ಬೇಸಿಗೆ ಶಿಬಿರ ಮುಕ್ತಾಯ
ಕ.ಪ್ರ.ವಾರ್ತೆ ಕನಕಪುರ ಮೇ11
ಶಾಲಾ ಮಕ್ಕಳು ರಜಾ ದಿನಗಳನ್ನು ಸೃಜನಶೀಲ ಕಲೆ ಕಲಿಯಲು, ಕ್ರಿಯಾಶೀಲತೆ ಬೆಳೆಸಿಕೊಳ್ಳಲು ಬೇಸಿಗೆ ಶಿಬಿರ ಸಹಕಾರಿಯಾಗಿವೆ, ಮಕ್ಕಳಿಗೆ ತಮ್ಮ ಸುಪ್ತ ಪ್ರತಿಭೆ ಹೊರಹೊಮ್ಮಿಸಲು ಯಶಸ್ವಿ ವೇದಿಕೆಯನ್ನು ಶಿಬಿರಗಳು ಕಲ್ಪಿಸಿಕೊಡುತ್ತವೆ ಎಂದು ಆರಕ್ಷಕ ವೃತ ್ತನಿರೀಕ್ಷಕ ಧನಂಜಯ ಹೇಳಿದ್ದಾರೆ.
ಕನಕಪುರದ ಮದರ್ ಥೆರೇಸಾ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ಆಯೋಜಿಸಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಸಂಸ್ಥೆಯ ವ್ಯವಸ್ಥಾಪಕ ಕಾರ್ಯದರ್ಶಿ ಕೆ.ವಿ. ಲಕ್ಷ್ಮೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಯಲ್ಲಿ ಪ್ರಥಮ ಬಾರಿಗೆ ಬೇಸಿಗೆ ಶಿಬಿರ ಆಯೋಜಿಸಿದ್ದು, ಚಿತ್ರಕಲೆ, ಗಾಯನ, ಸಮೂಹ ನೃತ್ಯ, ಕರಾಟೆ, ಯೋಗಾಭ್ಯಾಸ, ಕ್ರಿಯಾಶೀಲ ಬರವಣಿಗೆ, ಓದು, ಈಜು, ಕುದುರೆ ಸವಾರಿ, ಒಳಾಂಗಣ ಕ್ರೀಡೆಗಳು, ಸ್ಪೋಕನ್ ಇಂಗ್ಲೀಷ್ ಮೊದಲಾದವುಗಳ ತರಬೇತಿಯನ್ನು ತಜ್ಞರು ನೀಡಿದ್ದಾರೆ. ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳಿಗೆ ವಿನೂತನ ಅನುಭವವನ್ನು ನೀಡಿದೆ ಎಂದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಎಚ್‌ಡಿಎಫ್‌ಸಿ ಬ್ಯಾಂಕ್ ವ್ಯವಸ್ಥಾಪಕ ಹಿತೇಶ್, ಸಹಾಯಕ ವ್ಯವಸ್ಥಾಪಕ ಪ್ರಶಾಂತ್, ಎಲ್‌ಐಸಿ ಅಧಿಕಾರಿ ಶಶಿಕುಮಾರ್, ಆರಕ್ಷಕ ಉಪನಿರೀಕ್ಷಕ ಗಣೇಶ್ ಆಗಮಿಸಿ ವಿವಿಧ ಸ್ಪರ್ಧೆಗಳಲ್ಲಿ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾದ ಮಕ್ಕಳಿಗೆ ಸ್ಮರಣಿಕೆ ಹಾಗೂ ಪ್ರಶಸ್ತಿಪತ್ರ ವಿತರಿಸಿದರು.