ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯದಿಂದ ಪುನರಾಯ್ಕೆ: ಕೃಷ್ಣಪ್ಪ
ಕ.ಪ್ರ.ವಾರ್ತೆ ಆನೇಕಲ್ಲ ಮೇ 9
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಸರ್ಕಾರ ಕೈಗೊಂಡ ನೂರಾರು ಕೋಟಿ ರು. ಅಭಿವೃದ್ಧಿ ಕಾಮಗಾರಿ ಹಾಗೂ ಗೃಹ ಸಚಿವ ಆರ್. ಅಶೋಕ್‌ರವರ ಸಹಕಾರ ಮತ್ತು ಕಾರ್ಯಕರ್ತರು, ಮುಖಂಡರ ಪ್ರಾಮಾಣಿಕ ಕರ್ತವ್ಯದಿಂದ ನಾನು ಮತ್ತೆ ಆಯ್ಕೆಯಾಗಿರುವೆ. ಇದಕ್ಕಾಗಿ ಎಲ್ಲ ಅಭಿಮಾನಿ ದೇವರುಗಳಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಬೆಂಗಳೂರು ದಕ್ಷಿಣ ಶಾಸಕ ಎಂ. ಕೃಷ್ಣಪ್ಪ ತಿಳಿಸಿದ್ದಾರೆ. ಅವರು ಚುನಾವಣಾಧಿಕಾರಿಗಳಿಂದ ಪ್ರಮಾಣ ಪತ್ರ ಪಡೆದ ನಂತರ ಪತ್ರಿಕೆಯೊಂದಿಗೆ ಮಾತನಾಡಿ, ಕಾವೇರಿ ಕುಡಿಯುವ ನೀರನ್ನು ಪಾಲಿಕೆ ವ್ಯಾಪ್ತಿಗೆ ನೀಡಿದ್ದು ಮುಂದಿನ ದಿನಗಳಲ್ಲಿ ಜಿಗಣಿ ಕೈಗಾರಿಕಾ ಪ್ರದೇಶ ಹಾಗೂ ಸುತ್ತ ಮುತ್ತಲ ಹಳ್ಳಿಗಳಿಗೆ ತಲುಪಿಸುವುದು ನನ್ನ ಆದ್ಯ ಕರ್ತವ್ಯವಾಗಿದೆ. ಕೈಗಾರಿಕಾ ಪ್ರದೇಶದಲ್ಲಿನ ಸಂಪರ್ಕ ರಸ್ತೆ, ಕೈಗಾರಿಕಾ ತ್ಯಾಜ್ಯಕ್ಕೆ ವಿಶೇಷ ಘಟಕ ಸೇರಿದಂತೆ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು. ಪಾಲಿಕೆ ಸದಸ್ಯರು, ಜಿಪಂ ಸದಸ್ಯರು ಹಾಗೂ ಮುಖಂಡರಿದ್ದರು.