ನನ್ನ ಸೋಲಿಗೆ ನಾನೇ ಹೊಣೆ: ಎ. ಮಂಜು
ಕ.ಪ್ರ. ವಾರ್ತೆ ಮಾಗಡಿ ಮೇ 10
ಮಾಗಡಿ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಾದ ಸೋಲಿಗೆ ನಾನೇ ಹೊಣೆಯನ್ನು ಹೊರುವುದಾಗಿ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಎ.ಮಂಜು ಹೇಳಿದರು.
ಅವರು ಮಾಗಡಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ರಾಜಕಾರಣದಲ್ಲಿ ಸೋಲು, ಗೆಲವು ಸಹಜ, ಸೋಲನ್ನು ಗೆಲವಾಗಿ ಸ್ವೀಕರಿಸುತ್ತೇನೆ. ಈ ಚುನಾವಣೆ ನನಗೆ ಅನುಭವದ ಪಾಠ ಕಲಿಸಿದೆ. ಇದಕ್ಕೆ ಕಾರಣ ಹುಡುಕಿಕೊಂಡು ಕೂರುವುದಿಲ್ಲ, ಯಾರನ್ನು ದೂಷಿಸುವುದು ಇಲ್ಲ, ಸೋಲಿಗೆ ನಾನೇ ಹೊಣೆಗಾರನಾಗುತ್ತೇನೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿ ಮತ್ತು ಕಾರ್ಯಕರ್ತರ ರಕ್ಷಣೆ ಮತದಾರರ ಕಷ್ಟ ಸುಖಗಳಿಗೆ ಸ್ಪಂದಿಸುತ್ತೇನೆ. ಈ ನಿಟ್ಟಿನಲ್ಲಿ ಪಕ್ಷವನ್ನು ಸದೃಢಗೊಳಿಸಲು ಬೂತ್ ಮಟ್ಟದಲ್ಲಿ ಸಂಘಟನೆಗೆ ಶಕ್ತಿ ಮೀರಿ ಶ್ರಮಿಸುತ್ತೇನೆ ಎಂದರು. ನನ್ನನ್ನು ಮನೆಯ ಮಗನೆಂದು ಕ್ಷೇತ್ರದ ಮತದಾರರು 60,462 ಮತಗಳನ್ನು ನೀಡುವ ಮೂಲಕ ಆಶೀರ್ವದಿಸಿದ್ದಾರೆ. ಕ್ಷೇತ್ರದ ಮತದಾರರಿಗೆ ಕೃತಜ್ಞತರಾಗಿರುವುದಾಗಿ ತಿಳಿಸಿದರು. ನನ್ನ ಸೋಲಿನಿಂದಾಗಿ ಕಾರ್ಯಕರ್ತರು ದೃತಿಗೆಡಬಾರದು, ಪಕ್ಷವನ್ನು ಮುನ್ನಡೆಸಬೇಕೆಂದು ಮನವಿ ಮಾಡಿದರು.