ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅನಿತಾ ಕುಮಾರಸ್ವಾಮಿ ಹರಕೆ ಕುರಿ?

Rashmi Kasaragodu
Updated On : 11 May 2013, 12:59 pm

ಮತ್ತೀಕೆರೆ ಜಯರಾಮ್
ಕ.ಪ್ರ. ವಾರ್ತೆ  ರಾಮನಗರ  ಮೇ 10
ಒತ್ತಡಕ್ಕೆ ಮಣಿದು ಚನ್ನಪಟ್ಟಣದಿಂದ ಕಣಕ್ಕೆ ಇಳಿಸಲ್ಪಟ್ಟ ಅನಿತಾ ಕುಮಾರಸ್ವಾಮಿ ಹರಕೆಯ ಕುರಿಯಾದರೇ...
ಹೀಗೊಂದು ಪ್ರಶ್ನೆ ಕ್ಷೇತ್ರದ ಜೆಡಿಎಸ್ ಪಾಳಯದಲ್ಲೇ ಎದುರಾಗಿದೆ.
ಈ ಬಾರಿ ಗೆದ್ದೇ ತೀರುವುದಾಗಿ ಬೀಗುತ್ತಿದ್ದ ಜೆಡಿಎಸ್ ಪಾಳಯವು ಫಲಿತಾಂಶದಿಂದ ಆಘಾತಕ್ಕೆ ಒಳಗಾಗಿದೆ. ನಿಷ್ಠರು ಮತ್ತೆ ಕಂಗೆಟ್ಟರೆ, ಸೋಲಿನಲ್ಲಿ ಪಾತ್ರ ವಹಿಸಿದ ಪಕ್ಷದ್ರೋಹಿಗಳು ವರಿಷ್ಠರ, ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಅನಿತಾ ಅವರನ್ನು ಕಣಕ್ಕೆ ಇಳಿಸುವಂತೆ ಜೆಡಿಎಸ್ ಪ್ರಾಬಲ್ಯದ ವಿವಿಧ ಕ್ಷೇತ್ರಗಳಿಂದ ಆಹ್ವಾನ ಬಂದಿತ್ತು. ಆದರೆ, ಚನ್ನಪಟ್ಟಣದಲ್ಲಿ ಪಕ್ಷ ಮತ್ತು ಕಾರ್ಯಕರ್ತರ ಉಳಿವಿಗಾಗಿ ಸ್ಪರ್ಧೆಗೆ ಇಳಿಸಲೇಬೇಕೆಂದು ಒತ್ತಡ ಹೆಚ್ಚಿದ್ದಕ್ಕೆ ಕುಮಾರಸ್ವಾಮಿ ಇಲ್ಲಿ ಪತ್ನಿಯನ್ನು ಕಣಕ್ಕೆ ಇಳಿಸಿ, ಪ್ರತಿಷ್ಠೆ ಪಣಕ್ಕಿಟ್ಟಿದ್ದರು.
ಜೆಡಿಎಸ್ ಪಡೆ ವೈಫಲ್ಯ: ಚುನಾವಣೆಯಲ್ಲಿ ಅನಿತಾ ಪರ ಅಲೆ ಎದ್ದಿತ್ತಾದರೂ ಅದನ್ನು ಮತಗಳನ್ನಾಗಿ ಪರಿವರ್ತಿಸುವಲ್ಲಿ ಜೆಡಿಎಸ್ ಪಡೆ ವಿಫಲವಾಗಿದೆ. ಅತಿಯಾದ ಆತ್ಮ ವಿಶ್ವಾಸ, ಮುಖಂಡರಲ್ಲಿ ಮನಸ್ತಾಪ, ಕೆಲ ಮುಖಂಡರ ಒಳೇಟಿನ ಹಾವಳಿ, ನಗರ ಪ್ರದೇಶಕ್ಕೆ ಸಂಪನ್ಮೂಲ ಒದಗಿಸುವಲ್ಲಿ ಆದ ತೀರಾ ವಿಳಂಬ ಅನಿತಾ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಚಿಕ್ಕಬಳ್ಳಾಪುರ ಅಥವಾ ಕೋಲಾರ ಜಿಲ್ಲೆಯಿಂದ ಸ್ಪರ್ಧೆಗೆ ಇಳಿಯುವಂತೆ ಅನಿತಾಗೆ ಆಹ್ವಾನವಿತ್ತು. ಆದರೆ, ಕುಮಾರಸ್ವಾಮಿ ಮತ್ತು ದೇವೇಗೌಡ ಸೂಚನೆಯಂತೆ ಚನ್ನಪಟ್ಟಣವನ್ನು ಆಯ್ಕೆ ಮಾಡಿಕೊಂಡು, ಇಲ್ಲಿಂದಲೇ ಸ್ಪರ್ಧೆಗೆ ಇಳಿದಿದ್ದರು. ಕ್ಷೇತ್ರಾದ್ಯಂತ ವ್ಯಕ್ತವಾದ ಬೆಂಬಲದಿಂದ ಅವರಿಗೂ ಅತಿಯಾದ ಆತ್ಮವಿಶ್ವಾಸ ಮೂಡಿತ್ತು.
ಯೋಗಿ ಒಂದಿಲ್ಲೊಂದು ತಂತ್ರ: ಪ್ರತಿ ಬಾರಿ ಯೋಗೇಶ್ವರ್ ಒಂದಿಲ್ಲೊಂದು ತಂತ್ರ ಬಳಸಿಕೊಂಡೇ ಬಂದಿದ್ದರು. ಅವರಿಗೆ ಈ ಬಾರಿ ನೀರಾವರಿ ಮತ್ತು ಕಾಂಕ್ರಿಟ್ ರಸ್ತೆಗಳ ಯೋಜನೆ ಬೆನ್ನಿಗಿತ್ತು. ಅದನ್ನೆಲ್ಲ ಮೆಟ್ಟಿ ನಿಂತು, ಪಕ್ಷಕ್ಕೆ ಗೆಲವು ತಂದುಕೊಡಲು ಸೂಕ್ತ ಯೋಜನೆ ರೂಪಿಸುವಲ್ಲಿ ಜೆಡಿಎಸ್ ಮುಖಂಡರು ವಿಫಲರಾಗಿರುವುದು ಸ್ಪಷ್ಟ.
ಗ್ರಾಮೀಣ ಭಾಗದಲ್ಲಿ ಜೆಡಿಎಸ್ ಮತ್ತು ಯೋಗೇಶ್ವರ್ ಕಡೆಯಿಂದ ಸಮನಾಗಿಯೇ ಹಣದ ಹೊಳೆ ಹರಿದಿದೆ. ನಗರ ಪ್ರದೇಶದಲ್ಲಿ ಒಳೇಟಿನ ಜತೆಗೆ ಮತದಾನದ ದಿನ ಸೂರ್ಯ ನೆತ್ತಿಗೇರುವಾಗಷ್ಟೇ ಜೆಡಿಎಸ್ ಪರ ಹಣ ತಲುಪಿದ್ದರ ಪರಿಣಾಮ ಹಿಂದೆ ಜೆಡಿಎಸ್ ಪಕ್ಷಕ್ಕೆ ಜೈ ಎಂದಿದ್ದ ಒಂದು ವರ್ಗವು ಈ ಬಾರಿ ಸೈಕಲ್ ಏರಿದೆ.
ಕುಮಾರಸ್ವಾಮಿಗೆ ಒತ್ತಡ: ಯೋಗೇಶ್ವರ್ ಆಪರೇಷನ್ ಕಮಲಕ್ಕೆ ಒಳಗಾದ ಪರಿಣಾಮ ನಡೆದ ಮರು ಚುನಾವಣೆಯಲ್ಲಿ ಗೆದ್ದಿದ್ದ ಎಂ.ಸಿ.ಅಶ್ವತ್ಥ್ ಕೂಡ ಬಿಜೆಪಿ ಖೆಡ್ಡಕ್ಕೆ ಬಿದ್ದರು. ಆಗ ನಡೆದ ಮರು ಚುನಾವಣೆಯಲ್ಲೇ ಚನ್ನಪಟ್ಟಣದಿಂದ ಕಣಕ್ಕೆ ಇಳಿಯುವಂತೆ ಕುಮಾರಸ್ವಾಮಿ ಮೇಲೆ ತೀವ್ರ ಒತ್ತಡವಿತ್ತು.
ಅಷ್ಟರಲ್ಲಾಗಲೇ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರ ವ್ಯಾಪ್ತಿ ಮತದಾರರು ಯೋಗೇಶ್ವರಗಿಂತ ಕುಮಾರಸ್ವಾಮಿಗೆ 20 ಸಾವಿರಕ್ಕೂ ಹೆಚ್ಚು ಮತಗಳನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಸ್ಪರ್ಧೆಗೆ ಒಲವು ತೋರಿದ್ದರಾದರೂ ದೇವೇಗೌಡ ಆಸ್ಪದ ನೀಡಲಿಲ್ಲ. ಸಿಂ.ಲಿಂ. ನಾಗರಾಜು ಹೆಗಲಿಗೆ ಪಕ್ಷದ ನೊಗ ಹೊರಿಸಲಾಗಿತ್ತು. ನಾಗರಾಜು ಪರ ಅನುಕಂಪದ ಅಲೆ ಎದ್ದಿತ್ತು. ಆದರೆ, ಸ್ವಪಕ್ಷೀಯರ ಒಳೇಟಿನಿಂದ ಅವರು ತೀವ್ರ ಹಿನ್ನಡೆಯೊಂದಿಗೆ ಸೋಲನುಭವಿಸಿದ್ದರು. ಅದಾದ ಬಳಿಕ ಒಡೆದ ಮನೆಯಾದ ಪಕ್ಷವನ್ನು ಉಳಿಸಲು ಕಾರ್ಯಕರ್ತರು ಮತ್ತೆ ಕುಮಾರಸ್ವಾಮಿ ಮೊರೆ ಹೊಕ್ಕಿದ್ದರು.
ಕಾರ್ಯಕರ್ತರು, ಮುಖಂಡರಲ್ಲಿದ್ದ ಹುಮ್ಮಸ್ಸು ಮತ್ತು ತಮಗೆ ಮೂಡಿದ್ದ ಅತಿಯಾದ ಆತ್ಮ ವಿಶ್ವಾಸದ ಹಿನ್ನೆಲೆಯಲ್ಲಿ ಚನ್ನಪಟ್ಟಣದಿಂದ ತಮ್ಮ ಪತ್ನಿ ಅನಿತಾ ಅವರನ್ನು ಕಣಕ್ಕೆ ಇಳಿಸುವುದಾಗಿ ಕುಮಾರಸ್ವಾಮಿ ಘೋಷಿಸಿದ್ದರು. ಸಂಕ್ರಾಂತಿ ಬಳಿಕ ದಂಪತಿ ಪ್ರವಾಸಕ್ಕೆ ಪೂರಕ ವಾತಾವರಣ ಕಂಡು ಬಂದಿತ್ತು. ಈಗಿನ ಫಲಿತಾಂಶ ತೀವ್ರ ಅವರಿಗೆ ನಿರಾಸೆ ಮೂಡಿಸಿದೆ.



ಕಾರ್ಯಕರ್ತರ ಕಾರ್ಯತಂತ್ರ
ಅನಿತಾ ಕುಮಾರಸ್ವಾಮಿ ಅವರನ್ನು ಮೇಲ್ಮನೆ ಸದಸ್ಯರನ್ನಾಗಿ ಆರಿಸುವ ಮೂಲಕ ಚನ್ನಪಟ್ಟಣ ಕ್ಷೇತ್ರ ರಾಜಕಾರಣದಲ್ಲಿ ಜೆಡಿಎಸ್ ಉಳಿವಿಗೆ ಒತ್ತು ನೀಡುವಂತೆ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ದೇವೇಗೌಡರ ಮೇಲೆ ಒತ್ತಡ ಹೇರುವುದಕ್ಕಾಗಿ ನಿಯೋಗ ತೆರಳಲು ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಪಡೆ ಕಾರ್ಯತಂತ್ರ ರೂಪಿಸುತ್ತಿದೆ. ಚನ್ನಪಟ್ಟಣ ಕ್ಷೇತ್ರದ ಮೊದಲ ಮತ್ತು ಎರಡನೇ ಸಾಲಿನ ಎಲ್ಲ ನಾಯಕರನ್ನು ಹೊರಗಿಟ್ಟು, ಕಾರ್ಯಕರ್ತರ ಪಡೆ ಮಾತ್ರವೇ ನಿಯೋಗದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದೆ. ಸರ್ಕಾರ ರಚನೆ, ವಿಧಾನಸಭೆ ಪ್ರತಿಪಕ್ಷ ನಾಯಕರ ಪ್ರಕ್ರಿಯೆ ಮುಗಿದ ಬೆನ್ನಲ್ಲೇ ಚನ್ನಪಟ್ಟಣದ ನಿಯೋಗ ಬೆಂಗಳೂರಿಗೆ ಪಯಣ ಬೆಳೆಸಲಿದೆ. ಇದೇ ವೇಳೆ ಜೆಡಿಎಸ್ ಬೆನ್ನಿಗೆ ಚೂರಿ ಇರಿದ ಮುಖಂಡರನ್ನು ಪಕ್ಷದಿಂದ ಹೊರ ಹಾಕಬೇಕು. ಮುಖಂಡರನ್ನು ಬದಿಗಿಟ್ಟು, ಕಾರ್ಯಕರ್ತರಿಗೆ ಸಂಘಟನೆ ಜವಬ್ದಾರಿ ನೀಡಬೇಕು ಎನ್ನುವ ಬೇಡಿಕೆಯನ್ನೂ ಕಾರ್ಯಕರ್ತರ ನಿಯೋಗ ವರಿಷ್ಠರ ಮುಂದಿಡಲು ನಿರ್ಧರಿಸಿದೆ. ನಿಯೋಗ ಕರೆದೊಯ್ಯುವ ನಿಟ್ಟಿನಲ್ಲಿ ಪ್ರಮುಖ ಕಾರ್ಯಕರ್ತರ ಪಡೆ ಈಗಾಗಲೇ ಸಿದ್ಧತೆಯಲ್ಲಿ ತೊಡಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement