ಕೈಕೊಟ್ಟ ವಿದ್ಯುತ್; ಕತ್ತಲಲ್ಲಿ 'ಕುರುಕ್ಷೇತ್ರ'...
ಮತ್ತೀಕೆರೆ ಜಯರಾಮ್
ರಾಮನಗರ: ಮಸ್ಟರಿಂಗ್ ಮತ್ತು ಡೀ ಮಸ್ಟರಿಂಗ್ ಕೇಂದ್ರದ ವ್ಯಾಪ್ತಿಗೆ ಸೀಮಿತವಾಗಿ ಕೈಕೊಟ್ಟ ವಿದ್ಯುತ್, ಜನರೇಟರ್ ವ್ಯವಸ್ಥೆ ಮಾಡಿಕೊಳ್ಳದೆ ತಾಲೂಕು ಆಡಳಿತ ಎಸಗಿದ ಲೋಪವೇ ಕನಕಪುರದಲ್ಲಿ ಚುನಾವಣೋತ್ತರ ಕುರುಕ್ಷೇತ್ರಕ್ಕೆ ಕಾರಣವಾಯಿತು ಎನ್ನುವ ಆರೋಪ ವ್ಯಾಪಕವಾಗಿದೆ.
ಕನಕಪುರದ ರೂರಲ್ ಪ್ರೌಢಶಾಲೆ ಆವರಣದಲ್ಲಿದ್ದ ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕೇಂದ್ರಕ್ಕೆ ಕ್ಷೇತ್ರಾದ್ಯಂತ ಮತ ಯಂತ್ರಗಳನ್ನು ತಂದು ಶೇಖರಿಸುವ ಸಂದರ್ಭದಲ್ಲಿ ವಿದ್ಯುತ್ ಕೈಕೊಟ್ಟಿತು. ಆ ವೇಳೆ ಜನರೇಟರ್ ಇಲ್ಲದ ಕಾರಣ ಆವರಿಸಿದ್ದ ಕತ್ತಲಲ್ಲೇ ಮತಯಂತ್ರಗಳನ್ನು ಇಳಿಸಿ, ಶೇಖರಿಸಲಾಯಿತು.
ಆ ಕೇಂದ್ರದ ಬಳಿ ಕಾಂಗ್ರೆಸ್ ಕಾರ್ಯಕರ್ತರು ಸುಳಿದಾಡುತ್ತಿದ್ದರೆನ್ನುವ ವದಂತಿ ಹಬ್ಬಿದ್ದೇ ತಡ ಕನಕಪುರದಲ್ಲಿ ತಂಡೋಪ ತಂಡವಾಗಿ ಆಗಮಿಸಿ ಗುಂಪುಗೂಡಿದ ಜೆಡಿಎಸ್ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ.
ಮತಯಂತ್ರಗಳನ್ನೇ ಬದಲಿಸಲಾಗಿದೆ ಎಂದು ಹುಯಿಲೆಬ್ಬಿಸಿ, ಮರು ಚುನಾವಣೆಗೆ ಪಟ್ಟು ಹಿಡಿದಿದ್ದರು.
ಕನಕಪುರದಲ್ಲಿ ರಾತ್ರಿಯಿಡೀ ರಾಮಾಯಣ, ಕುರುಕ್ಷೇತ್ರ ಒಟ್ಟಿಗೇ ನಡೆದಿದೆ. ಮತಯಂತ್ರಗಳನ್ನು ವಾಹನಗಳಿಂದ ಇಳಿಸಿಡುವ ವೇಳೆ ಕತ್ತಲು ಆವರಿಸಿದ್ದರೆ ಇಂತಹ ಅನುಮಾನ ಮೂಡುವುದು ಸಹಜವೇ. ಇಷ್ಟಕ್ಕೆಲ್ಲ ತಾಲೂಕು ಆಡಳಿತದ ವೈಫಲ್ಯದ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.
