ಬಿಜೆಪಿಗೆ ನಾಯಕ ಸಮಾಜ ಬೆಂಬಲ
ಸೂಲಿಬೆಲೆ: ಹೊಸಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡರಿಗೆ ವಾಲ್ಮೀಕಿ ಸಮುದಾಯದ ಬೆಂಬಲ ನೀಡುತ್ತಿರುವುದಾಗಿ ನಾಯಕ ಸಮುದಾಯದ ಮುಖಂಡ ಮುತ್ಸಂದ್ರ ಮುನಿರಾಜ್ ಹೇಳಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಹೊಸಕೋಟೆ ಕ್ಷೇತ್ರದಲ್ಲಿ ವಾಲ್ಮೀಕಿ ಭವನ ಮತ್ತು ಈ ಸಮುದಾಯದ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆ ಜಾರಿ ಮಾಡಿ ಸಮುದಾಯವನ್ನು ಅಭಿವೃದ್ಧಿಪಡಿಸುವಲ್ಲಿ ಇಚ್ಛಾಶಕ್ತಿ ತೋರಿರುವ ಸಚಿವ ಬಚ್ಚೇಗೌಡರನ್ನು ಈ ಬಾರಿಯೂ ಗೆಲ್ಲಿಸುವಲ್ಲಿ ನಾಯಕ ಸಮುದಾಯ ಶ್ರಮಿಸಲಿದೆ ಎಂದು ತಿಳಿಸಿದ್ದಾರೆ.
ಮತದಾನಕ್ಕೆ ಸಿದ್ಧತೆ
ನೆಲಮಂಗಲ: ಮೇ 5 ರಂದು ನಡೆಯಲಿರುವ ವಿಧಾನಸಭಾ ಕ್ಷೇತ್ರದ ಚುನಾವಣೆಗೆ 243 ಮತದಾನ ಕೇಂದ್ರಗಳಿಗೆ ಅವಶ್ಯಕ ಸಿಬ್ಬಂದಿ ಹಾಗೂ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಗೊಳಿಸಲಾಗಿದೆ ಎಂದು ಚುನಾವಣಾಧಿಕಾರಿ ಅಮರೇಶ್ ತಿಳಿಸಿದ್ದಾರೆ. ಕ್ಷೇತ್ರದ 243 ಮತಗಟ್ಟೆಗಳಲ್ಲಿ ಒಟ್ಟಾರೆ 1152 ಸಿಬ್ಬಂದಿ ಹಾಗೂ 20 ಜನ ರೂಟ್ ಆಫೀಸರ್‌ಸ್ 138 ಜನ ಮೈಕ್ರೋ ಅಬ್ಸರ್ವರ್ಸ್ ಸೇರಿದಂತೆ ಅರೆ ಮಿಲಿಟರಿ, ಹೋಂಗಾರ್ಡ್, ಪೊಲೀಸರು ಸೇರಿ 2 ಸಾವಿರಕ್ಕೂ ಅಧಿಕ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.