ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅನಿತಾ ಸೋಲಿನ ಗರ, ಎಚ್ಡಿಕೆ ಗೆದ್ದರೂ ರಂಗೇರದ ರಾಮನಗರ

Rashmi Kasaragodu
Updated On : 9 May 2013, 12:21 pm

ಮತ್ತೀಕೆರೆ ಜಯರಾಮ್
ರಾಮನಗರ: ಎಲ್ಲೆಡೆ ವಿಜೇತರ ಸಂಭ್ರಮ ಮನೆ ಮಾಡಿದ್ದರೆ ರಾಮನಗರ ಕ್ಷೇತ್ರದಲ್ಲಿ ಕುಮಾರಸ್ವಾಮಿ ಗೆದ್ದರೂ ಜೆಡಿಎಸ್ ಸಂಭ್ರಮಕ್ಕೆ ಸೂತಕದ ಛಾಯೆ ಬೀರಿತ್ತು. ಇದಕ್ಕೆ ಕಾರಣ ನೆರೆಯ ಚನ್ನಪಟ್ಟಣ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರಿಗಾದ ಸೋಲು.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ದಂಪತಿ, ಅವಳಿ ಕ್ಷೇತ್ರಗಳಾದ ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಸ್ಪರ್ಧೆಗೆ ಇಳಿದಿದ್ದರು. ಎದುರಾಳಿಗಳ ಅಬ್ಬರಕ್ಕೆ ರಾಮನಗರದಲ್ಲಿ ಜೆಡಿಎಸ್ ಪಾಳಯ ತತ್ತರವಾಗಿತ್ತಾದರೂ ಭರ್ಜರಿ ಗೆಲವನ್ನೇ ಕಂಡಿದೆ.
ಆದರೆ, ಚನ್ನಪಟ್ಟಣದಲ್ಲೂ ಗೆದ್ದೇ ಗೆಲ್ಲುವುದಾಗಿ ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಪಕ್ಷಕ್ಕೆ, ಫಲಿತಾಂಶದಿಂದ ಆಘಾತ ಉಂಟಾಗಿದೆ. ರಾಮನಗರದಲ್ಲಿ ಗೆಲವಿನ ಸಿಹಿ ಸವಿದಿದ್ದರೂ ಚನ್ನಪಟ್ಟಣದಲ್ಲಿ ಉಂಡಿರುವ ಸೋಲಿನ ಕಹಿಯನ್ನು ಜೀರ್ಣಿಸಿಕೊಳ್ಳಲಾಗದ ಸ್ಥಿತಿ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರಿಗೆ ಎದುರಾಗಿದೆ.
ಈ ಕಾರಣದಿಂದಾಗಿಯೇ ರಾಮನಗರ ಜೆಡಿಎಸ್ ಸಂಭ್ರಮ ಎಣಿಕೆ ಕೇಂದ್ರಕ್ಕೆ ಸೀಮಿತವಾಯಿತು. ಚನ್ನಪಟ್ಟಣದಲ್ಲಿ ಸೋಲಿನಿಂದ ಆಕ್ರೋಶಗೊಂಡ ಜೆಡಿಎಸ್ ಕಾರ್ಯಕರ್ತರು ಸ್ವಪಕ್ಷೀಯ ನಾಯಕರ ಮೇಲೆ ಸಿಟ್ಟು ಪ್ರದರ್ಶಿಸಿದ್ದು, ಇಬ್ಬರು ಮುಖಂಡರ ಮನೆ ಮೇಲೆ ಕಲ್ಲು ತೂರಾಟವೂ ನಡೆದಿದೆ.
ನಗರ ಕೈ ಕೊಟ್ಟಿತು: ಚನ್ನಪಟ್ಟಣ ನಗರ ವ್ಯಾಪ್ತಿ ಮತದಾರರು ಪ್ರತಿ ಬಾರಿ ಜೆಡಿಎಸ್ ಬೆಂಬಲಿಸಿಕೊಂಡೇ ಬಂದಿದ್ದರು. ಗ್ರಾಮೀಣ ಭಾಗದಲ್ಲಿ ಸಿಮೆಂಟ್ ರಸ್ತೆ, ನೀರಾವರಿ ಯೋಜನೆ ಕೈಗೆತ್ತಿಕೊಂಡಿದ್ದರೂ ಹಳ್ಳಿಗಾಡಿನ ಮತದಾರರು ಯೋಗೇಶ್ವರ್‌ಗೆ ನಿರೀಕ್ಷಿತ ಪ್ರಮಾಣದಲ್ಲಿ ಬಲ ನೀಡಿಲ್ಲ. ಅಭಿವೃದ್ಧಿಯಲ್ಲಿ ಕಡೆಗಣಿಸಲ್ಪಟ್ಟ ನಗರದ ಮತದಾರರೇ ಗೆಲವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ.