ಆಯೋಗದ ನಿರ್ದೇಶನ: ಮಸ್ಟರಿಂಗ್, ಡೀ ಮಸ್ಟರಿಂಗ್ ಮತ್ತು ಎಣಿಕೆ ಕೇಂದ್ರಗಳಲ್ಲಿ ಜನರೇಟರ್ ವ್ಯವಸ್ಥೆ ಮಾಡಿಕೊಳ್ಳುವುದು ಕಡ್ಡಾಯ ಎನ್ನುವುದು ಚುನಾವಣಾ ಆಯೋಗದ ನಿರ್ದೇಶನವಾಗಿತ್ತು. ಆದರೆ, ಕನಕಪುರ ತಾಲೂಕು ಆಡಳಿತವು ಜನರೇಟರ್ ವ್ಯವಸ್ಥೆ ಮಾಡಿಕೊಳ್ಳುವ ಗೋಜಿಗೆ ಹೋಗದೆ ಲೋಪವೆಸಗಿದೆ.
ಚುನಾವಣಾ ವೆಚ್ಚಕ್ಕಾಗಿ ಆಯೋಗದಿಂದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ರು.30 ಲಕ್ಷದಂತೆ ಸಂದಾಯವಾಗಿದೆ. ವೆಚ್ಚ ಮೀರಿದರೆ ಅಧಿಕಾರಿಗಳೇನೂ ಸ್ವಂತ ಹಣ ಪಾವತಿಸಬೇಕಿಲ್ಲ.
ಇಷ್ಟಾಗಿಯೂ ಸ್ಥಳೀಯ ತಾಲೂಕು ಆಡಳಿತ ಜನರೇಟರ್ ಬಾಡಿಗೆ ಪಾವತಿಸಲಾಗದಷ್ಟು ನಿರ್ಗತಿಕವಾಗಿತ್ತೇ ಎನ್ನುವ ಪ್ರಶ್ನೆಯೂ ಇಲ್ಲಿ ಎದುರಾಗುತ್ತಿದೆ.
ಚುನಾವಣೆ ವೇಳೆಯಲ್ಲಿ ಮಸ್ಟರಿಂಗ್, ಡೀ ಮಸ್ಟರಿಂಗ್ ಮತ್ತು ಎಣಿಕೆ ಕೇಂದ್ರಗಳಿರುವ ಪ್ರದೇಶದಲ್ಲಿ ಸಮರ್ಪಕ ವಿದ್ಯುತ್ ಬಗ್ಗೆ ನಿಗಾ ವಹಿಸುವುದು ಕೆಪಿಟಿಸಿಎಲ್ ಅಧಿಕಾರಿಗಳ ಕರ್ತವ್ಯ. ಇಂತಹ ಕಡೆ ಸಣ್ಣಪುಟ್ಟ ಸಮಸ್ಯೆಗಳ ಬಗ್ಗೆ ಮೊದಲೇ ಗಮನಿಸಬೇಕು. ಇಲ್ಲಿ ನಿಗಮದ ಅಧಿಕಾರಿಗಳ ವೈಫಲ್ಯವೂ ಎದ್ದು ಕಾಣುತ್ತಿದೆ.
ಗುಮಾನಿಯೂ ಕಾರಣ: ಕನಕಪುರ ತಹಸೀಲ್ದಾರ್ ಡಾ.ದಾಕ್ಷಾಯಿಣಿ ಅವರು ಶಾಸಕ ಡಿ.ಕೆ.ಶಿವಕುಮಾರ್ ಆಜ್ಞಾ ಪಾಲಕರೆಂದು ಜೆಡಿಎಸ್ ಮುಖಂಡರು ಮೊದಲಿಂದಲೂ ಬಹಿರಂಗ ಟೀಕೆ ಮಾಡಿಕೊಂಡೇ ಬಂದಿದ್ದಾರೆ. ಚುನಾವಣೆಗೆ ಮುನ್ನ ನಡೆದ ಸಭೆಗಳಲ್ಲಿ ಸ್ವತಃ ಎಚ್.ಡಿ.ಕುಮಾರಸ್ವಾಮಿ, ಪಿ.ಜಿ.ಆರ್.ಸಿಂಧ್ಯಾ ಕೂಟ ಆರೋಪ ಮಾಡಿದ್ದರು. ದಾಕ್ಷಾಯಿಣಿ ನಿಷ್ಪಕ್ಷಪಾತವಾಗಿ ನಡೆದುಕೊಳ್ಳುತ್ತಿಲ್ಲ. ಕನಕಪುರದಲ್ಲಿ ಶಿವಕುಮಾರ್ ಪಾಳಯಕ್ಕೆ ತಹಸೀಲ್ದಾರ್ ಆಗಿದ್ದಾರೆಯೇ ಹೊರತು ತಾಲೂಕಿನ ತಹಸೀಲ್ದಾರ್ ಅಲ್ಲವೆಂದಿದ್ದರು. ಹೀಗೆ ಬಹಿರಂಗ ಟೀಕೆ, ಆರೋಪಗಳು ಇದ್ದುದರಿಂದ ಕಳೆದ ರಾತ್ರಿ ಕನಕಪುರದಲ್ಲಿ ಜೆಡಿಎಸ್ ವದಂತಿಗೆ ಜನರು ಸಹಜವಾಗಿಯೇ ಕಿವಿಗೊಟ್ಟಿದ್ದಾರೆ.
ಚೌಕಾಶಿ ವ್ಯವಹಾರ: ಕನಕಪುರ ತಾಲೂಕು ಆಡಳಿತವು ಮತಗಟ್ಟೆಗಳಲ್ಲಿ ಚಿತ್ರೀಕರಣಕ್ಕಾಗಿ ಹೊರಗಿನಿಂದ ಕರೆಸಿಕೊಂಡಿದ್ದ ವೀಡಿಯೋ ಗ್ರಾಫರ್ಗಳ ವಿಷಯದಲ್ಲೂ ಚೌಕಾಶಿ ವ್ಯವಹಾರ ನಡೆಸಿದ್ದಾರೆ.
ಮತದಾನಕ್ಕೆ ಮುನ್ನಾ ದಿನವೇ ಅವರನ್ನು ಮತಗಟ್ಟೆಗೆ ಕಳುಹಿಸಿದರೆ ಎರಡು ದಿನದ ಬಾಡಿಗೆ ಮತ್ತು ದಿನಗೂಲಿ ಪಾವತಿಸಬೇಕಾಗುತ್ತದೆ ಎನ್ನುವ ಕಾರಣಕ್ಕೆ ಮತದಾನದ ದಿನದ ಮಟ್ಟಿಗಷ್ಟೇ ನಿಯೋಜಿಸಿಕೊಂಡಿದ್ದರು.
ಭಾನುವಾರ ಬೆಳಗ್ಗೆಯಷ್ಟೇ ಕರ್ತವ್ಯಕ್ಕೆ ನಿಯೋಜನೆಗೊಂಡ ವೀಡಿಯೋ ಗ್ರಾಫರ್ಗಳು ಮತಗಟ್ಟೆಗಳಿಗೆ
ತಲಪುವುದು ತೀರಾ ತಡವಾಗಿದ್ದೂ ಉಂಟು. ಈ ಎಲ್ಲ ಲೋಪಗಳ ನಡುವೆ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿರುವ ಕನಕಪುರದ ಚುನಾವಣೆ ಹಾಗೂ ಹೀಗೂ ಮುಗಿದಿದೆ.
ಚುನಾವಣೆ ಬಳಿಕ ಘರ್ಷಣೆಗಳೂ ತಲೆ ಎತ್ತಿವೆ. ಸದ್ಯಕ್ಕೆ ಅಲ್ಲಿ ನಿಷೇಧಾಜ್ಞೆಜಾರಿಗೊಳಿಸಿ, ಪರಿಸ್ಥಿತಿ ತಹಬದಿಗೆ ತರುವ ಪ್ರಯತ್ನ ನಡೆದಿದೆ.
ಚುನಾವಣಾ ಆಯೋಗಕ್ಕೆ ವರದಿ
ಕನಕಪುರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ನವೀನ್ ರಾಜ್ಸಿಂಗ್ ಮತ್ತು ಕ್ಷೇತ್ರದ ಚುನಾವಣಾ ವೀಕ್ಷಕ ಹಿತೇಶ್ ಅವರು ಸ್ಥಳ ಪರಿಶೀಲನೆ, ಅಧಿಕಾರಿಗಳ ಸಭೆ ನಡೆಸಿದ ಬಳಿಕ ಚುನಾವಣಾ ಆಯೋಗಕ್ಕೆ ಪ್ರತ್ಯೇಕ ವರದಿಗಳನ್ನು ರವಾನಿಸಿದ್ದಾರೆ.
ಜೆಡಿಎಸ್ ನೀಡಿರುವ ದೂರಿನಂತೆ ಅಲ್ಲಿನ ಯಾವುದೇ ಮತ ಯಂತ್ರದ ಬದಲಾವಣೆಯಾಗಲೀ ಮತ್ತಿನ್ಯಾವುದೇ ಅಕ್ರಮವಾಗಲೀ ನಡೆದಿಲ್ಲ. ತಾಲೂಕು ಆಡಳಿತ ಮತ್ತು ಕ್ಷೇತ್ರದ ಚುನಾವಣಾಧಿಕಾರಿಯಿಂದ ಯಾವುದೇ ಲೋಪವಾಗಿಲ್ಲ ಎಂದು ಜಿಲ್ಲಾಧಿಕಾರಿ ನವೀನ್ರಾಜ್ ಸಿಂಗ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಬೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ತಲೆದಂಡ
ರಾಮನಗರದಲ್ಲಿ 4 ಕ್ಷೇತ್ರಗಳ ಮತ ಎಣಿಕೆ ಕೇಂದ್ರವಾಗಿರುವ ಗೌಸಿಯಾ ಕಾಲೇಜು ಭಾಗದಲ್ಲಿ ಭಾನುವಾರ ರಾತ್ರಿ ವಿದ್ಯುತ್ ಅಡಚಣೆ ಹಿನ್ನೆಲೆ ಹಾಗೂ ಸ್ಥಳದಲ್ಲಿ ಖುದ್ದು ಹಾಜರಿರದ ಆರೋಪದಡಿ ಬೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ರಮೇಶ್ ತಲೆದಂಡವಾಗಿದೆ.
ಎಣಿಕೆ ಕೇಂದ್ರದಲ್ಲಿ ಸಂಜೆ 6.55 ರಿಂದ ರಾತ್ರಿ 7.15ರವರೆಗೆ ವಿದ್ಯುತ್ ಸರಬರಾಜು ಕಡಿತಗೊಂಡಿತ್ತು. ಈ ವೇಳೆ ಜನರೇಟರ್ ಬಳಸಿಕೊಳ್ಳಲಾಯಿತು. ಮೊದಲೇ ಸೂಚಿಸಿದ್ದಾಗ್ಯೂ ಬೆಸ್ಕಾಂ ಪರವಾಗಿ ಕಾರ್ಯಪಾಲಕ ಎಂಜಿನಿಯರ್ ಅಥವಾ ಅಧೀನ ಅಧಿಕಾರಿಗಳು ಹಾಜರಿರಲಿಲ್ಲ ಎನ್ನುವ ಕಾರಣಕ್ಕೆ ಜಿಲ್ಲಾಧಿಕಾರಿ ನವೀನ್ರಾಜ್ ಸಿಂಗ್ ಅಮಾನತು ಆದೇಶ ಹೊರಡಿಸಿದ್ದಾರೆ. ಗೌಸಿಯಾ ಕಾಲೇಜು ಭಾಗದಲ್ಲಿ ಪವರ್ ಟ್ರಾನ್ಸ್ಫಾರ್ಮರ್ ವಿಫಲವಾದ ಪರಿಣಾಮ ವಿದ್ಯುತ್ ಕಡಿತವಾಗಿತ್ತು. ಬೇರೆ ಮಾರ್ಗದ ಮೂಲಕ 20 ನಿಮಿಷದಲ್ಲೇ ಅಲ್ಲಿಗೆ ವಿದ್ಯುತ್ ಸೌಲಭ್ಯ ಮುಂದುವರೆಸಲಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ವಿವರಣೆ ನೀಡಿದ್ದಾರೆ. ಈ ಸಬೂಬನ್ನು ಜಿಲ್ಲಾಧಿಕಾರಿ ಒಪ್ಪಲು ನಿರಾಕರಿಸಿದ್ದಾರೆ.