ಕೊಟ್ಟಗಾಳು ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಜಾತ್ಯತೀತ ಜನತಾದಳ ಅಭ್ಯರ್ಥಿ, ಸಂಸದ ಎಚ್.ಡಿ.ಕುಮಾರಸ್ವಾಮಿ ಪರವಾಗಿ ಚುನಾವಣಾ ಪ್ರಚಾರ ನಡೆಸಿದರು. ಜೆಡಿಎಸ್ ರಾಜ್ಯಪ್ರಧಾನ ಕಾರ್ಯದರ್ಶಿ ಮರಿಲಿಂಗೇಗೇಗೌಡ, ದೇವುರಾವ್ ಜಾಧವ್, ಗೊಲ್ಲಹಳ್ಳಿ ಸುರೇಶ್ ಪಾದಯಾತ್ರೆ ಮೂಲಕ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಗ್ರಾಮದ ಯುವಮುಖಂಡ ಕೆ.ರಾಜು ನೇತೃತ್ವದಲ್ಲಿ 25ಕ್ಕೂ ಹೆಚ್ಚು ಯುವಕರು ಜೆಡಿಎಸ್‌ಗೆ ಸೇರಿದರು. ಕಾಡುಜಕ್ಕಸಂದ್ರ ಗ್ರಾಮದಲ್ಲಿ ಮುಖಂಡ ಶಿವಕುಮಾರ್‌ನೇತೃತ್ವದಲ್ಲಿ 60 ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್‌ಪಕ್ಷವನ್ನು ತೊರೆದು ಜೆಡಿಎಸ್‌ಗೆ ಸೇರ್ಪಡೆಗೊಂಡರು. ಮುಖಂಡರಾದ ಸೋಮಶೇಖರ್,ಚಂದ್ರಶೇಖರ್,ಭುಜಂಗಯ್ಯ ಪಾಲ್ಗೊಂಡಿದ್ದರು.
ಜೆಡಿಎಸ್ ಮುಖಂಡರ ರೋಡ್ ಶೋ
ದೇವನಹಳ್ಳಿ: ದೇವನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿ ಪಿಳ್ಳಮುನಿಶಾಮಪ್ಪರವರು ಪಟ್ಟಣದಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಸಂಸದರಾದ ಸಿ.ನಾರಾಯಣಸ್ವಾಮಿ, ಪುರಸಭಾ ಸದಸ್ಯರಾದ ವೈ.ಸಿ. ಸತೀಶ್‌ಕುಮಾರ್, ಎಸ್.ಆರ್. ರಾಮಕೃಷ್ಣ ಹಾಗೂ ತಾಲೂಕು ಅಧ್ಯಕ್ಷರಾದ ಮುನಿಶಾಮಯ್ಯ ಭಾಗವಹಿಸಿದ್ದರು.
ಕಾಂಗ್ರೆಸ್ ಅಭ್ಯರ್ಥಿ ಮರಿದೇವರಿಗೆ ಬೆಂಬಲ
ರಾಮನಗರ: ಛಲವಾದಿ ಮಹಾಸಭಾ ಈ ಬಾರಿ ಚುನಾವಣೆಯಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್ ಬೆಂಬಲಿಸುತ್ತಿದೆ. ಅಂತೆಯೇ ರಾಮನಗರದಲ್ಲೂ ಕಾಂಗ್ರೆಸ್ ಅಭ್ಯರ್ಥಿ ಮರಿದೇವರು ಅವರನ್ನು ಬೆಂಬಲಿಸಲಾಗುತ್ತಿದೆ ಎಂದು ಸಭಾದ ತಾಲೂಕು ಅಧ್ಯಕ್ಷ  ನಟರಾಜ್ ಘೋಷಿಸಿದರು. ಸಂಘಟನೆಯ ರಾಜ್ಯಾಧ್ಯಕ್ಷ ಕೆ.ಶಿವರಾಂ ಸೂಚನೆ ಮೇರೆಗೆ ಎಲ್ಲ ಛಲವಾದಿಗಳು ಕಾಂಗ್ರೆಸ್ ಪರ ಸಕ್ರಿಯರಾಗಿದ್ದೇವೆ. ಜನಾಂಗದವರಾದ ಪರಮೇಶ್ವರ್ ಅವರು ಸಂಭವನೀಯ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿ ಆಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.   ದಲಿತರ ಉದ್ಧಾರ ಕೇವಲ ಕಾಂಗ್ರೆಸ್‌ನಿಂದಷ್ಟೇ ಸಾಧ್ಯ. ಅನ್ಯ ಪಕ್ಷಗಳು ದಲಿತರನ್ನು ಅಭಿವೃದ್ಧಿಯನ್ನು ಕಡೆಗಣಿಸಿವೆ ಎಂದು ಟೀಕಿಸಿದರು. ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕೆ.ಶೇಷಾದ್ರಿ, ಎಸ್.ಸುರೇಶ್, ಸಂಘಟನೆ ಪದಾಧಿಕಾರಿಗಳಾದ ಎಂ.ಸಿ.ಶಿವಲಿಂಗಯ್ಯ, ಮುಹೀಬ್ ಪಾಷ, ಎಚ್.ಸಿ.ರಾಮಯ್ಯ, ರಾಜೇಶ ಹಾಜರಿದ್ದರು.
