ದ್ವಿತೀಯ ಪಿಯುಸಿ: ಬೆಂ.ಗ್ರಾ.ಜಿಲ್ಲೆಗೆ 11ನೇ ಸ್ಥಾನ
ದೊಡ್ಡಬಳ್ಳಾಪುರ: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ 73.11 ಫಲಿತಾಂಶ ಪಡೆಯುವುದರೊಂದಿಗೆ ರಾಜ್ಯದಲ್ಲಿ 11ನೇ ಸ್ಥಾನವನ್ನು ಪಡೆದಿದೆ ಎಂದು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎನ್. ಸಾವಿತ್ರಮ್ಮ ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ಮತ್ತು ನೆಲಮಂಗಲ ತಾಲೂಕುಗಳ ಸರ್ಕಾರಿ, ಅನುದಾನಿತ, ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗಗಳಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ ಒಟ್ಟು 5553 ವಿದ್ಯಾರ್ಥಿಗಳಲ್ಲಿ 4060 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಜಿಲ್ಲೆಯ ಫಲಿತಾಂಶದಲ್ಲಿ ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆ ತೆಗೆದುಕೊಂಡಿದ್ದ 3355 ಬಾಲಕರ ಪೈಕಿ 1802 ಬಾಲಕರು ಉತ್ತೀರ್ಣರಾಗಿದ್ದಾರೆ. 3705 ಬಾಲಕಿಯರಲ್ಲಿ 2627 ಮಂದಿ ತೇರ್ಗಡೆ ಹೊಂದಿದ್ದಾರೆ. ಅದೇ ರೀತಿ ಕಲಾ ವಿಭಾಗದ 3019 ವಿದ್ಯಾರ್ಥಿಗಳಲ್ಲಿ 1685 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದ 2918 ವಿದ್ಯಾರ್ಥಿಗಳಲ್ಲಿ 2104 ವಿದ್ಯಾರ್ಥಿಗಳು ಮತ್ತು ವಿಜ್‌ಞಾನ ವಿಭಾಗದ 1126 ವಿದ್ಯಾರ್ಥಿಗಳಲ್ಲಿ 640 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಖಾಸಗಿಯಾಗಿ ಪರೀಕ್ಷೆ ತೆಗೆದುಕೊಂಡಿದ್ದ 493 ವಿದ್ಯಾರ್ಥಿಗಳಲ್ಲಿ 119 ಮಂದಿ ತೇರ್ಗಡೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.