ಬೊಂಬೆನಾಡು ಚನ್ನಪಟ್ಟಣ ಕ್ಷೇತ್ರದಲ್ಲಿ ಹಣ, ಬಳುವಳಿಗಳೇ ಫಲಿತಾಂಶವನ್ನು ನಿರ್ಧರಿಸುತ್ತವೆ. ಗೊಂದಲದ ಕಾರಣಕ್ಕೆ ಜೆಡಿಎಸ್, ಚನ್ನಪಟ್ಟಣ ನಗರ ಪ್ರದೇಶದ ಹಲವು ವಾರ್ಡ್‌ಗಳಲ್ಲಿ ಸಮರ್ಪಕವಾಗಿ ಹಣ ಹಂಚಿರಲಿಲ್ಲ. ಮನೆ ಮನೆಗೆ ಜೆಡಿಎಸ್ ಹಣ ತಲುಪುವಷ್ಟರಲ್ಲಿ ಮತದಾರರು ಮತಗಟ್ಟೆ ಕಡೆ ನಡೆದಿದ್ದರು. ಹೇಗೂ ಲೀಡ್ ಬರುತ್ತದೆಂದು ಜೆಡಿಎಸ್ ನಗರದ ಕಡೆಗೆ ಹೆಚ್ಚು ಗಮನ ನೀಡದಿರುವುದೂ ವೈಫಲ್ಯಕ್ಕೆ ಕಾರಣ.
ಸೋತರೂ ಮರಿದೇವರು ಸಾಧನೆ: ರಾಮನಗರ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 3ನೇ ಸ್ಥಾನಕ್ಕೆ ಕುಸಿದಿತ್ತು. ಈ ಬಾರಿ ಧನ ಬಲದ ಜತೆಗೆ ತಂತ್ರಗಾರಿಕೆಯ ರಾಜಕಾರಣದೊಂದಿಗೆ ಮರಿದೇವರು ಪ್ರಬಲ ಪೈಪೋಟಿ ಒಡ್ಡಿದ್ದು, ಗಮನಾರ್ಹ ಸಾಧನೆ ಮಾಡಿದ್ದಾರೆ. ಪ್ರಚಾರದ ಹಂತದಲ್ಲಿ ಅವರು ಜೆಡಿಎಸ್ ಪಾಳಯಕ್ಕೆ ನಡುಕ ಹುಟ್ಟಿಸಿದ್ದರು.
ಮರಿದೇವರು ಅವರಿಗೆ ಮಾಮೂಲಿಯಂತೆ ಕುಮಾರಸ್ವಾಮಿ ವಿರೋಧಿ ಮತಗಳು ಬಂದಿವೆ. ಇದರ ಜತೆಗೆ ಸ್ವಂತ ಸಾಮರ್ಥ್ಯ ಕೆಲಸ ಮಾಡಿದೆ. ಜೆಡಿಎಸ್, ಬಿಜೆಪಿಯಿಂದ ಹಲವು ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಸೇರಿದ್ದರಾದರೂ ಅವರ ಹಿಡಿತವಿರುವೆಡೆ ಕಾಂಗ್ರೆಸ್‌ಗೆ ಲೀಡ್ ತಂದುಕೊಟ್ಟಿಲ್ಲ.
