ಅಕ್ಷರಸ್ಥರಿಂದ ಸಮಾಜದ ಅಶಾಂತಿ ವಾತಾವರಣ ನಿರ್ಮಾಣ: ವಿಷಾದ
ರಾಮನಗರ: ಅಕ್ಷರಸ್ಥರು ಸಮಾಜದ ಸಮತೋಲನವನ್ನು ಹಾಳುಗೆಡವುದರ ಜತೆಗೆ ಅಶಾಂತಿ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ ಎಂದು ಡಿವೈಎಸ್‌ಪಿ ರಾಮಲಿಂಗಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಸರ್ಕಾರಿ ಕಾನೂನು ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು,
ಅಕ್ಷರಸ್ಥರು ತಮ್ಮ ಜವಾಬ್ದಾರಿಯನ್ನು ಅರಿತು ಸಮಾಜವನ್ನು ಸರಿದಾರಿಗೆ ತರುವ ಕೆಲಸಕ್ಕೆ ಮುಂದಾಗಬೇಕು. ಆ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಕರೆ ನೀಡಿದರು. ಸ್ವಾರ್ಥ ಸಾಧನೆಗಾಗಿ ಜಾತಿ ಜಾತಿಗಳ ನಡುವೆ ವೈಮನಸ್ಯ ಉಂಟು ಮಾಡಿ, ಸಮಾಜದ ದಿಕ್ಕು ತಪ್ಪಿಸುವ ಕೆಲಸ ಅಕ್ಷರಸ್ಥರಿಂದಲೇ ನಡೆಯುತ್ತಿದೆ. ಅದನ್ನು ಬಿಟ್ಟು ಭಾರತೀಯರಾದ ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ಎಂಬ ಭಾವನೆಯನ್ನು ಮೂಡಿಸಿದಾಗ ಸಮಾಜದಲ್ಲಿ ಶಾಂತಿ ನೆಲೆಯೂರಲು ಸಾಧ್ಯ ಎಂದು ರಾಮಲಿಂಗಪ್ಪ ಹೇಳಿದರು.
ಆಳುವ ಸರ್ಕಾರಗಳ ನೀತಿ ನಿರೂಪಣೆಗಳನ್ನು, ಕಾಯಿದೆ ಕಾನೂನುಗಳನ್ನು ಸತ್ಯದ ಓರೆಗಲ್ಲಿಗೆ ಹಚ್ಚಿ ಉತ್ತಮವಾದ ಮತ್ತು ಜನಪರವಾದ ಅಂಶಗಳನ್ನು ಜಾರಿಗೆ ತರಲು ಪ್ರಜ್ಞಾವಂತ ವಕೀಲ ಸಮುದಾಯ ಶ್ರಮಿಸಬೇಕು ಎಂದು ವಕೀಲ ಕೆ.ಎಸ್.ರಾಮಗೋಪಾಲ್ ತಿಳಿಸಿದರು. ಪ್ರಾಂಶುಪಾಲ ಎ.ಗೋಪಾಲ, ಜಾನಪದ ಲೋಕದ ಕ್ಯೂರೇಟರ್ ಡಾ.ಕುರುವಬಸವರಾಜ್, ವಕೀಲ ಅಂಬರೀಷ್ ಮಾತನಾಡಿದರು. ವಿದ್ಯಾರ್ಥಿನಿ ಬಿ.ಆರ್. ಶಾಲಿನಿ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕ ಪ್ರೊ.ಎಚ್.ಜಯಣ್ಣ ನಿರೂಪಿಸಿದರು. ಸಿ.ಬಿ.ರಂಗನಾಥಯ್ಯ ಸ್ವಾಗತಿಸಿದರು. ಡಿ.ರಂಗಸ್ವಾಮಿ ವಾರ್ಷಿಕ ವರದಿ ಮಂಡಿಸಿದರು. ಕೆ.ಜಿ.ನಂದೀಶ್ ವಂದಿಸಿದರು. ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.