ಶಾಂತಿಯುತ ಮತದಾನಕ್ಕೆ ಸಿದ್ಧತೆ ಪೂರ್ಣ
ಮಾಗಡಿ: ಚುನಾವಣೆಯಲ್ಲಿ ಶಾಂತಿಯುತ ಮತದಾನಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಕಳೆದ ತಿಂಗಳಿನಿಂದ ಚುನಾವಣಾ ಪ್ರಚಾರದ ಭರಾಟೆಯಲ್ಲಿ ತೊಡಗಿದ್ದ ವಿವಿಧ ಪಕ್ಷಗಳ ಅಭ್ಯರ್ಥಿಗಳ ಕಸರತ್ತು ಮುಗಿದಿದ್ದು, ಭಾನುವಾರ ಬೆಳಿಗ್ಗೆ 7 ಗಂಟೆಯಿಂದ ಮತದಾನ ನಡೆಯಲಿದೆ. ತಾಲೂಕು ಆಡಳಿತ ಈಗಾಗಲೇ ಸಕಲ ಸಿದ್ದತೆಯೊಂದಿಗೆ ಸಜ್ಜಾಗಿದೆ. ಮಾಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು 288 ಮತಗಟ್ಟೆಗಳಿವೆ. ಸಾಮಾನ್ಯ 191, ಸೂಕ್ಷ್ಮ 52,ಅತಿ ಸೂಕ್ಷ್ಮ 45 ಮತಗಟ್ಟೆಗಳಿವೆ. ಗಂಡು- 1,03,564, ಹೆಣ್ಣು-99,395, ನಪುಂಸಕ-1 ಮತದಾರರಿದ್ದು, ಕ್ಷೇತ್ರದಲ್ಲಿ ಒಟ್ಟು 2,2,960 ಮತದಾರರಿದ್ದಾರೆ. 65 ಮೊಬೈಲ್ ವೀಕ್ಷಕರು, 45 ವಿಡಿಯೋ ಗ್ರಾಫರ್ಗಳು ಚುನಾವಣೆ ವೇಳೆ ವಿಡಿಯೋ ಚಿತ್ರೀಕರಣ ಮಾಡಲಿದ್ದಾರೆ.
ಭದ್ರತೆ: ವಿಧಾನ ಸಭಾ ಚುನಾವಣೆಗೆ ಈ ಬಾರಿ ಭದ್ರತೆಗಾಗಿ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ನಾಲ್ಕು ತುಕಡಿಗಳಲ್ಲಿ ಕೇಂದ್ರೀಯ ಮೀಸಲು ಪಡೆ, ಸಿ.ಎ.ಎಫ್, ಬಿ.ಎಸ್.ಎಫ್, 6 ಸಿ.ಪಿ.ಐಗಳು, 23 ಪಿ.ಎಸ್.ಐಗಳು, 32 ಎಚ್.ಸಿಗಳು, 92 ಪಿ.ಸಿಗಳು ಹಾಗು 230 ಹೋಂ ಗಾರ್ಡ್ಗಳು ಸೇರಿದಂತೆ 25 ಪ್ಯಾರ ಮಿಲಿಟರಿ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಪಿಸಿಐ ಯು.ಡಿ.ಕೃಷ್ಣಕುಮಾರ್ ತಿಳಿಸಿದರು.