ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ನಾಲ್ವರ ಪೈಕಿ ಒಬ್ಬರಿಗೆ ಸಿಹಿ, ಮೂವರಿಗೆ ಕಹಿ

Rashmi Kasaragodu
Updated On : 10 May 2013, 12:24 pm

ಮತ್ತೀಕೆರೆ ಜಯರಾಮ್
ರಾಮನಗರ: ಕಾಂಗ್ರೆಸ್ ಪಕ್ಷದ ಪಾಲಿಗೆ ಈಗ ವಿಧಾನಸಭೆ ಹಂಗಿನ ಅರಮನೆಯೇನಲ್ಲ. ಆ ಪಕ್ಷವು ಸ್ವಂತ ಬಲದ ಮೇಲೆ ಸ್ವತಂತ್ರವಾಗಿಯೇ ಸರ್ಕಾರ ರಚನೆ ಮಾಡುತ್ತಿರುವುದು ಈ ಜಿಲ್ಲೆಯ ನಾಲ್ವರು ಶಾಸಕರ ಪೈಕಿ ಒಬ್ಬರಿಗೆ ಸಿಹಿ, ಮೂವರಿಗೆ ಕಹಿಯಾಗಿದೆ.  
ಸ್ವಂತ ಬಲದ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ಚುಕ್ಕಾಣಿಯಿಂದ 6ನೇ ಬಾರಿ ವಿಧಾನಸಭೆ ಪ್ರವೇಶಿಸುತ್ತಿರುವ ಡಿ.ಕೆ.ಶಿವಕುಮಾರ್ ಪಾಲಿಗೆ ಲಾಭ ಸಾಧ್ಯತೆ ಇದೆ. ರಾಮನಗರದಲ್ಲಿ ಹ್ಯಾಟ್ರಿಕ್ ಗೆಲವು ಸಾಧಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ತಲಾ 4ನೇ ಬಾರಿ ವಿಧಾನಸಭೆ ಪ್ರವೇಶಿಸುತ್ತಿರುವ ಮಾಗಡಿಯ ಎಚ್.ಸಿ.ಬಾಲಕೃಷ್ಣ, ಚನ್ನಪಟ್ಟಣದ ಸಿ.ಪಿ.ಯೋಗೇಶ್ವರಗೆ ಅಪಥ್ಯವೆನಿಸಿದೆ.
ಡಿಕೆಶಿಗೆ ಸ್ಥಾನ ಸಂಭವ: ಕಾಂಗ್ರೆಸ್ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿರುವುದು ಕನಕಪುರದಿಂದ ಆಯ್ಕೆಯಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಮುಖ್ಯಮಂತ್ರಿ ರೇಸ್‌ನಲ್ಲಿ ನಾನೂ ಒಬ್ಬ ಎಂದಿರುವ ಅವರಿಗೆ ಪ್ರಮುಖ ಖಾತೆಯೊಂದಿಗೆ ಸಚಿವ ಸ್ಥಾನ ಸಂಭವವಿದೆ.  
ಎಸ್.ಎಂ.ಕೃಷ್ಣ ಅಧಿಕಾರಾವಧಿಯಲ್ಲಿ 1999 ರಿಂದ 2004ರವರೆಗೆ ಪ್ರಮುಖ ಖಾತೆಗಳ ಸಚಿವರಾಗಿದ್ದ ಶಿವಕುಮಾರ್ ನಂತರದಲ್ಲಿ ಬಂದ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಶಾಸಕರಾಗಷ್ಟೇ ಉಳಿದಿದ್ದರು. 2008ರಲ್ಲೂ ಶಾಸಕ ಸ್ಥಾನವೇ ಗಟ್ಟಿಯಾಗಿತ್ತು.
ಎಚ್‌ಡಿಕೆ ಪ್ರತಿಪಕ್ಷ ನಾಯಕ: ಅತಂತ್ರ ಸ್ಥಿತಿ ನಿರ್ಮಾಣವಾದಲ್ಲಿ ಪಾಲುದಾರಿಕೆ ಸರ್ಕಾರ ರಚನೆಯ ಬಗ್ಗೆ ದಳಪತಿ ಎಚ್.ಡಿ.ಕುಮಾರಸ್ವಾಮಿ ಕಟ್ಟಿಕೊಂಡಿದ್ದ ಕನಸು ನುಚ್ಚುನೂರಾಗಿದೆ. ಸಭಾ ನಾಯಕನ ಕನಸು ಕಟ್ಟಿಕೊಂಡಿದ್ದವರಿಗೆ ಪ್ರತಿಪಕ್ಷ ನಾಯಕ ಸ್ಥಾನದಲ್ಲಿ ಕೂರುವ ಅವಕಾಶ ಒದಗಿ ಬಂದಿದೆ.
2004ರಲ್ಲಿ ಮೊದಲ ಬಾರಿ ರಾಮನಗರದಿಂದ ಚೊಚ್ಚಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದ ಕುಮಾರಸ್ವಾಮಿ ಅವರು ಅತಂತ್ರ ಸ್ಥಿತಿಯ ಲಾಭ ಪಡೆದು, ಬಿಜೆಪಿ ಜತೆಗಿನ ಪಾಲುದಾರಿಕೆ ಸರ್ಕಾರದಲ್ಲಿ ರಾಜ್ಯದ ಚುಕ್ಕಾಣಿ ಹಿಡಿದಿದ್ದರು. ಕಳೆದ ಬಾರಿಯೂ ಗೆದ್ದರಾದರೂ ಮರು ವರ್ಷದಲ್ಲೇ ಸಂಸತ್ ಪ್ರವೇಶಿಸಿದ್ದರು.
ಬಾಲು, ಸಿಪಿವೈಗೆ ನಿರಾಸೆ: ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್ ಪಾತ್ರ ವಹಿಸಿದರೆ ಸಚಿವ ಸ್ಥಾನಕ್ಕೇರಲು ಹಂಬಲಿಸಿದ್ದ ಮಾಗಡಿಯಿಂದ 4ನೇ ಬಾರಿ ಶಾಸಕರಾಗಿರುವ ಎಚ್.ಸಿ.ಬಾಲಕೃಷ್ಣಗೂ ಭ್ರಮನಿರಸನವಾಗಿದೆ. ಈ ಬಾರಿ ಅವರಿಗೆ ಮತ್ತೊಮ್ಮೆ ಪ್ರತಿಪಕ್ಷದ ಸಾಲಿನಲ್ಲೇ ಸ್ಥಾನ ಗಟ್ಟಿ.
ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನಕ್ಕೆ ಇವರು ಬೇಡಿಕೆ ಇಟ್ಟಿರಲಿಲ್ಲವಾದರೂ ಆಯಕಟ್ಟಿನ ನಿಗಮ-ಮಂಡಳಿಯ ಅಪೇಕ್ಷೆ ಹೊಂದಿದ್ದರು. ಕುಮಾರಸ್ವಾಮಿ ಕಿಚನ್ ಕ್ಯಾಬಿನೆಟ್‌ನಲ್ಲಿ ಅವರಿಗೆ ಈಗಲೂ ಸ್ಥಾನ ಭದ್ರವಾಗಿದೆ.
ಚನ್ನಪಟ್ಟಣದಲ್ಲಿ ಈ ಬಾರಿ ಎದ್ದು ಕಾಣುವ ಚಿಹ್ನೆಗಾಗಿಯೇ ಮತ್ತೊಂದು ಪಕ್ಷಾಂತರ ಮಾಡಿ ಗೆದ್ದಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕೂಡ ವಿಧಾನಸಭೆಯಲ್ಲಿ ಅತಂತ್ರ ಸ್ಥಿತಿಯನ್ನೇ ಎದುರು ನೋಡುತ್ತಿದ್ದರು. ಆಪರೇಷನ್ ಕಮಲಕ್ಕೆ ಒಳಗಾಗಿ ಅಧಿಕಾರ ಸವಿದಿದ್ದ ಅವರಿಗೂ ಈಗ ನಿರಾಸೆ ಉಂಟಾಗಿದೆ.
ಚಿಗುರೊಡೆದ ಆಸೆ: ಕಳೆದೊಂದು ದಶಕದಿಂದ ಯಾವೊಂದು ನಾಮಕರಣ ಸದಸ್ಯತ್ವವೂ ಇಲ್ಲದೆ ಮೂಲೆ ಸೇರಿದ್ದ 2ನೇ ಸಾಲಿನ ಹಲವು ಕಾಂಗ್ರೆಸ್ ಮುಖಂಡರು ಈಗ ನಿಗಮ, ಮಂಡಳಿಗಳ ಸ್ಥಾನದೊಂದಿಗೆ ರಾಜಕೀಯ ಪುನರ್ವಸತಿ ಕಲ್ಪಿಸಿಕೊಳ್ಳುವ ನಿಟ್ಟಿನಲ್ಲಿ ಲಾಬಿಗೆ ಇಳಿಯಲು ಸಜ್ಜುಗೊಂಡಿದ್ದಾರೆ.
ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಚಿತ್ತ ಲೋಕಸಭೆ ಚುನಾವಣೆಯತ್ತ ನೆಟ್ಟಿದೆ. ಅವರ ಪುತ್ರ ಚಂದ್ರಶೇಖರ್, ಕೆ.ರಮೇಶ್, ಚನ್ನಪಟ್ಟಣದ ರಘುನಂದನ್ ರಾಮಣ್ಣ, ಎ.ಸಿ.ವೀರೇಗೌಡ, ಕನಕಪುರದಲ್ಲಿ ಮಾಜಿ ಶಾಸಕ ಎಸ್.ರವಿ ಸೇರಿದಂತೆ ಕೆಲವರಿಗೆ ಆಸೆ ಚಿಗುರೊಡೆದಿದೆ.