ಸೃಜನಶೀಲತೆ
ಮನನ ಶಿಬಿರ
ರಾಮನಗರ: ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಸಾಮರ್ಥ್ಯವನ್ನು ವೃದ್ಧಿಸುವ ಉದ್ದೇಶದಿಂದ ಕರ್ನಾಟಕ ಜಾನಪದ ಪರಿಷತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಮೇ 6ರಿಂದ 7ರವರೆಗೆ ಜಾನಪದ ಲೋಕದಲ್ಲಿ ಸೃಜನಶೀಲತೆ ಮತ್ತು ಭಾಷೆ  ಜನಪದ ಸಾಹಿತ್ಯ ಸಂದರ್ಭ ಮನನ ಶಿಬಿರವನ್ನು ಆಯೋಜಿಸಿದೆ.  ಶಿಬಿರದಲ್ಲಿ ಗಾದೆಗಳು, ಭಾಷೆ, ಜನಪದ ಪ್ರದರ್ಶನ ಕಲೆಗಳು, ಜನಪದ ಹಾಡುವಿಕೆ, ಅಲೆಮಾರಿ ಸಾಹಿತ್ಯ ಭಾಷೆ ಮತ್ತು ಸೃಜನಶೀಲತೆ ಕುರಿತು ಆಯಾ ಪ್ರಕಾರಗಳ ಅನುಭವಿ ಕಲಾವಿದರು ಅಧ್ಯಾಪನ ನೀಡುವರು. ಶಿಬಿರದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಸಾಹಿತ್ಯಾಸಕ್ತರು ಜಾನಪದ ಲೋಕದ ಸಂಯೋಜನಾಧಿಕಾರಿಯನ್ನು ಖುದ್ದಾಗಿ ಅಥವಾ ಮೊ. 9448553375 ಸಂಪರ್ಕಿಸಿ.
ಮುನೇಗೌಡರ ಆಟೋ ಜಾಥಾ ಇಂದು
ದೊಡ್ಡಬಳ್ಳಾಪುರ: ಜೆಡಿಎಸ್ ಬಂಡಾಯವಾಗಿ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಿ.ಮುನೇಗೌಡ ತಮ್ಮ ಗುರುತಾಗಿರುವ ಆಟೋಗೆ ಮತ ನೀಡುವಂತೆ ಒತ್ತಾಯಿಸಿ ಶುಕ್ರವಾರ ದೊಡ್ಡಬಳ್ಳಾಪುರ ನಗರದಲ್ಲಿ ಬೃಹತ್  ಆಟೋ ಜಾಥಾ  ಹಮ್ಮಿಕೊಂಡಿದ್ದಾರೆ. ಬೆಳಗ್ಗೆ 10 ಗಂಟೆಗೆ ಇಲ್ಲಿನ ತುಮಕೂರು ಮುಖ್ಯರಸ್ತೆಯಲ್ಲಿರುವ ಬಸವಭವನದ ಮುಂಭಾಗದಿಂದ ಆಟೋ ಜಾಥಾ ಹೊರಡಲಿದ್ದು, ಸಹಸ್ರಾರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಭಾಗವಹಿಸಲಿದ್ದಾರೆ. ಈ ಮೂಲಕ ದೊಡ್ಡಬಳ್ಳಾಪುರ ನಗರದಲ್ಲಿ ಚುನಾವಣಾ ಪ್ರಚಾರ ರೋಡ್ ಶೋ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement