ಸೋಲನ್ನು ಕ್ರೀಡಾಸ್ಫೂರ್ತಿಯಿಂದ ಸ್ವೀಕರಿಸಿದ್ದೇನೆ: ಅನಿತಾ ಕುಮಾರಸ್ವಾಮಿ
ಕ.ಪ್ರ.ವಾರ್ತೆ ಚನ್ನಪಟ್ಟಣ ಮೇ 9-
ಈ ಕ್ಷೇತ್ರದ ಜನತೆ ನನ್ನನ್ನು ಮನೆಮಗಳೆಂದು ಒಪ್ಪಿ 73 ಸಾವಿರಕ್ಕೂ ಹೆಚ್ಚು ಮತಗಳನ್ನು ನೀಡಿ ಆಶೀರ್ವದಿಸಿದ್ದಾರೆ. ಈ ಜನರ ಋಣ ತೀರಿಸಲು ನಾನು ಈ ಕ್ಷೇತ್ರದಲ್ಲಿ ಸೇವೆ ಮುಂದುವರಿಸುತ್ತೇನೆ ಎಂದು ಪರಾಜಿತ ಜೆಡಿಎಸ್ ಅಭ್ಯರ್ಥಿ ಅನಿತಾಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪ್ರಸಕ್ತ ಚುನಾವಣೆಯಲ್ಲಿ ನಾನು ತಾಂತ್ರಿಕವಾಗಿ ಸೋಲೊಪ್ಪಿದ್ದು ಇದಕ್ಕೆ ಕಾರ್ಯಕರ್ತರು ದೃತಿಗೆಡಬೇಕಿಲ್ಲ. ನನ್ನ ಕೊನೆಯ ಉಸಿರಿರುವವರೆಗೂ ನಾನು ಈ ಜನರ ನೋವು ನಲಿವುಗಳಿಗೆ ಸ್ಪಂದಿಸುತ್ತೇನೆ ಎಂದು ತಿಳಿಸಿದ್ದಾರೆ.
ನಾನು ಸೋಲಿಗೆ ಕಾರಣವನ್ನು ಹುಡುಕುವುದಿಲ್ಲ, ಈ ಸೋಲನ್ನು ಕ್ರೀಡಾಸ್ಫೂರ್ತಿಯಿಂದ ಸ್ವೀಕರಿಸಿ ಇಲ್ಲೇ ಇದ್ದು ಕ್ಷೇತ್ರದ ಜನತೆಯ ಸುಖ ದುಃಖಗಳಿಗೆ ಸ್ಪಂದಿಸುವ ಮೂಲಕ ಪಕ್ಷವನ್ನು ತಳ ಮಟ್ಟದಿಂದ ಸಂಘಟಿಸುತ್ತೇನೆ. ಈ ಚುನಾವಣೆ ನನಗೊಂದು ಪಾಠವೆನಿಸಿದ್ದು, ನನ್ನ ಸ್ವಾಭಿಮಾನಿ ಕಾರ್ಯಕರ್ತರು ನನಗೆ ಶಕ್ತಿ, ಸ್ಫೂರ್ತಿ ಸ್ಥೈರ್ಯ ತುಂಬಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ನಾನು ಹಣಬಲ, ಜಾತಿ ಬಲ, ತೋಲ್ಬಲಗಳನ್ನು ಪ್ರದರ್ಶಿಸಿ ಮತಪಡೆದಿಲ್ಲ. ಈ ಕ್ಷೇತ್ರದ ಮತದಾರರು ನನ್ನನ್ನು ಅಕ್ಕರೆ ಅಭಿಮಾನದಿಂದ ಸತ್ಕರಿಸಿ 73 ಸಾವಿರಕ್ಕೂ ಹೆಚ್ಚು ಮತಗಳನ್ನ ನೀಡಿದ್ದು ಈ ಮತದಾರರಿಗೆ ವಿನಯಪೂರ್ವಕ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಬೆಂಬಲ: ಗ್ರಾಮೀಣ ಪ್ರದೇಶದ ಮತದಾರರು ಹೆಚ್ಚಿನ ರೀತಿಯಲ್ಲಿ ನನ್ನನ್ನ ಬೆಂಬಲಿಸಿದ್ದಾರೆ. ಜತೆಗೆ ಹಿಂದುಳಿದವರ್ಗ, ಅಲ್ಪಸಂಖ್ಯಾತ, ದಲಿತವರ್ಗ ಸೇರಿದಂತೆ ಎಲ್ಲಾ ಸಮುದಾಯದ ಮಂದಿ ನನಗೆ ನೀಡಿರುವ ಬೆಂಬಲಕ್ಕೆ ನಾನು ಚಿರಋಣಿ. ಪಕ್ಷಕ್ಕೆ ಪ್ರಾಮಾಣಿಕವಾಗಿ ಶ್ರಮಿಸಿದ ಕಾರ್ಯಕರ್ತರಿಗೆ ಸೋಲಿನಿಂದ ಸಹಜವಾಗಿ ನೋವಾಗಿದೆ. ಸೋಲೇ ಗೆಲವಿನ ಸೋಪಾನವೆಂದು ತಿಳಿದು ಪ್ರತಿ ಗ್ರಾಮಗಳಲ್ಲಿರುವ ಸ್ವಾಭಿಮಾನಿ ಕಾರ್ಯಕರ್ತರು ಎದೆಗುಂದದೆ ಮುನ್ನಡೆಯಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ. ಎಂದಿದ್ದಾರೆ. ರಾಮನಗರ ಚನ್ನಪಟ್ಟಣ ನಮ್ಮ ಕುಟುಂಬಕ್ಕೆ ಎರಡು ಕಣ್ಣುಗಳಿದ್ದಂತೆ. ಜತೆಗೆ ನಮ್ಮ ಕುಟುಂಬದ ಪುಣ್ಯಭೂಮಿಯಾಗಿದೆ. ಈ ಕ್ಷೇತ್ರದ ಪುಣ್ಯಾತ್ಮ ತಂದೆ ತಾಯಂದಿರೊಂದಿಗೆ ಒಡನಾಟ ನನ್ನ ಕೊನೆಯ ಉಸಿರು ಇರೋವರೆಗೂ ಇದ್ದೇ ಇರುತ್ತದೆ. ನಾನು ಕ್ಷೇತ್ರವನ್ನ ಬಿಟ್ಟು ಬೇರೆಡೆಗೆ ತೆರಳುವುದಿಲ್ಲ. ನಾನು ಪುಣ್ಯಭೂಮಿ ಚನ್ನಪಟ್ಟಣದಲ್ಲೇ ರಾಜಕಾರಣವನ್ನ ಮುಂದುವರೆಸುತ್ತೇನೆ ಎಂದಿದ್ದಾರೆ.