ಗ್ರಾಮಾಂತರಕ್ಕೆ 12ನೇ ಸ್ಥಾನ
ಕ.ಪ್ರ. ವಾರ್ತೆ ದೊಡ್ಡಬಳ್ಳಾಪುರ ಮೇ 6
ಬೆಂಗಳೂರು ಗ್ರಾಮಾಂತರ ಜಿಲ್ಲೆ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.82.95 ಫಲಿತಾಂಶದೊಂದಿಗೆ ರಾಜ್ಯದಲ್ಲಿ 12ನೇ ಸ್ಥಾನ ಪಡೆದಿದೆ. ಕಳೆದ ಬಾರಿ 18ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ ಸುಧಾರಿತ ಫಲಿತಾಂಶ ಪಡೆದಿದ್ದು ಜಿಲ್ಲೆಯಲ್ಲಿ ಪರೀಕ್ಷೆ ತೆಗೆದುಕೊಂಡ 13055 ವಿದ್ಯಾರ್ಥಿಗಳ ಪೈಕಿ, 10945(ಶೇ.83.84) ಮತ್ತು ಪುನರಾವರ್ತಿಕ 642 ವಿದ್ಯಾರ್ಥಿಗಳಲ್ಲಿ 195(ಶೇ.30.37) ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ವಿ.ವೆಂಕಟೇಶಪ್ಪ ತಿಳಿಸಿದ್ದಾರೆ.
ತಾಲೂಕುವಾರು ಫಲಿತಾಂಶ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈ ಬಾರಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಅತಿಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ಫಲಿತಾಂಶದಲ್ಲಿ ನೆಲಮಂಗಲ ತಾಲೂಕು ಶೇ.85.86 ಫಲಿತಾಂಶದೊಂದಿಗೆ ಪ್ರಥಮ ಸ್ಥಾನದಲ್ಲಿದ್ದು 2807 ವಿದ್ಯಾರ್ಥಿಗಳ ಪೈಕಿ 2410 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ದೇವನಹಳ್ಳಿಗೆ ಶೇ.81.34 ಫಲಿತಾಂಶ ಲಭಿಸಿದ್ದು ದ್ವಿತೀಯ ಸ್ಥಾನ ಪಡೆದಿದೆ.
ಇಲ್ಲಿ 3098 ವಿದ್ಯಾರ್ಥಿಗಳ ಪೈಕಿ 2520 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿಗೆ ಶೇ.80.13 ಫಲಿತಾಂಶ ಲಭ್ಯವಾಗಿದ್ದು 3ನೇ ಸ್ಥಾನ ಪಡೆದಿದೆ. 4027 ವಿದ್ಯಾರ್ಥಿಗಳಲ್ಲಿ 3227 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಹೊಸಕೋಟೆ ಕೊನೆಯ ಸ್ಥಾನದಲ್ಲಿದ್ದು ಶೇ.76.65 ಫಲಿತಾಂಶ ಲಭಿಸಿದೆ. 3897 ವಿದ್ಯಾರ್ಥಿಗಳಲ್ಲಿ 2987 ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ಫಲಿತಾಂಶದ ಅಂಕಿ-ಅಂಶ: ಪರೀಕ್ಷೆ ತೆಗೆದುಕೊಂಡಿದ್ದ ನಗರ ಪ್ರದೇಶದ ಬಾಲಕರಲ್ಲಿ ಶೇ.78.13, ಗ್ರಾಮಾಂತರದ ಶೇ.80.89, ಬಾಲಕಿಯರಲ್ಲಿ ನಗರ ಪ್ರದೇಶದ ಶೇ.85.25, ಗ್ರಾಮಾಂತರ ಪ್ರದೇಶದ ಶೇ.86.05ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ನಗರ ಪ್ರದೇಶಗಳಿಗಿಂತ ಗ್ರಾಮಾಂತರ ಪ್ರದೇಶದ ಶಾಲೆಗಳ ಸಾಧನೆ ಗಣನೀಯವಾಗಿದೆ. ಅದೇ ರೀತಿ ಎಂದಿನಂತೆ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ.
ಒಟ್ಟಾರೆ ಗ್ರಾಮಾಂತರ ಪ್ರದೇಶದಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ 10038 ವಿದ್ಯಾರ್ಥಿಗಳಲ್ಲಿ 8372(ಶೇ.83.40) ವಿದ್ಯಾರ್ಥಿಗಳು ಮತ್ತು ನಗರದ 3160 ವಿದ್ಯಾರ್ಥಿಗಳಲ್ಲಿ 2576 (ಶೇ.81.52)ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ಖಾಸಗಿ ಶಾಲೆಗಳ ಮೇಲುಗೈ: ಜಿಲ್ಲೆಯ ಸರ್ಕಾರಿ ಶಾಲೆಗಳ ಮೂಲಕ ಪರೀಕ್ಷೆ ಬರೆದಿದ್ದ 5934 ವಿದ್ಯಾರ್ಥಿಗಳಲ್ಲಿ 4579 (ಶೇ.77.17), ಅನುದಾನಿತ ಶಾಲೆಗಳ 2825 ವಿದ್ಯಾರ್ಥಿಗಳಲ್ಲಿ 2282 (ಶೇ.80.78) ಮತ್ತು ಅನುದಾನರಹಿತ ಖಾಸಗಿ ಶಾಲೆಗಳ 4439 ವಿದ್ಯಾರ್ಥಿಗಳಲ್ಲಿ 4087 (ಶೇ.92.07) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಖಾಸಗಿ ಶಾಲೆಗಳು ಮೇಲುಗೈ ಸಾಧಿಸಿವೆ.
ಅದೇ ರೀತಿ ಪ್ರಥಮ ಭಾಷೆಯಲ್ಲಿ ಶೇ.90.78, ದ್ವಿತೀಯ ಭಾಷೆಯಲ್ಲಿ ಶೇ.91.52, ತೃತೀಯ ಭಾಷೆಯಲ್ಲಿ ಶೇ.91.48, ಗಣಿತದಲ್ಲಿ ಶೇ.88.76, ವಿಜ್ಞಾನದಲ್ಲಿ ಶೇ.88.85 ಮತ್ತು ಸಮಾಜ ವಿಜ್ಞಾನದಲ್ಲಿ ಶೇ.89.74 ಫಲಿತಾಂಶ ಲಭಿಸಿದೆ.
ತೆಲುಗು ಮಾಧ್ಯಮ ಶೇ.100 ಫಲಿತಾಂಶ: ಜಿಲ್ಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದ 8377 ವಿದ್ಯಾರ್ಥಿಗಳಲ್ಲಿ 6550(ಶೇ.78.19), ಇಂಗ್ಲಿಷ್ ಮಾಧ್ಯಮದ 4734 ವಿದ್ಯಾರ್ಥಿಗಳಲ್ಲಿ 4330(ಶೇ.91.47), ಉರ್ದು ಮಾಧ್ಯಮದ 46 ವಿದ್ಯಾರ್ಥಿಗಳಲ್ಲಿ 27(ಶೇ.58.7) ಮತ್ತು ತೆಲುಗು ಮಾಧ್ಯಮದ ಎಲ್ಲ 41 ವಿದ್ಯಾರ್ಥಿಗಳು(ಶೇ.100) ತೇರ್ಗಡೆಯಾಗಿದ್ದಾರೆ.
ದೊಡ್ಡಬಳ್ಳಾಪುರದ ತೆಲುಗು ಪ್ರೌಢಶಾಲೆ ಶೇ.100 ಫಲಿತಾಂಶ ಪಡೆದಿದೆ. ಪರಿಶಿಷ್ಟ ಜಾತಿಯ ಶೇ.75.62, ಪರಿಶಿಷ್ಟ ಪಂಗಡದ ಶೇ.79.01, ಪ್ರವರ್ಗ-1ರ 76.45, ಅಲ್ಪಸಂಖ್ಯಾತ ವರ್ಗದ 67.68 ಮತ್ತು ಇತರೆ ವರ್ಗದ ಶೇ.84.29 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.