ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ಕೈ' ಹಿಡಿದ ದೊಡ್ಡಬಳ್ಳಾಪುರದ ಮತದಾರ

Rashmi Kasaragodu
Updated On : 9 May 2013, 12:22 pm

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಘಟಾನುಘಟಿಗಳ ಅಖಾಡವೆಂದೇ ರಾಜ್ಯ ಮಟ್ಟದಲ್ಲಿ ಸುದ್ಧಿ ಮಾಡಿದ್ದ ಕ್ಷೇತ್ರದಲ್ಲಿ ಘಟಾನುಘಟಿಗಳು ಸೋಲುಂಡಿದ್ದು, ಕಾಂಗ್ರೆಸ್‌ನಿಂದ ಇದೇ ಮೊದಲ ಬಾರಿಗೆ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಟಿ.ವೆಂಕಟರಮಣಯ್ಯ (ಅಪ್ಪಕಾರನಹಳ್ಳಿ ವೆಂಕಟೇಶ್) ಕಡಿಮೆ ಅಂತರದಿಂದ ಜಯದ ನಗೆ ಬೀರಿದ್ದಾರೆ.
ಪ್ರಬಲ ಪೈಪೋಟಿ ನೀಡಿದ ಜೆಡಿಎಸ್ ಬಂಡಾಯ, ಪಕ್ಷೇತರ ಅಭ್ಯರ್ಥಿ ಬಿ.ಮುನೇಗೌಡ ಕೂದಳೆಲೆಯ ಅಂತರದಲ್ಲಿ ಸೋಲುಂಡಿದ್ದಾರೆ. ಇನ್ನು ಪ್ರಬಲ ಸ್ಪರ್ಧೆಯ ಹಾವು ಏಣಿ ಆಟದಲ್ಲಿ 2ನೇ ಬಾರಿ ಅದೃಷ್ಟ ಪರೀಕ್ಷೆಗೆ ನಿಂತಿದ್ದ ಮಾಜಿ ಸಚಿವ ಸಿ.ಚನ್ನಿಗಪ್ಪ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟರೆ, ಕೊನೆ ಹಂತದವರೆಗೆ ಸ್ಪರ್ಧಿಸಲು ಹಿಂದೇಟು ಹಾಕುತ್ತಲೇ ಸ್ಪರ್ಧಾ ಅಖಾಡಕ್ಕಿಳಿದಿದ್ದ ಹಾಲಿ ಶಾಸಕ, ಕೊಳಗೇರಿ ಅಭಿವೃದ್ಧಿ ಮಂಡಲಿ ಅಧ್ಯಕ್ಷ ಜೆ.ನರಸಿಂಹಸ್ವಾಮಿ 4ನೇ ಸ್ಥಾನ ಪಡೆದು ಅಚ್ಚರಿ ಮೂಡಿಸಿದ್ದಾರೆ.
ಯಾರು ಈ ವೆಂಕಟರಮಣಯ್ಯ: ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲವು ಸಾಧಿಸಿರುವ ಟಿ.ವೆಂಕಟರಮಣಯ್ಯ ದೊಡ್ಡಬಳ್ಳಾಪುರ ತಾಲೂಕಿನ ಬಹುತೇಕ ಜನರಿಗೆ ಪರಿಚಿತ ಮುಖವೇನೂ ಅಲ್ಲ. ಕಾರಣ ಕಳೆದ 2 ದಶಕಗಳಿಂದ ರಾಜಕಾರಣದ ನಂಟಸ್ಥಿಕೆ ಹೊಂದಿದ್ದರೂ, ಸಕ್ರಿಯ ರಾಜಕಾರಣದಲ್ಲಿ ಇವರು ಕಾಣಿಸಿಕೊಂಡಿರಲಿಲ್ಲ. ಕನಿಷ್ಠ ಗ್ರಾಮ ಪಂಚಾಯಿತಿ ಮಟ್ಟದ ಚುನಾವಣೆಯಲ್ಲಿ ಕೂಡ ಸ್ಪರ್ಧಿಸಿದವರೂ ಅಲ್ಲ, ಗೆದ್ದವರೂ ಅಲ್ಲ. ಎಸ್ಸೆಸ್ಸೆಲ್ಸಿ ಓದಿದ ನಂತರ ವಾಣಿಜ್ಯೋದ್ಯಮಿಯಾಗಿ ಬದುಕು ಕಟ್ಟಿಕೊಂಡ ಅವರು ಸದ್ಯಕ್ಕೆ ಹಲವು ಬಾರ್ ಮತ್ತು ಹೋಟೆಲುಗಳ ಮಾಲೀಕ. ಕಾಂಗ್ರೆಸ್ ಪಕ್ಷದ ನಿಷ್ಠ ಕಾರ್ಯಕರ್ತನಾಗಿ ತಾಲೂಕು ಬ್ಲಾಕ್ ಅಧ್ಯಕ್ಷನಾಗಿ, ಜಿಲ್ಲಾ ಉಪಾಧ್ಯಕ್ಷನಾಗಿ ಕೆಲಸ ಮಾಡಿದ ಅನುಭವವಿದೆ. ರಾಜಕಾರಣದ ಹಾವು-ಏಣಿ ಆಟದಲ್ಲಿ ನೇರವಾಗಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಪಡೆದು ಪ್ರಥಮ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ.
