ಬಿರುಗಾಳಿ ಸಹಿತ ಆಲಿಕಲ್ಲು ಮಳೆ
ಕ.ಪ್ರ. ವಾರ್ತ್ಣೆ ಆನೇಕಲ್ಣ್ ಮೇ 10
ತಾಲೂಕಿನ ದೊಡ್ಡಾಗಡೆ, ಸೊಪ್ಪಳ್ಳಿ, ಯಲ್ಲಮ್ಮನಪಾಳ್ಯ, ವಾಬಸಂದ್ರ, ಇಂಡ್ಲವಾಡಿ ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ ಬಿರುಗಾಳಿ ಸಹಿತ ಬಿದ್ದ ಆಲಿಕಲ್ಲು ಮಳೆಗೆ ಅನೇಕ ಮನೆಗಳು ಹಾಳಾಗಿ ಬಡ ರೈತರು ಬೀದಿಗೆ ಬಿದ್ದಂತಾಗಿದೆ.
ವಾಬಸಂದ್ರದ ರೈತ ಬಡಕಪ್ಪ ಕಳೆದ 50 ವರ್ಷಗಳಲ್ಲಿ ಈ ರೀತಿಯ ಗಾಳಿಯ ರುದ್ರ ನರ್ತನ ಕಂಡಿರಲಿಲ್ಲವೆಂದು ಹೇಳಿ ಪ್ರಕೃತಿ ವಿಕೋಪಕ್ಕೆ ಬೆಚ್ಚಿ ಬಿದ್ದಿದ್ದಾರೆ.
ಆಧುನಿಕ ಕೃಷಿಯನ್ನು ನೆಚ್ಚಿಕೊಂಡು ಬ್ಯಾಂಕಿನಲ್ಲಿ ಸಾಲ ಮಾಡಿ ಬೆಳೆದ ಜತ್ರೋಪ ಹೂ (ಗ್ರೀನ್ಹೌಸ್ ಬೆಳೆ), ಬಾಳೆ ಬೆಳೆ, ಚಂಡು ಹೂ, ಟೊಮೊಟೋ, ಹೀರೇ ಕಾಯಿ, ಕ್ಯಾಪ್ಸಿಕಂ, ಹುರಳಿಕಾಯಿ ಸೇರಿದಂತೆ ಅನೇಕ ಬೆಳೆಗಳು ನೆಲ ಕಚ್ಚಿದೆ.
ಗಾಳಿಯ ಆರ್ಭಟಕ್ಕೆ ದಾರಿ ಬದಿಯ ಮರಗಳು, ತೆಂಗಿನ ಮರಗಳು ಮುರಿದು ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಮರದ ಕೊಂಬೆಗಳು ಲೈಟ್ ಕಂಬಗಳ ಮೇಲೆ ಬಿದ್ದ ಪರಿಣಾಮ ಹಳ್ಳಿಗಳಲ್ಲಿ ವಿದ್ಯುತ್ ಇಲ್ಲದೇ ರೈತರು ಹಾಗೂ ರಾಸುಗಳಿಗೆ ನೀರಿಲ್ಲದಂತಾಗಿದೆ. ದೊಡ್ಡಾಗಡೆಯ ರೈತ ಸುಬ್ಬಣ್ಣನವರ 10 ಎಕರೆ ತೋಟದಲ್ಲಿನ ಫಾರಂ ಹೌಸ ಛಾವಣಿ ಎಗರಿ ಹೋಗಿದ್ದು ಕೈಗೆ ಬಂದ ಹೂ ಹಾಳಾಗಿದೆ. ಎಕರೆಗೆ ಕನಿಷ್ಠ 40 ಲಕ್ಷದಂತೆ ನಷ್ಟವಾಗಿದೆ ಎಂದಿದ್ದಾರೆ. ಇದೇ ವ್ಯಾಪ್ತಿಯ ಆನೇಕ ರೈತರ ಬೆಳೆಗಳೂ ಹಾಳಾಗಿವೆ.
ಬೆಚ್ಚಿ ಬಿದ್ದ ಬಜ್ಜಪ್ಪ: ಸೊಪ್ಪಳ್ಳಿಯ ಕೃಷಿಕ ಬಜ್ಜಪ್ಪ ತಾಲೂಕು ರೈತ ಸಂಘದ ಪದಾಧಿಕಾರಿ. ರಾತ್ರಿ 8 ಗಂಟೆ ಸುಮಾರಿಗೆ ಊಟ ಮಾಡುತ್ತಿದ್ದಾಗ ಕರಂಟಿ ಹೋಯಿತು. ಇದ್ದಕ್ಕಿದ್ದಂತೆ ಗುಡುಗು ಮಿಂಚು ಸುಳಿಯಿತು. ಕ್ಷಣ ಮಾತ್ರದಲ್ಲಿ ಮನೆ ಮೇಲಿನ ಸೂರು ಹಾರಿ ಹೋಯಿತು. ತಟ್ಟೆಯಲ್ಲಿದ್ದ ಊಟ ಬಿಟ್ಟು ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಬಾಚಿಕೊಂಡು ಹೊರಗೆ ಬಂದೆ. ಆಲಿಕಲ್ಲು ಮಳೆ ಧಾರಾಕಾರವಾಗಿ ಸುರಿಯುತ್ತಿತ್ತು. ಮನೆಯಲ್ಲಿದ್ದ ದವಸ ಧಾನ್ಯ ಬಟ್ಟೆ ಜೊತೆಗೆ ಬದುಕೇ ಹಾರಿ ಹೋಯಿತು. ದನಗಳು, ಕುರಿಗಳು ಹಾಗೂ ಕೋಳಿಗಳ ಆರ್ತನಾದ ಕರುಳು ಹಿಂಡಿತು ಎಂದರು.
ಬೆಳಗ್ಗೆ ನೂತನ ವಿಧಾನ ಸಭಾ ಚುನಾಯಿತ ಅಭ್ಯರ್ಥಿ ಬಿ. ಶಿವಣ್ಣ ಹಾಗೂ ತಾಲೂಕು ದಂಡಾಧಿಕಾರಿ ಎಚ್.ಎನ್. ಶಿವೇಗೌಡ ಸ್ಥಳಕ್ಕೆ ಧಾವಿಸಿ ಬಂದು ರೈತರು ಹಾಗೂ ಮನೆ ಕಳೆದುಕೊಂಡ ಕೂಲಿ ಕಾರ್ಮಿಕರಿಗೆ ಸಾಂತ್ವನ ತಿಳಿಸಿದರು. ವಿಮಾ ಕಂಪನಿ, ಸರ್ಕಾರ ಹಾಗೂ ದಾನಿಗಳ ನೆರವಿನಿಂದ ಸಹಾಯ ಹಸ್ತ ನೀಡುವುದಾಗಿ ಭರವಸೆ ನೀಡಿದರು. ನಷ್ಟದ ಅಂದಾಜು ಪಟ್ಟಿ ಮಾಡಿ ರೈತರಿಗೆ ನ್ಯಾಯ ದೊರಕಿಸಬೇಕೆಂದು ತಹಸೀಲ್ದಾದರರಿಗೆ ಸೂಚಿಸಿದರು.