ರಾಮನಗರದಲ್ಲಿ ಮೆರವಣಿಗೆ
ರಾಮನಗರ: ರಾಮನಗರದ ಮಣ್ಣಿನ ಮಗನಾಗಿರುವ ನನ್ನನ್ನು ವಿಧಾನಸಭೆಗೆ ಆರಿಸಿ ಎಂದು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮರಿದೇವರು ಮತದಾರರಲ್ಲಿ ಮನವಿ ಮಾಡಿದರು. ಬಹಿರಂಗ ಪ್ರಚಾರದ ಅಂತ್ಯಕ್ಕೆ ಮುನ್ನ ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಮೆರವಣಿಗೆಯೊಂದಿಗೆ ಮತಯಾಚಿಸಿದ ಅವರು, ಕ್ಷೇತ್ರದ ಜನತೆ ಸ್ವಾಭಿಮಾನ ಮೆರೆಯಬೇಕು. ಸ್ಥಳೀಯನಾಗಿರುವ ನಾನು ಜನರ ಮಧ್ಯೆ ಇದ್ದು, ಕಷ್ಟ-ಕಾರ್ಪಣ್ಯಗಳನ್ನು ಆಲಿಸಲು ಸಿದ್ಧವಿದ್ದೇನೆ.
ನನ್ನನ್ನು ಭಾರಿ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಜಿಲ್ಲಾ ಕ್ರೀಡಾಂಗಣ ಬಳಿಯಿಂದ ಪ್ರಾರಂಭಗೊಂಡ ಮೆರವಣಿಗೆ ಎಂಜಿ ರಸ್ತೆ, ಐಜೂರು ವೃತ್ತ, ಕೆಂಪೇಗೌಡ ಸರ್ಕಲ್ ಮಾರ್ಗವಾಗಿ ಹಳೆ ಬಸ್ ನಿಲ್ದಾಣ ತಲುಪಿತು. ಅಲ್ಲಿ ಬಹಿರಂಗ ಭಾಷಣದೊಂದಿಗೆ ಪ್ರಚಾರವನ್ನು ಅಂತ್ಯಗೊಳಿಸಲಾಯಿತು. ಮೆರವಣಿಗೆ ಮತ್ತು ಬಹಿರಂಗ ಸಭೆಯಲ್ಲಿ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಜಿಯಾವುಲ್ಲಾ, ಕೆ.ಶೇಷಾದ್ರಿ, ಜಯರಾಮಯ್ಯ, ವೆಂಕಟೇಶ್ ಭಾಗವಹಿಸಿದ್ದರು.