ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ರಾಮನಗರ ಜಿಲ್ಲೆ: ದಾಖಲೆ ಮತದಾನ

ಪ್ರಸಕ್ತ ಚುನಾವಣೆಯಲ್ಲಿ ರಾಮನಗರ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದ ಮತದಾನವಾಗಿದೆ. ಶೇಕಡ 82.99ರಷ್ಟು ಮತದಾನದೊಂದಿಗೆ ಈ ಜಿಲ್ಲೆ ರಾಜ್ಯ ಮಟ್ಟದಲ್ಲಿ 2ನೇ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದೆ.

Rashmi Kasaragodu
Updated On : 7 May 2013, 12:32 pm

ರಾಮನಗರ: ಪ್ರಸಕ್ತ ಚುನಾವಣೆಯಲ್ಲಿ ರಾಮನಗರ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದ ಮತದಾನವಾಗಿದೆ. ಶೇಕಡ 82.99ರಷ್ಟು ಮತದಾನದೊಂದಿಗೆ ಈ ಜಿಲ್ಲೆ ರಾಜ್ಯ ಮಟ್ಟದಲ್ಲಿ 2ನೇ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದೆ.  ಕಳೆದ ಬಾರಿಗೆ ಹೋಲಿಸಿದರೆ ಮತ ಚಲಾವಣೆ ಪ್ರಮಾಣ ಪ್ರತಿಶತ 6.61ರಷ್ಟು ಅಧಿಕವಾಗಿದೆ.
ಪುಟ್ಟ ಜಿಲ್ಲೆ ರಾಮನಗರದಲ್ಲಿ ಇರುವ ಎಲ್ಲ 4 ಕ್ಷೇತ್ರಗಳು ಘಟಾನುಘಟಿಗಳ ಸ್ಪಧೆಯಿಂದ ಪ್ರತಿಷ್ಠೆಯ ಕಣಗಳವಾಗಿವೆ. ಈ ಪೈಕಿ ಚನ್ನಪಟ್ಟಣದಲ್ಲಿ ಅತ್ಯಧಿಕ ಅಂದರೆ ಶೇಕಡ 84.48ರಷ್ಟು ಮತದಾನವಾಗಿದೆ. ಮಾಗಡಿಯಲ್ಲಿ 83.57, ಕನಕಪುರದಲ್ಲಿ 83.37 ಮತ್ತು ರಾಮನಗರದಲ್ಲಿ 80.30ರಷ್ಟು ಮತದಾನವಾಗಿದೆ.
4 ಕ್ಷೇತ್ರಗಳಿಂದ ಒಟ್ಟಾರೆ 400860 ಪುರುಷರು, 396610 ಮಹಿಳೆಯರು, 34 ಇತರರು ಸೇರಿದಂತೆ 797504 ಮತದಾರರಿದ್ದಾರೆ. ಈ ಪೈಕಿ 337431 ಪುರುಷರು, 324407 ಮಹಿಳೆಯರು ಸಹಿತ 661838 ಮಂದಿ ಮತ ಚಲಾಯಿಸಿದ್ದಾರೆ. 2124 ಅಂಚೆ ಮತಪತ್ರಗಳು ಬಂದಿವೆ.

ಗಣನೀಯ ಹೆಚ್ಚಳ: 2008ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಜಿಲ್ಲೆಯಲ್ಲಿ ಶೇಕಡ 76.38ರಷ್ಟು ಮತದಾನವಾಗಿತ್ತು. ರಾಮನಗರದಲ್ಲಿ 72.15 ಮತದಾನವಾಗಿದ್ದು, ಈ ಬಾರಿ ಶೇಕಡ 6.61ರಷ್ಟು ಹೆಚ್ಚಳವಾಗಿದೆ. 78.11ರಷ್ಟು ಮತದಾನವಾಗಿದ್ದ ಚನ್ನಪಟ್ಟಣದಲ್ಲಿ ಈಗ 6.37ರಷ್ಟು ಏರಿಕೆ ಕಂಡಿದೆ.
ಕನಕಪುರ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಶೇಕಡ 76.38ರಷ್ಟು ಮತದಾನ ನಡೆದಿತ್ತು. ಈ ಬಾರಿ ಶೇಕಡ 6.95ರಷ್ಟು ಹೆಚ್ಚಳ ಕಂಡು ಬಂದಿದೆ. ಮಾಗಡಿ ಕ್ಷೇತ್ರದಲ್ಲಿ ಶೆಕಡ 77.35 ಮತಗಳು ಚಲಾವಣೆಯಾಗಿದ್ದು, ಈ ಚುನಾವಣೆಯಲ್ಲಿ ಅಲ್ಲೂ ಶೇಕಡ 6.22ರಷ್ಟು ಹೆಚ್ಚಳವಾಗಿದೆ.

ಜಿದ್ದಾಜಿದ್ದಿಯ ಪರಿಣಾಮ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಅವರ ಪತ್ನಿ ಅನಿತಾ ಕುಮಾಸ್ವಾಮಿ, ಮಾಜಿ ಸಚಿವತ್ರಯರಾದ  ಪಿ.ಜಿ.ಆರ್.ಸಿಂಧ್ಯಾ, ಡಿ.ಕೆ.ಶಿವಕುಮಾರ್, ಸಿ.ಪಿ.ಯೋಗೇಶ್ವರ್, ನಾಲ್ಕನೇ ಬಾರಿ ವಿಧಾನಸಭೆ ಪ್ರವೇಶಕ್ಕಾಗಿ ಸ್ಪರ್ಧೆಗಿಳಿದಿರುವ ಪ್ರಭಾವಿ ಶಾಸಕ ಎಚ್.ಸಿ.ಬಾಲಕೃಷ್ಣ ಸ್ಪರ್ಧೆ ಕಾರಣಕ್ಕೆ ರಾಮನಗರ ಜಿದ್ದಾಜಿದ್ದಿನ ಅಖಾಡವಾಗಿದೆ.
ಪುಟ್ಟ ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಹಿಂದೆಂದಿಗಿಂತ ತೀವ್ರ ಹಣಾಹಣಿ ಏರ್ಪಟ್ಟಿದೆ. ಇಲ್ಲೆಲ್ಲಾ ಕರಪತ್ರ ಹಿಡಿದು ಬಂದವರನ್ನು ಕ್ಯಾರೆ ಎನ್ನುವವರಿಲ್ಲ. ಗರಿ ಗರಿ ನೋಟು ಹಿಡಿದು ಬಂದರಷ್ಟೇ ಮಾತು. ಆಯೋಗದ ಕಟ್ಟುನಿಟ್ಟಿನ ಕ್ರಮದ ನಡುವೆಯೂ ಭಾರಿ ಪ್ರಮಾಣದಲ್ಲಿ ಹಣದ ಹೊಳೆ ಹರಿದಿದೆ.

ಕಾರ್ಯಕರ್ತರ ಪಾತ್ರ:
ರಾಜಕೀಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತ, ಬಳುವಳಿ ಹಂಚಿದ್ದಲ್ಲದೆ ಪರ ಊರಿನಲ್ಲಿರುವ ಮತದಾರರನ್ನು ರಾಜಾತಿಥ್ಯದೊಂದಿಗೆ ಕರೆತಂದು ಮತ ಹಾಕಿಸಿದ್ದಾರೆ. ಸಾಕಷ್ಟು ಕಡೆ ಮತಗಟ್ಟೆ ಬಳಿಯೂ ಹಣ ಹಂಚಿದ್ದಿದೆ. ಎಷ್ಟೋ ಮತದಾರರು ಆಮಿಷಕ್ಕೆ ಒಳಗಾಗಿ ಮತಗಟ್ಟೆ ಕಡೆ ತೆರಳಿದ್ದೂ ಇದೆ.  
ಮೂಲೆ ಸೇರಿದ್ದ ವೃದ್ಧರು, ವಿಕಲಚೇತನರು, ಅನಾರೋಗ್ಯಪೀಡಿತರನ್ನು ರಾಜಕೀಯ ಕಾರ್ಯಕರ್ತರು ಆಟೋ, ದ್ವಿಚಕ್ರ ವಾಹನ, ಕಾರುಗಳಲ್ಲಿ ಮಾತ್ರವಲ್ಲದೆ ಮತಗಟ್ಟೆಗೆ ಹೊತ್ತುಕೊಂಡು ಬಂದು ಮತ ಚಲಾವಣೆ ಮಾಡಿಸಿದ್ದೂ ಇದೆ. ಹೀಗೆ ವಿವಿಧ ಕಾರಣಗಳಿಗೆ ಮತದಾನದ ಪ್ರಮಾಣ ಹೆಚ್ಚಳವಾಗಿದೆ.

ಬಾರದ ಇತರರು
ರಾಮನಗರ ಜಿಲ್ಲೆಯಲ್ಲಿ ಪುರುಷರು, ಮಹಿಳೆಯರಲ್ಲದೆ ಇತರರು (ಮಂಗಳಮುಖಿಯರು) 34 ಮಂದಿ ಮತದಾನದ ಹಕ್ಕು ಹೊಂದಿದ್ದರಾದರೂ ಅವರ ಪೈಕಿ ಯಾರೊಬ್ಬರೂ ಮತ ಚಲಾವಣೆ ಮಾಡಿಲ್ಲ. ಇತರರು ಮಾಗಡಿಯಲ್ಲಿ 1, ರಾಮನಗರ ಮತ್ತು ಕನಕಪುರದಲ್ಲಿ ತಲಾ 14, ಚನ್ನಪಟ್ಟಣದಲ್ಲಿ 5 ಮಂದಿ ಮತದಾನ ಹಕ್ಕು ಹೊಂದಿದ್ದರು.

10 ಮಂದಿ ತಿರಸ್ಕಾರ
ಪ್ರಸಕ್ತ ಚುನಾವಣೆಯಲ್ಲಿ ತಟಸ್ಥ ಮತದಾನಕ್ಕೆ ಆಸ್ಪದ ಇರಲಿಲ್ಲ. ಆದರೆ, ರಾಮನಗರ ಜಿಲ್ಲೆಯಲ್ಲಿ 10 ಮಂದಿ ಮತದಾರರು ಮತಗಟ್ಟೆಗೆ ಆಗಮಿಸಿದ್ದರಾದರೂ ಮತದಾನ ಮಾಡುವುದಕ್ಕೆ ನಿರಾಕರಿಸಿದ್ದಾರೆ. ಇಂತಹ ಪ್ರಕರಣ ಮಾಗಡಿಯಲ್ಲಿ 6, ರಾಮನಗರದಲ್ಲಿ 4 ನಡೆದಿವೆ.

- ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement