ಮಾಗಡಿಯಲ್ಲಿ ಶಾಂತಿಯುತ ಶೇ.74 ಮತದಾನ
ಕ.ಪ್ರ.ವಾರ್ತೆ ಮಾಗಡಿ ಮೇ 5
ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ ಶೇ.74 ರಷ್ಟು ಮತದಾನ ನಡೆದಿರುವುದಾಗಿ ಉಪ ಚುನಾವಣಾಧಿಕಾರಿಯೂ ಆಗಿರುವ ತಹಸೀಲ್ದಾರ್ ಡಾ. ಬಿ.ಆರ್. ಹರೀಶ್ ನಾಯಕ್ ತಿಳಿಸಿದ್ದಾರೆ.
ಕ್ಷೇತ್ರದಲ್ಲಿ ಭಾನುವಾರ ಬೆಳಗ್ಗೆ 7 ಗಂಟೆಯಿಂದಲೇ ಆರಂಭವಾದ ಮತದಾನ ಬಹಳ ಬಿರುಸಿನಿಂದ ನಡೆದಿತ್ತು. ಮತ ಚಲಾಯಿಸಲು ಗುಂಪು, ಗುಂಪಾಗಿ ಆಗಮಿಸಿದ ಮತದಾರರು ಸರದಿ ಸಾಲಿನಲ್ಲಿ ನಿಂತು, ಬಹಳ ಹುರುಪಿನಿಂದ ತಮ್ಮ ಹಕ್ಕನ್ನು ಚಲಾಯಿಸಿದರು. ಮಧ್ಯಾಹ್ನದ ವೇಳೆ ಮತದಾನ ಮಂದಗತಿಯಲ್ಲಿ ಸಾಗಿತ್ತು. ಜೆಡಿಎಸ್ ಅಭ್ಯರ್ಥಿ ಎಚ್.ಸಿ. ಬಾಲಕೃಷ್ಣ ತಮ್ಮ ಸ್ವಗ್ರಾಮ ಹುಲೀಕಟ್ಟೆಯ ಮತಗಟ್ಟೆಯಲ್ಲಿ ಬೆಳಗ್ಗೆ 8.25 ಕ್ಕೆ ಮತ ಚಲಾಯಿಸಿದರು. ಅವರ ತಾಯಿ ಶಾರದಮ್ಮ, ಪತ್ನಿ ರಾಧ ಬಾಲಕೃಷ್ಣ, ಚಿಕ್ಕಪ್ಪ ಎಚ್.ಜಿ.ನಾರಾಯಣಸ್ವಾಮಿ, ಬಿಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ಎಚ್.ಎನ್. ಅಶೋಕ್ ಸೇರಿದಂತೆ ಇತರೆ ಸದಸ್ಯರು ಹುಲೀಕಟ್ಟೆ ಮತಗಟ್ಟೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು. ಕಾಂಗ್ರೆಸ್ ಅಭ್ಯರ್ಥಿ ಎ.ಮಂಜು, ಪತ್ನಿ ಲಕ್ಷ್ಮೀ ಮಂಜುನಾಥ್ ಬಿಡದಿ ಮತಗಟ್ಟೆಯಲ್ಲಿ ಮತ ಚಲಾಯಿಸಿದರೆ, ಕೆಜೆಪಿ ಅಭ್ಯರ್ಥಿ ಎಚ್.ಎಂ. ಕೃಷ್ಣಮೂರ್ತಿ ಹುಚ್ಚಹನುಮೇಗೌಡನಪಾಳ್ಯದಲ್ಲಿ ಮತದಾನ ಮಾಡಿದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೆ.ಮುದ್ದುರಾಜ ಯಾದವ್ ಸ್ವಗ್ರಾಮದ ಬಾಚೇನಹಟ್ಟಿ ಪಂಚಾಯ್ತಿಯಲ್ಲಿ ಮತ ಚಲಾಯಿಸಿದರು.