ಮಾವು ಮಾರಾಟ ಪರಿಷೆ ಪ್ರಾರಂಭ
ಕ.ಪ್ರ. ವಾರ್ತೆ ರಾಮನಗರ ಮೇ 11
ನೈಸರ್ಗಿಕವಾಗಿ ಮಾಗಿಸಿದ ರಾಸಾಯನಿಕ ರಹಿತ ಮತ್ತು ರುಚಿಕರ ಮಾವಿನ ಹಣ್ಣುಗಳ ಮಾರಾಟ ಪರಿಷೆ ಆಯೋಜಿಸುವ ಮೂಲಕ ರೈತರಿಗೆ ನೇರ ಮಾರುಕಟ್ಟೆ ಸೌಲಭ್ಯ ಕಲ್ಪಿಸಿರುವ ತೋಟಗಾರಿಕೆ ಇಲಾಖೆಯ ವಿನೂತನ ಪ್ರಯೋಗವನ್ನು ಜಿಪಂ ಅಧ್ಯಕ್ಷ ಕೆ.ಮುದ್ದುರಾಜ್ ಯಾದವ್ ಪ್ರಶಂಸಿಸಿದ್ದಾರೆ.
ನಗರದ ಹೊರವಲಯದಲ್ಲಿರುವ ಜಾನಪದ ಲೋಕದ ಎದುರು ಬೆಂಗಳೂರು- ಮೈಸೂರು ಹೆದ್ದಾರಿ ಮಗ್ಗುಲಲ್ಲಿ ತೋಟಗಾರಿಕೆ ಇಲಾಖೆಯಿಂದ ಆಯೋಜಿಸಿರುವ ರಾಮ್ ಗೋಲ್ಡ್ ಬ್ರ್ಯಾಂಡೆಡ್ ಮಾವು ಮಾರಾಟ ಪರಿಸೆ ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾನ್ಯವಾಗಿ ಖಾಸಗಿ ಮಾವು ಮಾರಾಟಗಾರರು ವಿಷಯುಕ್ತ ರಾಸಾಯನಿಕವಾದ ಕಾರ್ಬೈಡ್ ಬಳಸಿ ಹಣ್ಣುಗಳನ್ನು ಮಾಗಿಸಿ, ಮಾರಾಟ ಮಾಡುತ್ತಾರೆ. ಅಂತಹ ಹಣ್ಣುಗಳು ನೋಡಲು ಅಂದ, ಚೆಂದವಾಗಿರುತ್ತವಷ್ಟೇ. ಅವುಗಳ ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು ಅವರು ಎಚ್ಚರಿಸಿದರು.
ಮಾವು ರೈತರು ನೇರ ಮಾರುಕಟ್ಟೆ ಸೌಲಭ್ಯವಿಲ್ಲದೆ ಪರಿತಪಿಸುತ್ತಿದ್ದರು. ಬೆಳೆದ ಮಾವಿನ ಫಸಲನ್ನು ಅಗ್ಗದ ಬೆಲೆಗೆ ಖರೀದಿಸಿ ದಲ್ಲಾಳಿಗಳು ಮತ್ತು ವರ್ತಕರು ಲಾಭ ಮಾಡಿಕೊಳ್ಳುತ್ತಿದ್ದರು. ಕಳೆದ 3 ವರ್ಷದಿಂದ ತೋಟಗಾರಿಕೆ ಇಲಾಖೆ ಈ ಪರಿಷೆ ಆರಂಭಿಸಿ ರೈತರಿಗೆ ವರದಾನವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ತಂತ್ರಜ್ಞಾನ ಬಳಸಿರಿ: ಮಾವು ಬೆಳೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆಗೆ ತೋಟಗಾರಿಕೆ ಇಲಾಖೆಯು ಭಾರಿ ಮೊತ್ತದ ಸಬ್ಸಿಡಿ ನೀಡುತ್ತಿದೆ. ಮಳೆ ಅಭಾವ ಎದುರಾಗಿರುವ ಇಂತಹ ಸಂದರ್ಭದಲ್ಲಿ ರೈತರು ಹನಿ ನೀರಾವರಿ ಅಳವಡಿಕೆಯ ಮೂಲಕ ನೀರಿನ ಮಿತವ್ಯಯದೊಂದಿಗೆ ಅಧಿಕ ಇಳುವರಿ ಪಡೆಯಬಹುದು ಎಂದು ಮುದ್ದ್ದುರಾಜ್ ಯಾದವ್ ಸಲಹೆ ನೀಡಿದರು.
ಹನಿ ನೀರಾವರಿಗೆ ಶೇ. 80ರಷ್ಟು ಸಬ್ಸಿಡಿ ಇದ್ದರೆ, ಕೃಷಿ ಯಂತ್ರೋಪಕರಣ ಖರೀದಿಸಲು ಶೇ. 50ರಷ್ಟು ರಿಯಾಯಿತಿ ಸೌಲಭ್ಯ ಒದಗಿಸಲಾಗುತ್ತಿದೆ. ಇದನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು. ಮಾವು ಬೇಸಾಯದ ಬಗ್ಗೆ ತೋಟಗಾರಿಕೆ ಅಧಿಕಾರಿಗಳು ಆಗಾಗ್ಗೆ ಸೂಕ್ತ ಮಾಹಿತಿ ಒದಗಿಸುವ ಜತೆಗೆ ತೋಟಗಳಿಗೆ ಭೇಟಿ ನೀಡಿ, ಪರಿಶೀಲಿಸಬೇಕು ಎಂದು ಹೇಳಿದರು.
ನಂ.1 ಆಗಬೇಕು: ಮಾವು ಉತ್ಪಾದನೆಯಲ್ಲಿ ಕರ್ನಾಟಕವು ರಾಷ್ಟ್ರದಲ್ಲೇ ಅಗ್ರಸ್ಥಾನ ಪಡೆದಿದೆ. ರಾಜ್ಯ ಮಟ್ಟದಲ್ಲಿ ಕೋಲಾರ ಮೊದಲ ಸ್ಥಾನದಲ್ಲಿದ್ದು, ನಂತರದ ಸ್ಥಾನ ರಾಮನಗರದ್ದು. ಮುಂದಿನ ದಿನಗಳಲ್ಲಿ ರಾಮನಗರವು ರಾಜ್ಯದ ಮಾವು ಉತ್ಪಾದನೆಯಲ್ಲಿ ನಂ.1 ಸ್ಥಾನಕ್ಕೇರುವಂತಾಗಲಿ ಎಂದು ಜಿಪಂ ಸಿಇಒ ಡಾ.ವೆಂಕಟೇಶ್ ಆಶಿಸಿದರು.
ಮಳೆ ಅಭಾವ, ಪೋಷಕಾಂಶಗಳ ಕೊರತೆಯಿಂದಾಗಿ ಈ ಬಾರಿ ಮಾವು ಉತ್ಪಾದನೆ ಶೇ. 6- 70ರಷ್ಟು ಕುಸಿದಿದೆ. ಹನಿ ನೀರಾವರಿ ಅಳವಡಿಸಿಕೊಂಡು ಉತ್ಪಾದನೆ ಹೆಚ್ಚಳಕ್ಕೆ ರೈತರು ಮುಂದಾಗಬೇಕು. ಮಾವಿನ ಹಣ್ಣಿನಲ್ಲಿ ವಿಟಮಿನ್ ಸಿ, ಐರನ್ ಇರುವುದರಿಂದ ಆರೋಗ್ಯಕ್ಕೆ ಸೂಕ್ತವೆಂದು ಅವರು ಹೇಳಿದರು.
ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ರಘುಕುಮಾರ್, ಜಂಟಿ ಕೃಷಿ ನಿರ್ದೇಶಕ ಅಣ್ಣಯ್ಯ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ.ಬಿ. ಕೃಷ್ಣ, ಅಧಿಕಾರಿಗಳಾದ ರಘು, ರುದ್ರೇಶ್, ನಾಗರಾಜ್, ಗುಣವಂತ್, ರೂಪಶ್ರೀ, ಲತಾ ಭಾಗವಹಿಸಿದ್ದರು.
ಮೋಹಕ ಬಲೆ ಹಾಕಿ: ಮಾವಿನ ಕಾಯಿಗಳು ನಿಂಬೆ ಹಣ್ಣಿನ ಗಾತ್ರವಿರುವಾಗಲೇ ಪ್ರತಿ ಎಕರೆಗೆ 6 ರಿಂದ 8ರಷ್ಟು ಮೋಹಕ ಬಲೆ ಅಳವಡಿಸುವ ಮೂಲಕ ಹೂಜಿ ನೊಣಗಳ ಹಾವಳಿಗೆ ನಿಯಂತ್ರಣ ಹಾಕುವಂತೆ ತೋಟಗಾರಿಕೆ ವಿಜ್ಞಾನಿ ಡಾ.ಮುರಳಿ ಮೋಹನ್ ಸಲಹೆ ನೀಡಿದರು.
