3995 ವಿದ್ಯಾರ್ಥಿಗಳು ತೇರ್ಗಡೆ
ಕ.ಪ್ರ. ವಾರ್ತೆ ಕಮಕಪುರ ಮೇ 10
2013ನೇ ಏಪ್ರಿಲ್ ಮಾಹೆಯಲ್ಲಿ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಗೆ ಕನಕಪುರ ತಾಲೂಕಿನ 73 ಸರ್ಕಾರಿ, ಖಾಸಗಿ, ಅನುದಾನಿತ ಶಾಲೆಗಳಿಂದ ಒಟ್ಟಾರೆ 4,434 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು ಇವರಲ್ಲಿ 2004 ಬಾಲಕರು ಹಾಗೂ 1951 ಬಾಲಕಿಯರು ಸೇರಿದಂತೆ ಒಟ್ಟಾರೆ 3995 ವಿದ್ಯಾರ್ಥಿಗಳು ತೇರ್ಗಡೆಹೊಂದಿದ್ದಾರೆ.
ತಾಲೂಕಿನ ಒಟ್ಟಾರೆ ಫಲಿತಾಂಶ 89.2 ಆಗಿದ್ದು ಕಳೆದ ಸಾಲಿಗಿಂತಲೂ ಉತ್ತಮ ಸಾಧನೆಯನ್ನು ವಿದ್ಯಾರ್ಥಿಗಳು ಮೆರೆದಿದ್ದಾರೆ. ಕನಕಪುರ ಸೇಂಟ್ ಥಾಮಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ರೋಹಿಣಿ. ಆರ್. 620 ಅಂಕಗಳನ್ನು ಗಳಿಸಿ ಶೇ.99.20 ಫಲಿತಾಂಶದೊಂದಿಗೆ ರಾಜ್ಯದಲ್ಲಿಯೇ ತೃತೀಯ ರ್ಯಾಂಕ್ ಪಡೆದು ತಾಲೂಕಿನ ಕೀರ್ತಿ ಬೆಳಗಿದ್ದಾಳೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ.
ತಾಲೂಕಿನ ಸರ್ಕಾರಿ ಪ್ರೌಢಶಾಲೆಗಳು ಸರಾಸರಿ 87.69 ಫಲಿತಾಂಶದ ಸಾಧನೆ ಮೆರೆದಿವೆ. ಅನುದಾನಿತ ಶಾಲೆಗಳು ಶೇಕಡಾ 88.27 ಹಾಗೂ ಅನುದಾನರಹಿತ ಶಾಲೆಗಳು ಶೇ.95.45 ಫಲಿತಾಂಶ ದಾಖಲಿಸಿವೆ. ಕನಕಪುರ ತಾಲೂಕಿನಲ್ಲಿ ಒಟ್ಟಾರೆ 84 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. 1,382 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಶಿವಕುಮಾರ್ ವಿವರಗಳನ್ನು ನೀಡಿದ್ದಾರೆ.