ಪರಾಜಿತ ಅಭ್ಯರ್ಥಿಗಳಿಗೂ ಅವಕಾಶ ಉಂಟು ಎನ್ನುವುದಾದರೆ ರಾಜ್ಯ ಮಟ್ಟದಲ್ಲಿ ಪ್ರಮುಖ ಸ್ಥಾನಗಳಿಗೆ ಮರಿದೇವರು, ಎ.ಮಂಜುನಾಥ್ ಪ್ರಯತ್ನಿಸುವುದನ್ನೂ ತಳ್ಳಿ ಹಾಕುವಂತಿಲ್ಲ. ಇವರಲ್ಲಿ ಮರಿದೇವರಿಗೆ ಕುಮಾರಸ್ವಾಮಿ ವಿರುದ್ಧ ಹೋರಾಡಿದ್ದರೆನ್ನುವುದು ಪ್ಲಸ್ ಪಾಯಿಂಟ್ ಆಗಲಿದೆ.



ರಾಜಕಾರಣದ್ದೇ ಚರ್ಚೆ
ಚುನಾವಣೆ ಫಲಿತಾಂಶ ಮುಗಿದು ಗೆದ್ದವರು ಬೀಗಿದರೆ, ಸೋತವರು ಸೊರಗಿದ್ದಾರೆ. ರಾಮನಗರದ ರಾಜಕೀಯ ಪಡಸಾಲೆಯಲ್ಲಿ ಈಗ ಎಲ್ಲೆಡೆ ಸೋಲು-ಗೆಲವು, ಅಭ್ಯರ್ಥಿಗಳಿಗೆ ಆದ ಒಳೇಟಿನದ್ದೇ ಚರ್ಚೆ.  ಕ್ಷೇತ್ರದಲ್ಲಿ ಪ್ರಚಾರ ನಡೆಸದೆಯೂ ಕುಮಾರಸ್ವಾಮಿ ಭಾರಿ ಅಂತರದ ಗೆಲವು ದಾಖಲಿಸಿರುವುದು, ಸಿಂಧ್ಯಾ ವಿರುದ್ಧ ಶಿವಕುಮಾರ್ ಭರ್ಜರಿ ಜಯಬೇರಿ, ಬಾಲಕೃಷ್ಣ ಪುನರಾವರ್ತನೆ, ಅನಿತಾ ವಿರುದ್ಧ ಗೆಲವಿಗೆ ಯೋಗೇಶ್ವರ್ ಹೆಣೆದ ತಂತ್ರದ ವಿಷಯ ಚರ್ಚೆಗೆ ಗ್ರಾಸವಾಗಿದೆ. ರಾಮನಗರ, ಕನಕಪುರ ಫಲಿತಾಂಶದಲ್ಲಿ ಮಹತ್ತರವೇನೂ ಇಲ್ಲ. ಮಾಗಡಿಯಲ್ಲಿ ಬಾಲಕೃಷ್ಣ ಗೆಲವಿಗೆ ಜೇಡ್ರಳ್ಳಿ ಕೃಷ್ಣಪ್ಪ ಸ್ಪರ್ಧೆ ಲಾಭವಾಗಿದೆ. ಚನ್ನಪಟ್ಟಣದಲ್ಲಿ ತನ್ನ ಭದ್ರಕೋಟೆಯಾಗಿದ್ದ ನಗರ ಪ್ರವೇಶದಲ್ಲಿ ಜೆಡಿಎಸ್ ಅನುಭವಿಸಿದ ಹಿನ್ನಡೆ ಯೋಗೇಶ್ವರಗೆ ಲಾಭವೆನ್ನಲಾಗುತ್ತಿದೆ.
ಹಳೆಯ ಮೈಸೂರು ಪ್ರಾಂತ್ಯದಲ್ಲಿ ರಾಜಕೀಯವಾಗಿ ಒಳೇಟಿನ ಸಂಗತಿ ಹೊಸದೇನಲ್ಲ. ಈ ಬಾರಿ ಚನ್ನಪಟ್ಟಣದಲ್ಲಿ ಯೋಗೇಶ್ವರ್ ವಿರುದ್ಧ ಮುನಿಸಿಕೊಂಡವರು ನೇರವಾಗಿ ಹೊರ ಹೋದರೆ, ಜೆಡಿಎಸ್ ಪಕ್ಷದಲ್ಲಿ ಅಸಮಾಧಾನಿತರು ಒಳೇಟು ನೀಡಿದರೆನ್ನುವ ಆರೋಪವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement