ನಗರಸಭೆ ಅಧಿಕಾರಿ 'ಲೋಕಾ' ಬಲೆಗೆ
ರಾಮನಗರ: ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡಲು 2 ಸಾವಿರ ಲಂಚ ಸ್ವೀಕರಿಸುತ್ತಿದ್ದ ನಗರಸಭೆ ಅಧಿಕಾರಿ ಹಾಗೂ ಹೊರ ಗುತ್ತಿಗೆಯಡಿ ಕೆಲಸ ನಿರ್ವಹಿಸುತ್ತಿದ್ದ ಮಹಿಳಾ ಸಿಬ್ಬಂದಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ನಗರಸಭೆ ಎಂಜಿನಿಯರ್ ಪ್ರಕಾಶ್ ಹಾಗೂ ಹೊರ ಗುತ್ತಿಗೆಯಡಿ ಕಂಪ್ಯೂಟರ್ ಆಪರೇಟರ್ ಆಗಿರುವ ಚಂದಾಬಾಯಿ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದವರು. ಕೆ.ಎನ್.ಶಿವಲಿಂಗಯ್ಯ ಎಂಬವರು ನೀಡಿದ್ದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು. ಶಿವಲಿಂಗಯ್ಯ ಅವರು ಪತ್ನಿ ಹೆಸರಿನಲ್ಲಿ ಶಾಂತಿಲಾಲ್ ಬಡಾವಣೆಯಲ್ಲಿ ನಿವೇಶನ ಖರೀದಿಸಿದ್ದು, ಅದರಲ್ಲಿ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ಕೋರಿ ಅರ್ಜಿ ಸಲ್ಲಿಸಿದ್ದರು. ಇದಕ್ಕಾಗಿ ಎಂಜಿನಿಯರ್ ಪ್ರಕಾಶ್ 5 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಪ್ರಕಾಶ್ ಸೂಚನೆ ಮೇರೆಗೆ ಶಿವಲಿಂಗಯ್ಯ ಅವರು ಚಂದಾಬಾಯಿ ಅವರಿಗೆ ಲಂಚ ನೀಡುತ್ತಿದ್ದರು. ಆಗ ಲೋಕಾಯುಕ್ತ ಇನ್ಸ್‌ಪೆಕ್ಟರ್ ಬಿ.ಆರ್.ಪ್ರದೀಪ್ ನೇತೃತ್ವದ ತಂಡ ದಾಳಿ ನಡೆಸಿತು. ಆರೋಪಿಗಳನ್ನು ಬಂಧಿಸಿ, ಪ್ರಕರಣ ದಾಖಲಿಸಲಾಗಿದೆ.