ಬಹುತೇಕ ಶಾಂತಿಯುತ ಚುನಾವಣೆ
ಕ.ಪ್ರ. ವಾರ್ತೆ ಕನಕಪುರ ಮೇ 5
ಕನಕಪುರ ವಿಧಾನಸಭಾ ಕ್ಷೇತ್ರಕ್ಕಾಗಿ ನಡೆದ ಚುನಾವಣೆ ಬಹುತೇಕ ಶಾಂತಿಯುತವಾಗಿ ನಡೆಯಿತು. ಸಾತನೂರು, ಕಬ್ಬಾಳು, ಶಿವನಹಳ್ಳಿ ಬೂತ್‌ಗಳಲ್ಲಿ ಮತದಾರರನ್ನು ಗುರುತಿಸುವ ಬಗ್ಗೆ ಹಾಗೂ ಗುರುತಿನ ಚೀಟಿ ಬಗ್ಗೆ ಮಾತಿನ ಚಕಮಕಿ ವಾಗ್ವಾದ ನಡೆಯಿತು. ಸಾತನೂರಿನಲ್ಲಂತೂ ಒಂದು ಹಂತದಲ್ಲಿ ಕಾರ್ಯಕರ್ತರು ಕೈ ಕೈ ಮಿಲಾಯಿಸಿದ್ದರು. ಪೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ಶಾಂತವಾಯಿತು.
ಕನಕಪುರ ತಾಲೂಕು ದೊಡ್ಡಾಲಹಳ್ಳಿ ಗ್ರಾಮದಲ್ಲಿ ಶಾಸಕ ಡಿ.ಕೆ.ಶಿವಕುಮಾರ್ ಸಪತ್ನೀ ಸಮೇತರಾಗಿ ಬಂದು ಮತ ಚಲಾಯಿಸಿದರು. ಮಾಜಿ ಶಾಸಕ ಪಿಜಿಆರ್ ಸಿಂಧ್ಯಾ ತಮ್ಮ ಸ್ವಗ್ರಾಮವಾದ ದೊಡ್ಡಮರಳವಾಡಿಯಲ್ಲಿ ಮತಚಲಾಯಿಸಿದರು. ವಿಧಾನಪರಿಷತ್ ಮಾಜಿ ಸದಸ್ಯ ಎಸ್.ರವಿ ಕನಕಪುರ ಪಟ್ಟಣದ ಮಳಗಾಳು ಬೂತ್‌ನಲ್ಲಿ ತಮ್ಮ ಮತ ಚಲಾಯಿಸಿದರು. ಕನಕಪುರ ತಾಲೂಕಿನ ಬಹುತೇಕ ಕಡೆಗಳಲ್ಲಿ ಜನರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದರು. ಮರಳವಾಡಿ ಹಾಗೂ ಹಾರೋಹಳ್ಳಿ ಹೋಬಳಿಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಅಬ್ಬರ ಹೆಚ್ಚಾಗಿತ್ತು. ಕನಕಪುರ ಕ್ಷೇತ್ರದಲ್ಲಿಯೂ ಕೂಡಾ ಶಾಸಕ ಡಿಕೆಶಿ ಬೆಂಬಲಿಗರು ಬಹುತೇಕ ಎಲ್ಲಾ ಮತಗಟ್ಟೆಗಳಲ್ಲಿ ಪ್ರಾಬಲ್ಯ ಮೆರೆದಿದ್ದರು.