ವಿವಿಧೆಡೆ ಕಾಂಗ್ರೆಸ್ ಸಂಭ್ರಮಾಚರಣೆ
ದೊಡ್ಡಬಳ್ಳಾಪುರ: ಕಾಂಗ್ರೆಸ್ ಅಭ್ಯರ್ಥಿ ಟಿ.ವೆಂಕಟರಮಣಯ್ಯ ಗೆಲವಿನ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ನಗರ ಮತ್ತು ತಾಲೂಕಿನ ವಿವಿಧೆಡೆ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ನಗರದ ಪ್ರಮುಖ ಬೀದಿಗಳು, ವೃತ್ತಗಳು ಮತ್ತು ಬಡಾವಣೆಗಳಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಅದೇ ರೀತಿ ದೊಡ್ಡಬೆಳವಂಗಲ, ಸಾಸಲು, ಮಧುರೆ, ಕಸಬಾ ಹೋಬಳಿಗಳ ಕೇಂದ್ರಗಳು, ಗ್ರಾಮಗಳಲ್ಲೂ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಫಲಿತಾಂಶ ಹೊರಬೀಳುತ್ತಿದ್ದಂತೆ ಬೀದಿಗಿಳಿದ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು. ಕಾಂಗ್ರೆಸ್ ಬಾವುಟಗಳನ್ನು ಹಿಡಿದು ಜೈಕಾರ ಕೂಗುವ ಮೂಲಕ ಸಂತಸಪಟ್ಟರು. ರಸ್ತೆಗಳಲ್ಲಿ ನಡೆದಾಡುವ ಜನರಿಗೆ, ಬಸ್‌ನಿಲ್ದಾಣದಲ್ಲಿ ಬರುವ ಜನರಿಗೆ ಸಿಹಿ ನೀಡಿ ಸಂಭ್ರಮಿಸಿದ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲುಮುಟ್ಟಿತ್ತು. 4 ವರ್ಷಗಳ ನಂತರ ಮತ್ತೆ ಕಾಂಗ್ರೆಸ್ ತೆಕ್ಕೆಗೆ ಬಂದಿರುವ ಕ್ಷೇತ್ರದಲ್ಲಿ ತನ್ನದೇ ಆದ ಕಾರ್ಯಕರ್ತರ ಪಡೆ ಹೊಂದಿರುವ ಕಾಂಗ್ರೆಸ್ ಬಹುತೇಕ ಎಲ್ಲ ಪಂಚಾಯಿತಿ, ಗ್ರಾಮಗಳಲ್ಲೂ ಸಂಭ್ರಮಾಚರಣೆ ನಡೆಸಿತು. ಬೆಂಗಳೂರಿನ ಆರ್‌ಸಿ ಕಾಲೇಜಿನಲ್ಲಿ ಮತ ಎಣಿಕೆ ನಡೆದಿದ್ದರಿಂದ ಕ್ಷೇತ್ರದಲ್ಲಿ ತಕ್ಷಣದ ಸಂಭ್ರಮಾಚರಣೆ ರಂಗೇರಿರಲಿಲ್ಲ. ಸಂಜೆ ಕ್ಷೇತ್ರಕ್ಕೆ ವಿಜಯೀ ಅಭ್ಯರ್ಥಿ ಬರುತ್ತಿದ್ದಂತೆ ಕಾರ್ಯಕರ್ತರು ಕಾಂಗ್ರೆಸ್ ಕಚೇರಿಯಲ್ಲಿ ಸಂತಸ ಹಂಚಿಕೊಂಡರು. ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
ಸೂಲಿಬೆಲೆ: 'ಕೈ' ವಿಜಯೋತ್ಸವ
ಸೂಲಿಬೆಲೆ: ಹೊಸಕೋಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂಟಿಬಿ ನಾಗರಾಜ್ ವಿಜಯಶಾಲಿಯಾಗಿರುವುದರಿಂದ ಸಂತಸಗೊಂಡ ಸೂಲಿಬೆಲೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಣೆ ಮಾಡಿದರು. ಸೂಲಿಬೆಲೆ ಮುಖ್ಯ ನಿಲ್ದಾಣ, ದೇವನಹಳ್ಳಿ ಕ್ರಾಸ್, ಜನತಾ ಕಾಲೋನಿ ಹಾಗೂ ಮಾರುತಿ ನಗರದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಹೊಸಕೋಟೆ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿಯನ್ನು ನೀಡಿ ವಿಜಯಶಾಲಿಯಾಗಿರುವ ಎಂಟಿಬಿ ನಾಗರಾಜ್ ಜನಪರವಾದ ಆಡಳಿತವನ್ನು ಕ್ಷೇತ್ರದಲ್ಲಿ ನೀಡಲಿದ್ದಾರೆ. ಸಜ್ಜನ ರಾಜಕಾರಣಿಯಾಗಿರುವ ಅವರನ್ನು ಮತದಾರ ಕೈ ಬಿಡದೇ ಗೆಲ್ಲಿಸಿರುವುದು ಇಡೀ ಕ್ಷೇತ್ರದ ಮತದಾರರಿಗೆ ಸಂದ ಜಯವಾಗಿದೆ ಎಂದು ಸೂಲಿಬೆಲೆ ಹೋಬಳಿ ಎಸ್ಟಿ ಘಟಕ ಅಧ್ಯಕ್ಷ ವೆಂಕಟೇಶ್ ಹೇಳಿದ್ದಾರೆ.
ಮರಿದೇವರು ಕೃತಜ್ಞತೆ
ರಾಮನಗರ: ವಿಧಾನಸಭೆ ಚುನಾವಣೆಯಲ್ಲಿ 58 ಸಾವಿರಕ್ಕೂ ಹೆಚ್ಚು ಮತಗಳನ್ನು ನೀಡಿರುವ ಕ್ಷೇತ್ರದ ಜನತೆಗೆ ಕಾಂಗ್ರೆಸ್ ಅಭ್ಯರ್ಥಿ ಮರಿದೇವರು ಕೃತಜ್ಞತೆ ಅರ್ಪಿಸಿದ್ದಾರೆ. ಸೋಲು-ಗೆಲವಿನ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಕ್ಷೇತ್ರದಾದ್ಯಂತ ಪ್ರವಾಸ ಕೈಗೊಂಡು, ಜನರ ಸಮಸ್ಯೆಗಳ ನಿವಾರಣೆಗೆ ಹಗಲಿರುಳೂ ದುಡಿಯುವುದಾಗಿ ಮರಿದೇವರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.