ಅರ್ಜಿ ವಿಚಾರಣೆ ಮುಂದೂಡಿಕೆ
ಬೆಂಗಳೂರು: ರಾಯಚೂರಿನ ಹಟ್ಟಿ ಚಿನ್ನದ ಗಣಿಯಲ್ಲಿ ಕಾನೂನು ಬಾಹಿರವಾಗಿ ಆಂಧ್ರಪ್ರದೇಶದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರಿಗೆ ಉದ್ಯೋಗ ನೀಡಲಾಗಿದೆ ಎಂದು ಆರೋಪಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿದೆ. ಕರ್ನಾಟಕ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳ ಮೀಸಲಾತಿ ಹಾಗೂ ನೇಮಕಾತಿ ಕಾಯ್ದೆಯ ಅನುಸಾರ, ಯಾವುದೇ ಹುದ್ದೆಯ ನೇಮಕ ಪ್ರಕ್ರಿಯೆಯಲ್ಲಿ ಹೊರ ರಾಜ್ಯದ ಪರಿಶಿಷ್ಟ ಜಾತಿ ಹಾಗೂ ಪಂಗಡವನ್ನು ಸಾಮಾನ್ಯ ವರ್ಗ ಎಂದೇ ಪರಿಗಣಿಸಬೇಕು. ಈ ನಿಯಮವನ್ನು ಗಾಳಿಗೆ ತೂರಿರುವ ಚಿನ್ನದ ಗಣಿಯ ಆಡಳಿತ ಮಂಡಳಿ ಐದು ಹುದ್ದೆಗಳನ್ನು ಆಂಧ್ರಪ್ರದೇಶ ಮೂಲದ ವ್ಯಕ್ತಿಗಳಿಗೆ ನೀಡಿದೆ ಎಂದು ಆರೋಪಿಸಿ ಬಿ.ಮಾದಪ್ಪ ಎಂಬುವರು ಅರ್ಜಿ ಸಲ್ಲಿಸಿದ್ದಾರೆ. ನ್ಯಾ.ರಾಮಮೋಹನರೆಡ್ಡಿ ಹಾಗೂ ನ್ಯಾ.ಬಿ.ಮನೋಹರ್ ಅವರಿದ್ದ ವಿಭಾಗೀಯ ಪೀಠ, ವಿಚಾರಣೆಯನ್ನು ಮುಂದೂಡಿದೆ.