ಏಜೆಂಟರ ಮೇಲೆ ಹಲ್ಲೆ, ಆಸ್ಪತ್ರೆಗೆ ದಾಖಲು
ಕ.ಪ್ರ.ವಾರ್ತೆ ದೇವನಹಳ್ಳಿ ಮೇ 5
ತಾಲೂಕು ವಿಜಯಪುರ ಪೋಲೀಸ್ ಠಾಣೆ ವ್ಯಾಪ್ತಿಗೆ ಸೇರಿದ ಹೊಲೇರಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ ಸಂಜೆ 5 ಗಂಟೆ ಸಮಯದಲ್ಲಿ ಜೆಡಿಎಸ್ ಏಜೆಂಟರಾಗಿದ್ದ ಜಯಚಂದ್ರ ಎಂಬವರ ಮೇಲೆ ಕೆಲವು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರಿಂದ ಹಣೆ ಮತ್ತು ಕೆನ್ನೆಯ ಮೇಲೆ ಹರಿತದ ಗಾಯಗಳಾಗಿದ್ದು ದೇವನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತಗಟ್ಟೆಗೆ ಮತದಾರರೊಬ್ಬರು ಯಾವುದೇ ಗುರುತಿನ ಚೀಟಿ ಇಲ್ಲದೆ ಮತಚಲಾಯಿಸಲು ಬಂದಾಗ ಏಜೆಂಟರಾಗಿದ್ದ ಜಯಚಂದ್ರರವರು ತಡೆದ ಸಂಧರ್ಭದಲ್ಲಿ ಹತ್ತಿರದಲ್ಲೇ ಇದ್ದ ಪಿಳ್ಳವೆಂಕಟಪ್ಪ, ಹಾಲು ಡೇರಿ ಕಾರ್ಯದರ್ಶಿ ಚನ್ನಪ್ಪ ಹಾಗೂ ಎಂ.ಶ್ರೀನಾಥ್ ಹಾಗೂ ಎಂ.ಶೇಖರ್ ಎಂಬವರು ಮಾತಿಗೆ ಮಾತು ಬೆಳೆಸಿ ಪಿಳ್ಳ್ಳವೆಂಕಟಪ್ಪ ಎಂಬವರು ಬ್ಲೇಡಿನಿಂದ ಜಯಚಂದ್ರರವರ ಮುಖಕ್ಕೆ ಹೊಡಿದಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ಜೆಡಿಎಸ್ ಮುಖಂಡರಾದ ಹುರುಳುಗುರ್ಕಿ ಶ್ರೀನಿವಾಸ್, ಜೆಡಿಎಸ್ ತಾಲೂಕು ಅಧ್ಯಕ್ಷ ಮುನಿಶಾಮಯ್ಯ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಸಿ. ವೆಂಕಟೇಗೌಡ ಭೇಟಿ ನೀಡಿದ್ದರು.