ಹೀನಾಯ ಸೋಲಿಗೆ ಕಾರಣ: ಇನ್ನು ಜಾಲಪ್ಪ-ನರಸಿಂಹಸ್ವಾಮಿ ಭದ್ರಕೋಟೆ ಎಂದೇ ಕ್ಷೇತ್ರವನ್ನು ಕರೆಯಲಾಗುತ್ತಿತ್ತು. ಆದರೆ ಜಾಲಪ್ಪ ಕೃಪಾಶೀರ್ವಾದ ಈ ಬಾರಿ ಜೆ.ನರಸಿಂಹಸ್ವಾಮಿಗೆ ಸಿಗದೇ ಹೋದದ್ದು, ಸ್ಪರ್ಧೆ ವಿಚಾರವಾಗಿ ಕೊನೆಹಂತದವರೆಗೆ ಇದ್ದ ಗೊಂದಲ, ಚುನಾವಣೆಯ ಅಂತಿಮ ಕ್ಷಣಗಳಲ್ಲಿ ತೋರಿದ ನಿರ್ಲಕ್ಷ್ಯ, ನಂಬಿದ್ದ ಕೆಲವರು ಮಾಡಿದ ನಂಬಿಕೆ ದ್ರೋಹ, ಬಿಜೆಪಿಯೊಳಗೆ ಇದ್ದ ಭಿನ್ನಮತ (ಮೂಲ ಮತ್ತು ವಲಸಿಗ ಬಿಜೆಪಿ ಮುಖಂಡರ ಶೀಥಲ ಸಮರ) ನರಸಿಂಹಸ್ವಾಮಿ ಅವರ ಸೋಲು ಮತ್ತು ಹೀನಾಯ ಪ್ರದರ್ಶನಕ್ಕೆ ಕಾರಣ ಎನ್ನಲಾಗುತ್ತಿದೆ. ಆದರೆ ಕಳೆದ 3 ದಶಕಗಳಿಂದ ಜಾಲಪ್ಪ ಕುಟುಂಬಕ್ಕೆ ಈ ರೀತಿಯ ಆಘಾತಕರಿ ಸೋಲು ಉಂಟಾಗುತ್ತಿರುವುದು ಇದೇ ಮೊದಲು. ಹ್ಯಾಟ್ರಿಕ್ ಹೀರೋ ಎನಿಸಿಕೊಂಡಿದ್ದ ನರಸಿಂಹಸ್ವಾಮಿಗೆ ಈ ಬಾರಿ ಅದೃಷ್ಟ ಕೈ ಕೊಟ್ಟಿದ್ದಂತೂ ಸತ್ಯ.
  ಇನ್ನು ಜೆಡಿಎಸ್‌ನಿಂದ ಸಿಡಿದು ಬಂಡಾಯದ ಬಾವುಟ ಹಾರಿಸಿ ಕೊನೆಗೆ ಪಕ್ಷೇತರವಾಗಿ ಸ್ಪರ್ಧೆಗಿಳಿಸಿದ್ದ ಬಿ.ಮುನೇಗೌಡ ತಮ್ಮ ನೈಜ ಜನಬಲವನ್ನು ಚುನಾವಣೆಯಲ್ಲಿ ಸಾಬೀತು ಮಾಡಿದ್ದಾರೆ. 1400 ಮತಗಳ ತೀರಾ ಸನಿಹ ಅಂತರದಲ್ಲಿ ಸೋಲುಂಡಿರುವ ಅವರು ಕ್ಷೇತ್ರದಲ್ಲಿ ಭದ್ರವಾದ ನೆಲೆ ಕಂಡುಕೊಂಡಿದ್ದಾರೆ ಎಂಬುದು ಸಾಬೀತಾಗಿದೆ.  ಜೊತೆಗೆ ಸ್ಟಾರ್ ಪ್ರಚಾರಕರು, ಪಕ್ಷದ ಬೆಂಬಲ, ಮುಖಂಡರ ಕೃಪೆ ಇಲ್ಲದೆಯೂ ತಮ್ಮ ಯುವ ಕಾರ್ಯಕರ್ತರು ಮತ್ತು ಅಭಿಮಾನಿಗಳ ನೆರವಿನಿಂದಲೇ ಬೃಹತ್ ಶಕ್ತಿಪ್ರದರ್ಶನ ನಡೆಸಿರುವ ಮುನೇಗೌಡ ಸ್ವತಃ ಜೆಡಿಎಸ್ ಅಭ್ಯರ್ಥಿ ಚನ್ನಿಗಪ್ಪಗಿಂತ ಹೆಚ್ಚಿನ ಮತ ಪಡೆಯುವುದರೊಂದಿಗೆ ಜೆಡಿಎಸ್ ಹೈಕಮಾಂಡ್‌ಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
  ಕುಮಾರಸ್ವಾಮಿ ವಿರುದ್ಧ ಟಿಕೆಟ್ ಡೀಲಿಂಗ್ ಆರೋಪ ಮಾಡಿದ್ದ ಅವರು ಜೆಡಿಎಸ್ ಸೋಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಠೇವಣಿ ನಷ್ಟ: ಉಳಿದಂತೆ ಕೆಜೆಪಿಯಿಂದ ಸ್ಪರ್ಧೆಯಲ್ಲಿದ್ದ ಚಿತ್ರನಿರ್ದೇಶಕ, ಸಾಹಿತಿ ವಿ.ನಾಗೇಂದ್ರಪ್ರಸಾದ್, ಸಿಪಿಐ(ಎಂ)ನ ಆರ್.ಚಂದ್ರತೇಜಸ್ವಿ, ಬಿಎಸ್ಪಿಯ ಪುರುಷೋತ್ತಮ್ ಮತ್ತು ಬಿಎಸ್‌ಆರ್ ಪಕ್ಷದ ಕುಮಾರ್ ಠೇವಣಿ ಕಳೆದುಕೊಂಡಿದ್ದಾರೆ.
ಒಟ್ಟಿನಲ್ಲಿ ದೊಡ್ಡಬಳ್ಳಾಪುರದ ಮತದಾರ ಪಕ್ಷಾಂತರ, ಅಭಿವೃದ್ಧಿ ನಿರ್ಲಕ್ಷ್ಯ, ಭ್ರಷ್ಟಾಚಾರದ ವಿರುದ್ಧ ಮತಚಲಾಯಿಸಿರುವುದು ಸ್ಪಷ್ಟವಾಗಿದೆ. ಅದೇ ರೀತಿ ತೋಳ್ಪಲ ಮತ್ತು ವ್ಯಕ್ತಿ ಪ್ರತಿಷ್ಠೆಯನ್ನೂ ಪಕ್ಕಕ್ಕಿಟ್ಟು ಬದಲಾವಣೆ ಬಯಸಿದ್ದಾರೆ. ಹೀಗಾಗಿ ಮುಂದಿನ 5 ವರ್ಷಕ್ಕೆ ಹೊಸ ಶಾಸಕರು ದೊಡ್ಡಬಳ್ಳಾಪುರವನ್ನು ಪ್ರತಿನಿಧಿಸಲಿದ್ದಾರೆ.
 ವೆಂಕಟರಮಣಯ್ಯಗೆ ಅಪ್ಪಟ ರಾಜಕಾರಣ ಹೊಸದು. ಕ್ಷೇತ್ರದಲ್ಲಿ ಆಗಬೇಕಿರುವ ಕೆಲಸ-ಕಾರ್ಯಗಳತ್ತ ಹೇಗೆ ನಿರ್ದಿಷ್ಟ ಯೋಜನೆಯೊಂದಿಗೆ ಕಾರ್ಯಪ್ರವೃತ್ತರಾಗುತ್ತಾರೆ ಎಂಬುದು ಜನರ ನಿರೀಕ್ಷೆ.


ಘಟಾನುಘಟಿಗಳ ಸೋಲು:
ಇನ್ನು ಈ ಬಾರಿ ಗೆದ್ದೇ ಬಿಡುವ ವಿಶ್ವಾಸ ಹೊಂದಿದ್ದ ಚನ್ನಿಗಪ್ಪ ಮತ್ತು ನರಸಿಂಹಸ್ವಾಮಿ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಕಾರಣ ಈ ಇಬ್ಬರೂ 3 ಮತ್ತು 4ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಕಳೆದ ಚುನಾವಣೆಯಲ್ಲಿ 47 ಸಾವಿರಕ್ಕೂ ಹೆಚ್ಚು ಮತ ಪಡೆದ ವಿಶ್ವಾಸದಲ್ಲಿ ಈ ಬಾರಿ ಗೆಲವು ನನ್ನದೇ ಎಂಬ ಅತೀವ ಆತ್ಮವಿಶ್ವಾಸ ಹೊಂದಿದ್ದ ಚನ್ನಿಗಪ್ಪ ಪರ ಮತದಾರ ಒಲಿದಿಲ್ಲ. ಜೆಡಿಎಸ್ ಮುಖಂಡರ ಅತಿಯಾದ ಆತ್ಮವಿಶ್ವಾಸ ಕೂಡ ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಜೊತೆಗೆ ಚನ್ನಿಗಪ್ಪ ಹಿಂದೆ-ಮುಂದೆ ಬಹುಪರಾಕು ಹೇಳಿ ಸಾಗುತ್ತಿದ್ದ ಜನ ಮತದಾರರ ವಿಶ್ವಾಸ ಗಳಿಸುವಲ್ಲಿ ವಿಫಲರಾಗಿದ್ದಾರೆ ಎಂಬುದನ್ನು ಫಲಿತಾಂಶ ಹೇಳುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement