ನನ್ನ ವಿರುದ್ಧ ಸುಳ್ಳು ಆರೋಪಕ್ಕೆ ಮತದಾರರಿಂದ ತಕ್ಕ ಉತ್ತರ
ಕ.ಪ್ರ.ವಾರ್ತೆ ಮಾಗಡಿ ಮೇ 9
ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಹಗರಣದಲ್ಲಿ ಶಾಮೀಲಾಗಿದ್ದೇನೆ ಎಂದು ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದವರಿಗೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಎದುರಾಳಿಗಳಿಗೆ ತಿರುಗೇಟು ನೀಡಿದರು. ಅವರು ನೂತನ ಶಾಸಕರಾಗಿ ಆಯ್ಕೆಗೊಂಡ ನಂತರ ಮೊದಲ ಬಾರಿಗೆ ಐತಿಹಾಸಿಕ ಶ್ರೀರಂಗನಾಥಸ್ವಾಮಿ ದೇವಲಾಯಲಕ್ಕೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಕ್ತಿ ಸರ್ಮಪಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ ನಾನು ಈ ಕ್ಷೇತ್ರದ ಮಗನಾದ ನನ್ನ ವಿರುದ್ಧ ಪಿತೂರಿ ಮಾಡುವವರಿಗೆ ಮತದಾರರೇ ತಕ್ಕ ಉತ್ತರ ನೀಡಿದ್ದಾರೆ. ನಾನೊಬ್ಬ ಛಲಗಾರ, ಕನಸುಗಾರ, ನಾನು ನುಡಿದಂತೆ ನಡೆಯುತ್ತೇನೆ. ನನಗೂ ಮಂತ್ರಿಯಾಗುವ ಆಸೆಯಿದೆ, ಕಾಲ ಕೂಡಿಬರಬೇಕಷ್ಟೆ ಎಂದರು. ಕ್ಷೇತ್ರದ ರೈತರ ಬದುಕನ್ನು ಹಸನು ಮಾಡಲು ಶಾಶ್ವತ ನೀರಾವರಿ ಯೋಜನೆಯನ್ನು ಪಕ್ಷಾತೀತವಾಗಿ ಅನುಷ್ಠಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮಾಜಿ ಸಚಿವ ಎಚ್.ಎಂ. ರೇವಣ್ಣ ಅವರು ಸಹ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕೆ ನನ್ನೊಂದಿಗೆ ಸಹಕರಿಸಲಿ ಎಂದು ಬಾಲಕೃಷ್ಣ ತಿಳಿಸಿದರು.
ನೂತನ ಶಾಸಕರಾಗಿ ಮೊದಲ ಬಾರಿಗೆ ಮಾಗಡಿಗೆ ಭೇಟಿ ಬಾಲಕೃಷ್ಣ ಅವರನ್ನು ಕಾರ್ಯಕರ್ತರು ಅಭಿಮಾನಿಗಳು ಹಾರ ಹಾಕಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಭವ್ಯವಾಗಿ ಸ್ವಾಗತಿಸಿರು. ಗಾಂಧಿ ವೃತ್ತ, ಕೆಂಪೇಗೌಡ ವೃತ್ತ, ಕಲ್ಯಗೇಟ್ ವೃತ್ತ, ಬಸವೇಶ್ವರರ ವೃತ್ತದಲ್ಲಿ ಅಭಿಮಾನಿಗಳು ಬಾಲಕೃಷ್ಣ ಅವರಿಗೆ ಹಾರ ಹಾಕಿ ಸ್ವಾಗತಿಸಿದರು.