ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ರೋಹಿಣಿಗೆ ಎಂಜಿನಿಯರ್ ಆಗೋ ಬಯಕೆ

Rashmi Kasaragodu
Updated On : 7 May 2013, 12:39 pm

ಕ.ಪ್ರ. ವಾರ್ತೆ  ಕನಕಪುರ  ಮೇ 6
ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಕನಕಪುರದ ಸೆಂಟ್ ಥಾಮಸ್ ಆಂಗ್ಲ ಪ್ರೌಢ ಶಾಲೆಯ ವಿದ್ಯಾರ್ಥಿನಿ ರೋಹಿಣಿ ಆರ್, 625 ಅಂಕಗಳಿಗೆ 620 ಅಂಕಗಳನ್ನು ಗಳಿಸಿ ಶೇ.99.20 ಅಂಕಗಳೊಂದಿಗೆ ರಾಜ್ಯದಲ್ಲಿಯೇ ಮೂರನೇ ರ್ಯಾಂಕ್ ಪಡೆದಿದ್ದಾಳೆ.
ಕನ್ನಡ ಭಾಷೆಯಲ್ಲಿ ಶೇ.100 ಅಂಕಗಳನ್ನು ಗಳಿಸಿ ಸಾಧನೆ ಮೆರೆದ ರೋಹಿಣಿಗೆ ಸಂಸ್ಥೆಯ ಅಧ್ಯಕ್ಷ ಫಾ.ಜಾನ್ ಆ್ಯಂಥೋನಿ, ಪ್ರಾಂಶುಪಾಲ ಸುಂದರಯ್ಯ, ಶಿಕ್ಷಕಿ ಮಮತಾ, ಸಾವಿತ್ರಿ ಅಭಿನಂದನೆ ಸಲ್ಲಿಸಿದ್ದಾರೆ.
   'ಕನ್ನಡಪ್ರಭ'ದೊಂದಿಗೆ ಮಾತನಾಡಿದ ರೋಹಿಣಿ, 'ಪ್ರತಿನಿತ್ಯ ಬೆಳಗ್ಗೆ 2 ಗಂಟೆ, ಸಂಜೆ 3 ಗಂಟೆಗಳ ಕಾಲ ನಿಯಮಿತವಾದ ಅಧ್ಯಯನ, ಅಂದಿನ ಪಾಠಗಳನ್ನು ಅಂದೇ ಪೂರೈಸುವ ದೃಷ್ಟಿಕೋನ, ಯಾವುದೇ ಮನೆ ಪಾಠಗಳಿಗೂ ಹೋಗದೆ ತಂದೆ, ತಾಯಿ ಉತ್ತೇಜನ, ಬೆಂಬಲದಿಂದ ಮನೆಯಲ್ಲಿಯೇ ವ್ಯಾಸಂಗ ಮಾಡಿರುವುದೇ ತನ್ನ ಯಶಸ್ಸಿನ ಗುಟ್ಟು' ಎಂದಳು.
ಮೂಲತ: ಕುಂದಾಪುರ ತಾಲೂಕಿನವರಾದ ರೋಹಿಣಿ ತಂದೆ ರಾಘವೇಂದ್ರ ಕಾರಂತ್ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಉದ್ಯೋಗಿ, ತಾಯಿ ಇಂದುಮತಿ ವಿಜಯಾ ಬ್ಯಾಂಕ್‌ನಲ್ಲಿದ್ದಾರೆ.
15 ವರ್ಷಗಳ ಹಿಂದೆ ಕನಕಪುರಕ್ಕೆ ಬಂದು ನೆಲೆಸಿದ್ದಾರೆ. ರೋಹಿಣಿ ರಸ್ತೆ ಜಕ್ಕಸಂದ್ರ ಗ್ರಾಮದ ಜೈನ್ ವಿದ್ಯಾನಿಕೇತನ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ್ದಾಳೆ.
     ತನ್ನ ಸಹಪಾಠಿಗಳಿಗೆ, ಕಿರಿಯರಿಗೆ ಮಾರ್ಗದರ್ಶನ ನೀಡುತ್ತಾ, ಯಾವುದೇ ಒತ್ತಡವಿಲ್ಲದೆ ಅಧ್ಯಯನ ನಡೆಸಿ, ಅಂದಿನ ಕೆಲಸಗಳನ್ನು ಅಂದೇ ಪೂರೈಸಿ, ಸ್ಪಷ್ಟ ಗುರಿ ಹೊಂದಿರುವ ರೋಹಿಣಿಗೆ ಎಂಜಿನಿಯರ್ ಆಗುವ ಬಯಕೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement