ಹಣ ಹಂಚಿಕೆ ವಾಹನ ತಡೆ ಕಲ್ಲು ತೂರಾಟ
ಕನಕಪುರ: ಚುನಾವಣೆಗೆ ಹಿಂದಿನ ದಿನ ಮಧ್ಯರಾತ್ರಿ ಮತದಾರರಿಗೆ ಹಣ ಹಂಚಲು ಹೋಗುತ್ತಿದ್ದ ವಾಹನದ ಮೇಲೆ ಪ್ರತಿಪಕ್ಷದ ಕಾರ್ಯಕರ್ತರು ಅಡ್ಡಹಾಕಿದಾಗ ನಡೆದ ಮಾತಿನ ಚಕಮಕಿ, ಕಲ್ಲುತೂರಾಟದಲ್ಲಿ ವ್ಯಕ್ತಿಯೊಬ್ಬರ ತಲೆಗೆ ತೀವ್ರವಾದ ಪೆಟ್ಟುಬಿದ್ದು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ಗಾಯಗೊಂಡ ವ್ಯಕ್ತಿ ಕಾಂಗ್ರೆಸ್ ಮುಖಂಡ, ಶೆಟ್ಟೀಕೆರೆದೊಡ್ಡಿ ಬೂಸಪ್ಪ ಎಂದು ತಿಳಿದುಬಂದಿದೆ.
ಘಟನೆಯ ಹಿನ್ನೆಲೆ: ನಿನ್ನೆ ಮಧ್ಯರಾತ್ರಿ ವೇಳೆಯಲ್ಲಿ ಜಿಪಂ ಸದಸ್ಯರೊಬ್ಬರು ತಮ್ಮ ವಾಹನದಲ್ಲಿ ವಿತರಿಸುವ ಸಲುವಾಗಿ ಒಯ್ಯುತ್ತಿದ್ದರು ಎನ್ನಲಾದ ಹಣದ ಬಗ್ಗೆ ಮಾಹಿತಿ ಪಡೆದ ಇತ್ತೀಚೆಗೆ ಕಾಂಗ್ರೆಸ್ ತೊರೆದು ಜೆಡಿಎಸ್ಗೆ ಸೇರ್ಪಡೆ ಗೊಂಡಿರುವ ಮುಖಂಡ ಸಿದ್ಧರಾಜು ತಮ್ಮ ಪುತ್ರ ಹಾಗೂ ಬೆಂಬಲಿಗರೊಂದಿಗೆ ಬೆಟ್ಟದ ಹಲಸೂರು ಗ್ರಾಮದಲ್ಲಿ ವಾಹನವನ್ನು ಅಡ್ಡಗಟ್ಟಿದ್ದಾರೆ. ವಾಗ್ವಾದದಲ್ಲಿ ತೊಡಗಿದ್ದಾರೆ. ವಿಚಾರವನ್ನು ಡಿ.ಕೆ.ಸುರೇಶ್ ಮೊದಲಾದ ಕಾಂಗ್ರೆಸ್ ಮುಖಂಡರಿಗೆ ತಿಳಿಸಿದ್ದಾರೆ. ನೂರಾರು ಸಂಖ್ಯೆಯಲ್ಲಿ ಎರಡೂ ಕಡೆಯ ಮುಖಂಡರು ಜಮಾಯಿಸಿ ಪರಸ್ಪರ ಆರೋಪ ವಾಗ್ವಾದ ನಡೆಸುತ್ತಿದ್ದಾಗ ಮಧ್ಯಪ್ರವೇಶಿಸಿದ ಡಿ.ಕೆ. ಸುರೇಶ್ ಪರಿಸ್ಥಿತಿಯನ್ನು ತಿಳಿಗೊಳಿಸಿ ಸಿದ್ದರಾಜು ಅವರನ್ನು ಮನೆಗೆ ಕಳುಹಿಸಿದ್ದಾರೆ.