ಕಡಿಮೆ ಅಂತರದಲ್ಲಾದರೂ ಗೆಲವು ಖಚಿತ: ಸಿ.ಪಿ.ಯೋಗೇಶ್ವರ್ ವಿಶ್ವಾಸ
ಚನ್ನಪಟ್ಟಣ: ಈ ಬಾರಿಯ ಚುನಾವಣೆ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಸ್ವಲ್ಪ ಕಷ್ಟ ಎನಿಸಿದೆಯಾದರೂ, ಕಡಿಮೆ ಮತಗಳ ಅಂತರದಲ್ಲಾದರೂ ತಾನು ಗೆದ್ದೇ ಗೆಲ್ಲುತ್ತೇನೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಖಾಸಗಿ ಹೋಟೆಲ್ ಒಂದರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಹೊಸ ಚಿಹ್ನೆಯಡಿ ಸ್ಪರ್ಧಿಸಿ ಕಡಿಮೆ ಅವಧಿಯಲ್ಲಿ ಪ್ರಚಾರ ನಡೆಸಿದ್ದು 500 ರಿಂದ 1000 ಮತಗಳ ಅಂತರದಲ್ಲಿ ಗೆಲವು ಸಾಧಿಸಲಿರುವುದಾಗಿ ತಿಳಿಸಿದರು.ಜೆಡಿಎಸ್ ಅಭ್ಯರ್ಥಿ ಕಳೆದ 6 ತಿಂಗಳುಗಳಿಂದ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದು, ಪಕ್ಷದ ಮುಖಂಡರು ಅವರೊಂದಿಗೆ ನಿಂತು ಚುನಾವಣೆಯಲ್ಲಿ ಕೆಲಸ ಮಾಡಿದ್ದು, ನನಗೆ ಹೆಚ್ಚು ಮತ ನೀಡುತ್ತಿದ್ದ ಜಿಪಂ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಜೆಡಿಎಸ್ ಮುಂಚೂಣಿಯಲ್ಲಿದೆ. ಕೆಲವು ಜೆಡಿಎಸ್ ಮುಖಂಡರು ಮುಗಿ ಬಿದ್ದು ಹಣ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದರು.
ನಾವು ಅಭಿವೃದ್ಧಿ ಸಂಗತಿ ಮುಂದಿಟ್ಟು ಕೆಲಸ ಮಾಡಿದ್ದೇವೆ, ಮತದಾರರಿಗೆ ವಾಸ್ತವಾಂಶ ಮನವರಿಕೆ ಮಾಡಿ ಕೊಡುವ ಪ್ರಯತ್ನ ಮಾಡಿದ್ದು, ಚುನಾವಣೆಯಲ್ಲಿ ನನ್ನ ಸ್ಪರ್ಧೆ ಕೊನೆಕ್ಷಣದ ವರೆಗೆ ಗೊಂದಲದಲ್ಲೇ ಇದ್ದ ಪರಿಣಾಮ, ತಮಗೆ ಬೀಳಬೇಕಾದ ಕೆಲ ಮತಗಳು ಕಾಂಗ್ರೆಸ್ ಮತ್ತು ಬಿಜೆಪಿಗೆ ಚದುರಿ ಹೋಗಿದೆ ಇದರಿಂದಾಗಿ ನಮ್ಮ ಗೆಲವಿನ ಅಂತರ ಕಡಿಮೆಯಾಗಲಿದೆ ಎಂದರು.
ಯಾರಾದರೂ ಗೆಲ್ಲಬಹುದು: ಈ ಬಾರಿಯ ಚುನಾವಣೆಯಲ್ಲಿ ತೀವ್ರ ಸ್ಪರ್ಧೆ ಇದ್ದು, ಯಾರಾದರೂ ಗೆಲವು ಸಾಧಿಸುವ ಅವಕಾಶವಿದೆ. ಈ ಬಾರಿ ಬಿಜೆಪಿ ಅಭ್ಯರ್ಥಿ ನನಗೆ ಯಾವುದೇ ಸಹಕಾರ ನೀಡಲಿಲ್ಲ, ಅವರ ಜತೆ ಇದ್ದ ಪ್ರಬಲವಾದ ಗುಂಪು ಜೆಡಿಎಸ್ಗೆ ಬೆಂಬಲ ನೀಡಿದ್ದು, ಯಾರು ಗೆದ್ದರೂ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಬಹುದೆಂದರು.
ಮತದಾರರು ಕಣ್ಣೀರಿಗೆ ಬೆಲ ನೀಡಿಯಾರೋ ಇಲ್ಲ ನೀರಾವರಿಗೆ ಒಲವು ತೋರಿಯಾರೋ ಎಂಬುದು ಮೇ 8 ರಂದು ತಿಳಿಯಲಿದೆ ಎಂದರು.
ಬೆಂಬಲಿಗರಸಿಂಗರಾಜಪುರ ರಾಜಣ್ಣ, ಮಲವೇಗೌಡ, ತಾಪಂ ಮಾಜಿ ಸದಸ್ಯ ಪ್ರಮೋದ್, ನಗರಸಭಾ ಸದಸ್ಯ ಮುದ್ದುಕೃಷ್ಣ ಮತ್ತಿತರರು ಇದ್ದರು