8 ಅಭ್ಯರ್ಥಿಗಳ ಹಣೆ ಬರಹ 8ರಂದು ರಟ್ಟು
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಶೇ.77ರಷ್ಟು ಮತದಾನವಾಗಿದೆ. ಒಟ್ಟು 232 ಮತಗಟ್ಟೆಗಳಲ್ಲಿ ಮತದಾನ ನಡೆದಿದ್ದು, 1.82 ಲಕ್ಷ ಮತದಾರರ ಪೈಕಿ ಸುಮಾರು 1.38 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 6 ಗಂಟೆಗೆ ಕೊನೆಗೊಂಡಿತಾದರೂ ಮತದಾನ ಪ್ರಕ್ರಿಯೆ ಮುಗಿಯುವ ಮುನ್ನ ಕೆಲ ಮತಗಟ್ಟೆಗಳಿಗೆ ಜನರು ಹತ್ತಾರು ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಅವರಿಗೂ ಟೋಕನ್ ನೀಡಿ ಮತದಾನ ಮಾಡಲು ಅವಕಾಶ ಮಾಡಿಕೊಡಲಾಗಿತ್ತು. ಮತಯಂತ್ರದಲ್ಲಿ ಭದ್ರ: ಕ್ಷೇತ್ರದಲ್ಲಿ ಈ ಬಾರಿ ಸ್ಪರ್ಧಿಸಿರುವ 8 ಅಭ್ಯರ್ಥಿಗಳ ಹಣೆಬರಹ ಸದ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ. ಬಿಜೆಪಿಯ ಜೆ.ನರಸಿಂಹಸ್ವಾಮಿ, ಜೆಡಿಎಸ್‌ನ ಸಿ.ಚನ್ನಿಗಪ್ಪ, ಕಾಂಗ್ರೆಸ್‌ನ ವೆಂಕಟರಮಣಯ್ಯ, ಕೆಜೆಪಿಯ ನಾಗೇಂದ್ರಪ್ರಸಾದ್, ಸಿಪಿಐ(ಎಂ)ನ ಚಂದ್ರತೇಜಸ್ವಿ, ಬಿಎಸ್‌ಆರ್ ಕಾಂಗ್ರೆಸ್‌ನ ಕುಮಾರ್, ಬಿಎಸ್ಪಿಯ ಪುರುಷೋತ್ತಮ್ ಮತ್ತು ಪಕ್ಷೇತರ ಅಭ್ಯರ್ಥಿ ಬಿ.ಮುನೇಗೌಡ ಈ ಬಾರಿ ತಮ್ಮ ಅದೃಷ್ಟ ಪರೀಕ್ಷೆಗೆ ನಿಂತಿದ್ದರು.
ಬೆಂಗಳೂರಿನಲ್ಲಿ ಎಣಿಕೆ: ದೊಡ್ಡಬಳ್ಳಾಪುರ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ಮೇ 8ರ ಬುಧವಾರ ಬೆಂಗಳೂರಿನ ಸರ್ಕಾರಿ ರಾಮ್‌ನಾರಾಯಣ್ ಚೆಲ್ಲಾರಾಂ ಕಾಲೇಜು(ಆರ್‌ಸಿ ಕಾಲೇಜು) ಕೇಂದ್ರದಲ್ಲಿ ನಡೆಯಲಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.