ಕೊಲೆಯಾದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ: ಕೊಲೆ ಶಂಕೆ
ಸೂಲಿಬೆಲೆ: ಸಮೀಪದ ನಂದಗುಡಿ ಪೊಲೀಸ್ ಠಾಣಿ ವ್ಯಾಪ್ತಿಯಲ್ಲಿನ ಪೂಜೇರಾಮನಹಳ್ಳಿ ಗ್ರಾಮದ ರಸ್ತೆ ಬದಿಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ಕೊಲೆಯಾಗಿರುವ ಯುವಕ ಕೋಲಾರ ಇಮ್ರಾನ್ (22) ಎಂದು ಪೊಲೀಸರು ತಿಳಿಸಿದ್ದಾರೆ. ಕೋಲಾರ ಗಡಿ ಭಾಗಕ್ಕೆ ಹೊಂದಿಕೊಂಡಿರುವ ತಾವರೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪೂಜೇರಾಮನಹಳ್ಳಿ ಗ್ರಾಮದ ರಸ್ತೆ ಬದಿಯಲ್ಲಿ ಶನಿವಾರ ಬೆಳಗ್ಗೆ ಯುವಕನೊಬ್ಬ ಕೊಲೆಯಾಗಿ ಬಿದ್ದಿರುವ ಸ್ಥಿತಿಯಲ್ಲಿ ಕಂಡು ಗ್ರಾಮಸ್ಥರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಪಿಎಸ್ಐ ಪ್ರಕಾಶ ಸಿಬ್ಬಂದಿಯೊಂದಿಗೆ ಸ್ಥಳ ಪರಿಶೀಲನೆ ಮಾಡಿದ್ದು, ಇಮ್ರಾನ್ ಕತ್ತು ಹಿಸುಕಿ ಕೊಂದಿರುವ ದುಷ್ಕರ್ಮಿಗಳು ಬೇರೆಡೆ ಕೊಲೆ ಮಾಡಿ ಶುಕ್ರವಾರ ರಾತ್ರಿ ಇಲ್ಲಿ ತಂದು ಬಿಸಾಡಿ ಹೋಗಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇವರ ತಂದೆ ರಫಿಕ್ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಸ್ಥಳಕ್ಕೆ ಡಿವೈಎಸ್ಪಿ ಜಿನೇಂದ್ರ, ಸಿಪಿಐ ಸಂಪತ್, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.