ಮಾವು ಪರಿಷೆ ಉದ್ಘಾಟನೆ ಬಳಿಕ ನಡೆದ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಹುಳುಗಳ ನಿಯಂತ್ರಣಕ್ಕೆ ರಾಸಾಯನಿಕ ಸಿಂಪರಣೆಯು ದುಬಾರಿಯಾಗುವ ಜತೆಗೆ ಅದರಿಂದ ಹಣ್ಣುಗಳು ವಿಷಯುಕ್ತವಾಗುತ್ತವೆ ಎಂದು ಎಚ್ಚರಿಸಿದರು.
ರಾಸಾಯನಿಕ ಸಿಂಪರಣೆಗೆ ಕಮ್ಮಿಯೆಂದರೂ 1500 ರಿಂದ 2500 ವರೆಗೆ ವೆಚ್ಚ ತಗುಲುತ್ತದೆ. ಆದರೆ, ಮೋಹಕ ಬಲೆ ಅಳವಡಿಕೆಗೆ ಪ್ರತಿ ಎಕರೆಗೆ ಹೆಚ್ಚೆಂದರೆ 300 ಆಗುತ್ತದೆ. ಮುಂದಿನ ದಿನಗಳಲ್ಲಿ ಇಲಾಖೆ ಮೂಲಕವೇ ಮಾರಾಟ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದರು.
15ಕ್ಕೂ ಅಧಿಕ ಮಳಿಗೆಗಳು: ತೋಟಗಾರಿಕೆ ಇಲಾಖೆಯು ಮಾವು ಬೆಳೆಗಾರರಿಗೆ ನೇರ ಮಾರುಕಟ್ಟೆ ಸೌಲಭ್ಯ ಕಲ್ಪಿಸುವುದಕ್ಕಾಗಿ ಕಳೆದ ಮೂರು ವರ್ಷದಿಂದ ರಾಮ್ ಗೋಲ್ಡ್ ಮಾವು ಪರಿಷೆ ಪ್ರಾರಂಭಿಸಿದೆ. ಜಾನಪದ ಲೋಕದ ಎದುರು 15ಕ್ಕೂ ಹೆಚ್ಚು ಮಳಿಗೆಗಳಲ್ಲಿ ರೈತರು ಮಾವು ಮಾರಾಟ ಪ್ರಾರಂಭಿಸಿದ್ದಾರೆ.
ರಾಮನಗರ ಭಾಗದಲ್ಲಿ ಅಧಿಕವಾಗಿ ಬೆಳೆಯುವ ಬಾದಾಮಿ ಹಣ್ಣುಗಳು ಇಲ್ಲಿ ಹೇರಳವಾಗಿ ದೊರೆಯುತ್ತವೆ. ನಂತರದಲ್ಲಿ ರಸಪುರಿ, ತೋತಾಪುರಿ ಇತರೆ ಹಣ್ಣುಗಳ ಸರದಿ. ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳು ಇಲ್ಲಿವೆ. ರಾಮ್ಗೋಲ್ಡ್ ಲೇಬಲ್ ಹೊಂದಿದ ಪ್ರತಿ ಬಾಕ್ಸ್ಗೆ 10 ಹೆಚ್ಚು ಪಾವತಿಸಬೇಕು.
ಬಾಕ್ಸ್ರಹಿತವಾಗಿ ಹಣ್ಣು ಖರೀದಿಸಿದರೆ ಪ್ರತಿ ಕೆಜಿಗೆ 10 ಕಡಿಮೆ. ಖಾಸಗಿ ಮಾರುಕಟ್ಟೆಗೆ ಹೋಲಿಸಿದರೆ ಇಲ್ಲಿನ ಧಾರಣೆ ಕೊಂಚ ಕಡಿಮೆಯೂ ಹೌದು. ಕಳೆದ ವರ್ಷ ಇಲ್ಲಿ 2 ಕೋಟಿಗಿಂತ ಅಧಿಕ ವಹಿವಾಟು ನಡೆದಿತ್ತು. ಈ ಬಾರಿ ಮಾವು ಉತ್ಪಾದನೆ ಕುಸಿದಿದ್ದು, ವ್ಯಾಪಾರ- ವಹಿವಾಟು ಕುಸಿತವಾಗಿದೆ ಎಂದು ತೋಟಗಾರಿಕೆ ಉಪ ನಿರ್ದೇಶಕ ಡಾ.ಬಿ. ಕೃಷ್ಣ ತಿಳಿಸಿದ್ದಾರೆ.