ಓಟಿಗಾಗಿ ನೋಟು ಸಿಪಿಎಂ ದೂರು
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದಲ್ಲಿ ಓಟಿಗಾಗಿ ನೋಟು ಹಂಚುತ್ತಿರುವ ಬಗ್ಗೆ ಪ್ರತ್ಯಕ್ಷದರ್ಶಿಗಳೇ ಚುನಾವಣಾ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಆರೋಪಿಸಿ ಭಾರತ ಕಮ್ಯೂನಿಷ್ಟ್ ಪಕ್ಷ(ಮಾರ್ಕ್ಸ್‌ವಾದಿ) ದೊಡ್ಡಬಳ್ಳಾಪುರ ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದೆ.
ಶನಿವಾರ ರಾತ್ರಿ ದೂರು ಸಲ್ಲಿಸಿರುವ ಪಕ್ಷದ ಅಭ್ಯರ್ಥಿ ಚಂದ್ರತೇಜಸ್ವಿ ಮತ್ತು ಮುಖಂಡ ರುದ್ರಾರಾಧ್ಯ, ರಾಜ್ಯ ಚುನಾವಣಾ ಆಯೋಗ ಭಾರೀ ಮಟ್ಟದಲ್ಲಿ ಚುನಾವಣಾ ಅಕ್ರಮಗಳನ್ನು ತಡೆಯುವ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ. ಆದರೆ ಸೂಕ್ಷ್ಮ ಹಂತದಲ್ಲಿ, ತಳಮಟ್ಟದಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಯುವಲ್ಲಿ ಆಯೋಗದ ಅಧಿಕಾರಿಗಳು ವಿಫಲರಾಗಿದ್ದಾರೆ. ದೊಡ್ಡಬಳ್ಳಾಪುರ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಪ್ರಭಾವೀ ರಾಜಕೀಯ ಪಕ್ಷಗಳು ಮತಮೊಂದಕ್ಕೆ 200ರಿಂದ 500 ರು.ಗಳವರೆಗೆ ಹಾಡಹಗಲೇ ಬಹಿರಂಗವಾಗಿ ಹಂಚಿಕೆ ಮಾಡುತ್ತಿದ್ದಾರೆ. ಆಯೋಗದ ಅಧಿಕಾರಿಗಳೇ ಜನರ ಬಳಿ ಕೇಳಿದರೆ ಅವರೇ ಮಾಹಿತಿ ನೀಡುತ್ತಾರೆ. ಇದು ಚುನಾವಣಾ ಆಯೋಗದ ಕರ್ತವ್ಯವಾಗಿದ್ದು, ಭ್ರಷ್ಟಾಚಾರ ಮುಕ್ತ ಚುನಾವಣೆಗೆ ದೃಢ ಕ್ರಮಗಳನ್ನು ಕೈಗೊಳ್ಳಬೇಕಿದೆ. ಆಯೋಗವೇ ಹೇಳಿದಂತೆ ಮತದಾರರಿಗೆ ಮತಚೀಟಿಯನ್ನು ಒದಗಿಸಬೇಕಿತ್ತು. ಆದರೆ ಇಲ್ಲಿಯವರೆಗೆ ಹಲವರಿಗೆ ಚೀಟಿ ಸಿಕ್ಕಿಲ್ಲ. ಮತದಾರರು ಅನಗತ್ಯವಾಗಿ ರಾಜಕೀಯ ಪಕ್ಷಗಳ ಕಚೇರಿಗಳಿಗೆ ಅಲೆಯುವಂತಾಗಿದೆ ಎಂದೂ ಅವರು ಆರೋಪಿಸಿದ್ದಾರೆ. ಈ ಎಲ್ಲಾ ಅಕ್ರಮಗಳು ಮತ್ತು ಕರ್ತವ್ಯ ನಿರ್ಲಕ್ಷ್ಯದ ಬಗ್ಗೆ ಈ ಸಂಬಂಧ ರಾಜ್ಯ ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.