ಕೆಜೆಪಿ ಅಡ್ಡಗಾಲು: ಮಾಗಡಿ ಕ್ಷೇತ್ರದಲ್ಲಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರಿಗೆ ಈ ಬಾರಿ ವಿರೋಧಿ ಅಲೆ ತೊಡಕಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಎ.ಮಂಜುನಾಥ್ ತನ್ನ ಬತ್ತಳಿಕೆಯಲ್ಲಿದ್ದ ಎಲ್ಲ ಅಸ್ತ್ರಗಳನ್ನು ಹೂಡಿದ್ದರಾದರೂ ಗುರಿ ತಲುಪಲಿಲ್ಲ. ಕಾಂಗ್ರೆಸ್ ಟಿಕೆಟ್ ವಂಚಿತ ಜೇಡ್ರಳ್ಳಿ ಕೃಷ್ಣಪ್ಪ ಕಾಂಗ್ರೆಸ್ ಮತಗಳನ್ನು ವಿಭಜಿಸಿ, ಆ ಪಕ್ಷವನ್ನು ಸೋಲಿನ ದವಡೆಗೆ ದೂಡುವಲ್ಲಿ ಯಶಸ್ವಿಯಾಗಿದ್ದಾರೆ.
ಕೈ ಹಿಡಿದ ಕೆಲಸ: ಕನಕಪುರದಲ್ಲಿ ನಿವೇಶನಗಳ ಹಂಚಿಕೆ, ಸಾಕಷ್ಟು ಅಭಿವೃದ್ಧಿಯ ಜತೆಗೆ ಚುನಾವಣೆಗೆ ಹೂಡಿದ ಭಾರಿ ಬಂಡವಾಳದಿಂದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಭರ್ಜರಿ ಗೆಲವು ದಾಖಲಿಸಿದ್ದಾರೆ. ತಮ್ಮ ಎದುರಾಳಿ ಸಿಂಧ್ಯಾ ಎಂದು ಗೊತ್ತಾಗುತ್ತಿದ್ದಂತೆಯೇ ಕೊಂಚ ದಿಗಿಲುಗೊಂಡಿದ್ದ ಶಿವಕುಮಾರ್ ಇಡೀ ಕ್ಷೇತ್ರದಲ್ಲಿ ಮನೆ ಮನೆ ಸುತ್ತಿದ್ದರು. ಶಿವಕುಮಾರ್ ಅವರ ಕಡು ವೈರಿ ಡಿ.ಎಂ.ವಿಶ್ವನಾಥ್, ನಾರಾಯಣಗೌಡ ಸಹಿತ ದೊಡ್ಡ ದಂಡೇ ಬೆನ್ನಿಗೆ ನಿಂತರೂ ಸಿಂಧ್ಯಾ ಗೆಲವಿನಂಚಿಗೆ ಬರಲೂ ಆಗಿಲ್ಲ.  


ವಿಜೇತರ ಸಂಭ್ರಮಾಚರಣೆ
ಮತ ಎಣಿಕೆ ಕೇಂದ್ರದ ಹೊರಗೆ ತಮ್ಮ ನೆಚ್ಚಿನ ನಾಯಕರ ಗೆಲವು ಖಚಿತವಾಗುತ್ತಿದ್ದಂತೆಯೇ ಬೆಂಬಲಿಗರು ಪಟಾಕಿ ಸಿಡಿಸಿ, ಶಿಳ್ಳೆ, ಜಯ ಘೋಷದೊಂದಿಗೆ ಸಂಭ್ರಮಾಚರಿಸಿದರು. ಗೌಸಿಯಾ ಕಾಲೇಜಿನಲ್ಲಿದ್ದ ಎಣಿಕೆ ಕೇಂದ್ರದ ಹೊರಗೆ ಜನರು ಕಿಕ್ಕಿರಿದು ಸೇರಿದ್ದರು. ಸಂಭ್ರಮಾಚರಣೆಯಲ್ಲಿ ತೊಡಗಿದವರು ಬೆಂಗಳೂರು-ಮೈಸೂರು ಹೆದ್ದಾರಿಗೆ ಇಳಿಯುವ ಮೂಲಕ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು. ವಿಜೇತರು ರಸ್ತೆಯಲ್ಲೇ ನಿಂತು ಭಾಷಣ ಬಿಗಿದರೂ ಕೇಳುವವರು ಇರಲಿಲ್ಲ. ಹೆದ್ದಾರಿಯಲ್ಲಿ ಸಂಚಾರಕ್ಕೆ ಸಂಚಕಾರ ಒದಗಿದ್ದರಿಂದ ರೋಗಿಗಳನ್ನು ತುರ್ತು ಚಿಕಿತ್ಸೆಗೆ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್‌ವಾಹನಗಳೂ ನಿಲ್ಲಬೇಕಾಯಿತು. ಕೆಲ ಚಾಲಕರು ವಾಹನಗಳನ್ನು ಮತ್ತೊಂದು ಪಥದಲ್ಲಿ ಚಲಿಸಿ, ತಾಪತ್ರಯ ತಂದುಕೊಂಡರು.

ಸ್ವಕ್ಷೇತ್ರಕ್ಕೆ ವಿಜೇತರು
ಪ್ರಮಾಣ ಪತ್ರ ಸ್ವೀಕರಿಸಿದ ಬೆನ್ನಲ್ಲೇ ವಿಜೇತರಾದ ಡಿ.ಕೆ.ಶಿವಕುಮಾರ್ ಕನಕಪುರಕ್ಕೆ, ಸಿ.ಪಿ.ಯೋಗೇಶ್ವರ್ ಚನ್ನಪಟ್ಟಣಕ್ಕೆ ಮತ್ತು ಎಚ್.ಸಿ.ಬಾಲಕೃಷ್ಣ ಮಾಗಡಿಗೆ ತೆರಳಿ ಬೆಂಬಲಿಗರು, ಪಕ್ಷದ ಕಾರ್ಯಕರ್ತರ ಜತೆಗೆ ಸಂಭ್ರಮಾಚರಣೆಯಲ್ಲಿ ತೊಡಗಿದರು.  ವಿಜೇತರನ್ನು ಅಭಿನಂದಿಸಲು ಆಯಾ ಕ್ಷೇತ್ರದ ಕಾರ್ಯಕರ್ತರು ಸಹಸ್ರಾರು ಸಂಖ್ಯೆಯಲ್ಲಿ ತಾಲೂಕು ಕೇಂದ್ರಕ್ಕೆ ಆಗಮಿಸಿದ್ದರು. ಪಕ್ಷದ ಬಾವುಟಗಳನ್ನು ಹಾರಾಡಿಸುತ್ತಾ ಮೆರವಣಿಗೆ ನಡೆಸಿದರು.
ಪ್ರಮಾಣ ಪತ್ರ ಸ್ವೀಕಾರ
ರಾಮನಗರ ಕ್ಷೇತ್ರದ ವಿಜೇತ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಮಾಣ ಪತ್ರ ಸ್ವೀಕರಿಸುವುದಕ್ಕೂ ಆಗಮಿಸಲಿಲ್ಲ. ಅವರ ಪರವಾಗಿ ಚುನಾವಣಾ ಏಜೆಂಟ್ ಕೆ.ದೇವೇಗೌಡ ಪ್ರಮಾಣ ಪತ್ರ ಪಡೆದರು. ಶಾಸಕ ಕೆ.ರಾಜು, ಮುಖಂಡ ಡಿ.ಗಿರೀಗೌಡ ಇತರರಿದ್ದರು.  ಕುಮಾರಸ್ವಾಮಿ ಅವರ ಪ್ರತಿಸ್ಪರ್ಧಿ ಮರಿದೇವರು ಮತ ಎಣಿಕೆ ಪ್ರಾರಂಭದಲ್ಲೇ ಎಣಿಕೆ ಕೇಂದ್ರಕ್ಕೆ ಆಗಮಿಸಿದ್ದರು. ಹೊರಗೆ ನೆರೆದಿದ್ದ ಬೆಂಬಲಿಗರತ್ತ ಕೈ ಬೀಸಿ ಕೇಂದ್ರದ ಒಳಕ್ಕೆ ಆಗಮಿಸಿದ ಅವರು ಎದುರಾಳಿಯ ಮತಗಳಿಕೆ ಪ್ರಮಾಣ ಹೆಚ್ಚುತ್ತಿದ್ದಂತೆಯೇ ನಿರ್ಗಮಿಸಿದರು. ಡಿ.ಕೆ.ಶಿ, ಬಾಲಕೃಷ್ಣ, ಯೋಗೇಶ್ವರ್ ಫಲಿತಾಂಶದ ಬಳಿಕ ಕೇಂದ್ರಕ್ಕೆ ಆಗಮಿಸಿ ಪ್ರಮಾಣ ಪತ್ರ ಸ್ವೀಕರಿಸಿದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement