ಭೂಚೇತನ ನೂತನ ಯೋಜನೆ ಜಾರಿ
ಕ.ಪ್ರ. ವಾರ್ತೆ ರಾಮನಗರ ಮೇ 10
ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ ಬೆಳೆಯ ಇಳುವರಿ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಕೃಷಿ ಇಲಾಖೆಯು ಭೂಚೇತನ ಎಂಬ ನೂತನ ಯೋಜನೆಯನ್ನು ಜಿಲ್ಲೆಯಲ್ಲಿ 2011-12ನೇ ಸಾಲಿನಿಂದ ಪ್ರಾರಂಭಿಸಿದೆ.
2012-13ನೇ ಸಾಲಿನಲ್ಲಿ 84 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅನುಷ್ಠಾನಗೊಳಿಸಲಾಗಿದೆ. ಮಣ್ಣಿನಲ್ಲಿ ಕೊರತೆಯಿರುವ ಸತು, ಕ್ಯಾಲ್ಷಿಯಂ, ಗಂಧಕ, ಬೋಕ್ ಪೋಷಕಾಂಶ ಹಾಗೂ ಜೈವಿಕ ಗೊಬ್ಬರವನ್ನು ರಿಯಾಯಿತಿ ದರದಲ್ಲಿ ರೈತರಿಗೆ ಒದಗಿಸಲಾಗುತ್ತಿದೆ. ಮಳೆಯ ಕೊರತೆಯ ನಡುವೆಯೂ ಶೇ. 20ರಷ್ಟು ಅಧಿಕ ಇಳುವರಿಯನ್ನು ರೈತರು ಪಡೆದಿದ್ದಾರೆ. 2013-14ನೇ ಸಾಲಿನಲ್ಲಿಯೂ ಸಹ ಭೂಚೇತನ ಯೋಜನೆಯನ್ನು ಮುಂದುವರಿಸಲಾಗಿದೆ. ರೈತರಿಗೆ ಸಹಾಯಧನ ರೂಪದಲ್ಲಿ ಸತುವಿನ ಸಲ್ಫೇಟ್, ಜಿಪ್ಸಂ, ಬೋರಾಕ್ಸ್, ಜೈವಿಕಗೊಬ್ಬರ, ಜೈವಿಕ ಪೀಡೆ ನಾಶಕಗಳನ್ನು ಒದಗಿಸಿ, ಹಾಲಿ ಪಡೆಯುತ್ತಿರುವ ಇಳುವರಿಗಿಂತ ಶೇ.20ರಷ್ಟು ಇಳುವರಿ ಹೆಚ್ಚಿಸಲು ಎಲ್ಲಾ ರೀತಿಯ ತಾಂತ್ರಿಕ ಮಾಹಿತಿಯನ್ನು ಸಕಾಲದಲ್ಲಿ ರೈತರಿಗೆ ನೀಡಲು ಪ್ರತಿ 500 ಹೆಕ್ಟೇರ್ ಖುಷ್ಕಿ ಪ್ರದೇಶದಕ್ಕೆ ಒಬ್ಬರಂತೆ ರೈತ ಅನುವುಗಾರರ ಸಹಕಾರವನ್ನು ಪಡೆಯಲಾಗುವುದು ಎಂದು ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.